ADVERTISEMENT

ಅಕ್ರಮವಾಗಿ ಜೆಸಿಬಿ ಹರಾಜು: ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 2:14 IST
Last Updated 22 ಫೆಬ್ರುವರಿ 2026, 2:14 IST
ಗುರುಶಾಂತಪ್ಪ
ಗುರುಶಾಂತಪ್ಪ   

ಚಿಕ್ಕಮಗಳೂರು: ಸಾಲದ ಕಂತು ಪಾವತಿಸಿಲ್ಲ ಎಂಬ ಕಾರಣಕ್ಕೆ ನೋಟಿಸ್ ನೀಡದೆ ಜೆಸಿಬಿ ವಶಕ್ಕೆ ಪಡೆದು ಹರಾಜು ಮಾಡಲಾಗಿದೆ. ಇದರಿಂದ ರೈತನಿಗೆ ಅನ್ಯಾಯವಾಗಿದೆ ಎಂದು ರೈತ ಸಂಘದ ಮುಖಂಡ ಗುರುಶಾಂತಪ್ಪ ಹೇಳಿದರು.

ತಾಲ್ಲೂಕಿನ ಗೌಡನಹಳ್ಳಿ ವಾಸಿ ಮಂಜುನಾಥ್ ಅವರು ಜೆಸಿಬಿ ಕೊಳ್ಳುವ ಉದ್ದೇಶದಿಂದ ನಗರದ ಎಂ.ಜಿ. ರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 2023ರ ಡಿ. 12ರಂದು ₹29 ಲಕ್ಷ ಸಾಲ ಪಡೆದಿದ್ದರು. ಒಟ್ಟು ₹36 ಲಕ್ಷ ಬಂಡವಾಳ ಹೂಡಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಲದ ಕಂತು 58 ತಿಂಗಳು ಇದ್ದು, ಪ್ರತಿ ತಿಂಗಳು ₹65,065 ಪಾವತಿಸಲು ಒಪ್ಪಿಸಿದ್ದರು. ಅದರಂತೆ ಸಾಲದ ಕಂತು ₹17.50 ಲಕ್ಷ ಪಾವತಿಸಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ಕಂತು ತೀರಿಸಲು ಸಾಧ್ಯವಾಗಿಲ್ಲ ಎಂಬ ನೆಪದಲ್ಲಿ ಜೆಸಿಬಿಯನ್ನು 6 ತಿಂಗಳ ಹಿಂದೆಯೇ ಜಪ್ತಿ ಮಾಡಿದ್ದರು.

ADVERTISEMENT

ಬ್ಯಾಂಕಿಗೆ ಹೋಗಿ ವಿಚಾರಿಸಿದರೆ ₹50 ಲಕ್ಷ ಪಾವತಿಸಿರೆ ಜೆಸಿಬಿ ವಾಪಸ್ಸು ಕೊಡುವುದಾಗಿ ತಿಳಿಸಿದ್ದಾರೆ. ಖಾಸಗಿ ಸಾಲ ಪಡೆದು ₹50 ಲಕ್ಷ ಹೊಂದಿಸಿ ಬ್ಯಾಂಕಿಗೆ ಪಾವತಿಸಲು ಮುಂದಾಗಿದ್ದು, ಅಧಿಕಾರಿಗಳು ಜೆಸಿಬಿ ಎಲ್ಲಿದೆ ಎಂಬುದನ್ನು ತಿಳಿಸಿಲ್ಲ ಎಂದು ಹೇಳಿದರು.

ಈಗ ಜೆಸಿಬಿ ಹರಾಜು ಮಾಡಿ ಸಾಲದ ಮೊತ್ತಕ್ಕೆ ಜಮೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಸಾಲ ಮರುಪಾವತಿಗೆ ರೈತ ಸಿದ್ದವಿದ್ದರೂ ಅಧಿಕಾರಿಗಳು ಹರಾಜು ಮಾಡಿದ್ದಾರೆ. ಮಂಜುನಾಥ್ ಕುಟುಂಬಕ್ಕೆ ಜಿಲ್ಲಾಡಳಿತ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ. ಮಹೇಶ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ಕುಮಾರಸ್ವಾಮಿ,  ಮುಖಂಡರಾದ ಯುವರಾಜ್, ರೈತ ಮಂಜುನಾಥ್, ರುದ್ರಮ್ಮ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.