ADVERTISEMENT

‘ಗುರುಸಿದ್ದರಾಮೇಶ್ವರರ ಆದರ್ಶ ನಮಗೆ ಪ್ರೇರಕ’

ಸಮುದಾಯ ಭವನದ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 3:00 IST
Last Updated 8 ಆಗಸ್ಟ್ 2022, 3:00 IST
ಕಡೂರಿನಲ್ಲಿ ನೊಳಂಬ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಬೆಳ್ಳಿಪ್ರಕಾಶ್ ಉದ್ಘಾಟಿಸಿದರು. ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ ಇದ್ದರು
ಕಡೂರಿನಲ್ಲಿ ನೊಳಂಬ ಸಮಾಜದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಬೆಳ್ಳಿಪ್ರಕಾಶ್ ಉದ್ಘಾಟಿಸಿದರು. ಯಳನಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ ಇದ್ದರು   

ಕಡೂರು: ಗುರುಸಿದ್ದರಾಮೇಶ್ವರರ ಸಿದ್ಧಾಂತವನ್ನೇ ಆದರ್ಶವಾಗಿಟ್ಟು ಕೊಂಡು ತಾಲ್ಲೂಕಿನ ಅಭಿವೃದ್ಧಿಯಲ್ಲಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.

ಕಡೂರಿನಲ್ಲಿ ನೊಳಂಬ ಕೇಂದ್ರ ಸಮಿತಿ, ನೊಳಂಬ ಉಪಸಮಿತಿ ಮತ್ತು ನೊಲಂಬ ವೀರಶೈವ ಲಿಂಗಾಯಿತ ನೌಕರರ ಸಂಘ ಭಾನುವಾರ ಏರ್ಪಡಿಸಿದ್ದ ಗುರುಸಿದ್ದರಾಮೇಶ್ವರ ಸಮುದಾಯ ಭವನದ ಭೂಮಿಪೂಜೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರು 12 ನೇ ಶತಮಾನದಲ್ಲಿ ಯಾವ ಉದ್ದೇಶದಿಂದ ಕ್ರಾಂತಿ ಮಾಡಿದ್ದರೋ, ಆ ಉದ್ದೇಶ ಸಾಕಾರವಾಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಅವಲೋಕನ ಮಾಡಿಕೊಳ್ಳಬೇಕಿದೆ. ಬರುವ ದಿನಗಳಲ್ಲಿ ಯಾವ ಧರ್ಮವನ್ನು ಅನುಸರಿಸುವ ಸಮಾಜ ಕಟ್ಟಬೇಕಿದೆ ಎಂಬುದರ ಚಿಂತನೆ ನಡೆಯಬೇಕಿದೆ. ನೊಳಂಬ ಸಮಾಜದ ಎಲ್ಲ ಚಟುವಟಿಕೆಗಳಿಗೆ ನನ್ನ ನಿರಂತರ ಸಹಕಾರವಿರುತ್ತದೆ. ಮತ್ತೊಮ್ಮೆ ಕಡೂರಿನಲ್ಲಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ನಡೆಸಲು ಉತ್ಸುಕನಾಗಿದ್ದೇನೆ ಎಂದರು.

ADVERTISEMENT

ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಸಿಂಧಿಗೆರೆ ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೊಳಂಬ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಡಾ. ಎಸ್.ಎನ್.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ನೊಳಂಬ ಉಪಸಮಿತಿ ಅಧ್ಯಕ್ಷ ಯತಿರಾಜ್ ಪ್ರಸ್ತಾವಿಕವಾಗಿ ಮಾತನಾಡಿದರು. ಭೈರೇಗೌಡ ಆಶಯ ನುಡಿಗಳನ್ನಾಡಿದರು. ಕೇಂದ್ರ ಸಮಿತಿ ಕಾರ್ಯದರ್ಶಿ ಕಾಮನಕೆರೆ ಶಶಿಧರ್, ಜಿ.ವಿ.ಬಸವರಾಜು, ನೊಳಂಬ ಕೇಂದ್ರ ಸಮಿತಿ ಉಪಾಧ್ಯಕ್ಷ ಸಾದರಳ್ಳಿ ನಟರಾಜು, ಜಂಟಿ ಕಾರ್ಯದರ್ಶಿಗಳಾದ ಒ.ಎಸ್.ಸಿದ್ದರಾಮೇಗೌಡ, ಡಾ.ಎಸ್.ದಿನೇಶ್, ಎನ್.ಬೊಮ್ಮಣ್ಣ, ಕಪಿನೇಗೌಡ, ಲಿಂಗರಾಜು, ಶಿಕ್ಷಕ ಮಲ್ಲಿಕಾರ್ಜುನ್, ಬಿ.ಆರ್.ಭುಜೇಂದ್ರ, ಮೌನೇಶ್, ಮುಖಂಡ ವಿಜಯ ಕುಮಾರ್, ಕೆ.ಬಿ.ಬಸವರಾಜಪ್ಪ ಇದ್ದರು. ಹೆಚ್ಚು ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳನ್ನು ಮತ್ತು ನಿವೃತ್ತ ನೌಕರರನ್ನು ಗೌರವಿಸಲಾಯಿತು.

2014 ರಲ್ಲಿ ಕಡೂರಿನಲ್ಲಿ ನಡೆದ ಸಿದ್ದರಾಮೇಶ್ವರ ಜಯಂತಿ ನೆನಪಿಗಾಗಿ ಕೆ.ಎಂ.ರಸ್ತೆಯಲ್ಲಿ ನೊಳಂಬ ಸಮಾಜದ ಮುಖಂಡರು, ಒಟ್ಟು 26 ಗುಂಟೆ ವಿಸ್ತೀರ್ಣದಲ್ಲಿ ಗುರುಸಿದ್ದರಾಮೇಶ್ವರ ಸಮುದಾಯ ಭವನಕ್ಕೆ ಭಾನುವಾರ ಶಾಸಕ ಬೆಳ್ಳಿಪ್ರಕಾಶ್ ಭೂಮಿ ಪೂಜೆ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.