ಬೀರೂರು: ‘ಅಮೃತ ಭಾರತ್ ಯೋಜನೆಯಡಿ ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು ಮತ್ತು ತರೀಕೆರೆ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು’ ಎಂದು ಕೇಂದ್ರ ಜಲ ಶಕ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಬೀರೂರು ರೈಲು ನಿಲ್ದಾಣಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಶನಿವಾರ ಭೇಟಿ ನೀಡಿ, ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೀರೂರು ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರಂ ವಿಸ್ತರಣೆಯ ಬೇಡಿಕೆ, ವಿಐಪಿ ಲಾಂಜ್ ಸ್ಥಾಪನೆಯ ಕೋರಿಕೆ ಇದೆ. ಈ ವಿಷಯವಾಗಿ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು.
ಪ್ರಧಾನ ಮಂತ್ರಿಯವರ ನಿರ್ದೇಶನದಂತೆ ದೇಶದಾದ್ಯಂತ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳನ್ನು ನಾಲ್ಕೈದು ವರ್ಷಗಳಲ್ಲಿ ಸಂಪೂರ್ಣ ಮುಚ್ಚಿ, ಅಲ್ಲಿ ಮೇಲ್ಸೇತುವೆ ಮತ್ತು ಕೆಳ ಸೇತುವೆ ನಿರ್ಮಿಸಲು ಕ್ರಮ ವಹಿಸಲಾಗುವುದು. ಈ ಯೋಜನೆಗೆ ರಾಜ್ಯ ಸರ್ಕಾರ ಹಣ ಭರಿಸಲು ಸಾಧ್ಯವಿಲ್ಲದ ಹಿನ್ನೆಲೆ ಭೂ ಸ್ವಾಧೀನ ಪ್ರಕ್ರಿಯೆಯಿಂದ ಹಿಡಿದು ಎಲ್ಲ ವೆಚ್ಚವನ್ನೂ ಕೇಂದ್ರ ಸರ್ಕಾರವೇ ಭರಿಸಲಿದೆ. ದೇಶ ಕಾಯಲು ರಕ್ಷಣಾ ಪಡೆಗಳಿದ್ದರೆ, ಜನಸಾಮಾನ್ಯರ ಒಳಿತಿಗಾಗಿ ರೈಲ್ವೆ ಇಲಾಖೆ ಕೆಲಸ ಮಾಡುತ್ತಿದ್ದು, ಇಲಾಖೆಯನ್ನು ರಾಜಕೀಯ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಹುದಿನಗಳ ಬೇಡಿಕೆಯಾದ ಚಿಕ್ಕಮಗಳೂರು- ತಿರುಪತಿ ರೈಲಿಗೆ ಜುಲೈ 11ರಂದು ಚಾಲನೆ ನೀಡಲಾಗುವುದು. 36 ವರ್ಷಗಳಿಂದ ನನೆಗುದಿಯಲ್ಲಿದ್ದ ₹43 ಸಾವಿರ ಕೋಟಿ ವೆಚ್ಚದ 11 ಕಾರ್ಯಕ್ರಮಗಳನ್ನು ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಜುಲೈ 12ರಂದು ಉದ್ಘಾಟಿಸಲಾಗುವುದು. ಹತ್ತಾರು ಸಭೆಗಳಲ್ಲಿ ಅಧಿಕಾರಿಗಳೇ ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ತಳ್ಳಿಹಾಕಿದ್ದ ಬೆಂಗಳೂರಿನ ರಾಮೋಹಳ್ಳಿ- ಚಲ್ಲಘಟ್ಟ ಮೇಲ್ಸೇತುವೆ ಮತ್ತು ಕೆಳ ಸೇತುವೆಯನ್ನು ಜುಲೈ 13ಕ್ಕೆ ಲೋಕಾರ್ಪಣೆಗೊಳಿಸಿ, ವಾಹನ ಸವಾರರ ಸಂಕಷ್ಟಕ್ಕೆ ಇತಿಶ್ರೀ ಹಾಡಲಾಗುವುದು ಎಂದು ಸಚಿವ ಸೋಮಣ್ಣ ಮಾಹಿತಿ ನೀಡಿದರು.
ದೇಶದಲ್ಲಿ ರೈಲ್ವೆ ಇಲಾಖೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರ ಮಾರ್ಗದರ್ಶನದಲ್ಲಿ ಪ್ರಗತಿಯತ್ತ ಸಾಗುತ್ತಿದೆ. ಬೆಂಗಳೂರು ಮಹಾನಗರದ 100 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ನಿಲ್ದಾಣಗಳಿಗೆ ತಲುಪಲು ಇರುವ ಅಡೆತಡೆಗಳನ್ನು ಪರಿಹರಿಸಲು ಕಳೆದ ವಾರ ಅಧಿಕಾರಿಗಳ ಸಭೆ ನಡೆಸಿ, ಸರ್ವೆ ಕಾರ್ಯ ಆರಂಭಿಸುವಂತೆ, ಮಾಸ್ಟರ್‌ಪ್ಲಾನ್ ತಯಾರಿಸುವಂತೆ ಸೂಚಿಸಲಾಗಿದೆ. ವರದಿಯ ನಂತರ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಹುಬ್ಬಳ್ಳಿ- ಚಿಕ್ಕಜಾಜೂರು ಮೆಮು ರೈಲ್‌ನ್ನು ಚಿಕ್ಕಮಗಳೂರಿಗೆ ವಿಸ್ತರಿಸುವಂತೆ ಮತ್ತು ಹರಿಹರ-ಮೈಸೂರು ಇಂಟರ್‌ಸಿಟಿ ಹೊಸರೈಲು ಆರಂಭಿಸುವಂತೆ, ಬೀರೂರು ನಿಲ್ದಾಣದಲ್ಲಿ ಮೊದಲ ಮಹಡಿಯಲ್ಲಿರುವ ಆರ್‌ಪಿಎಫ್ ಠಾಣೆಯನ್ನು ಪ್ಲಾಟ್‌ಫಾರಂಗೆ ಸ್ಥಳಾಂತರಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. ಮನವಿಗಳ ಕುರಿತು ಶೀಘ್ರವಾಗಿ ಕ್ರಮ ವಹಿಸುವಂತೆ ಮೈಸೂರು ವಿಭಾಗದ ಎಡಿಆರ್‌ಎಂಗೆ ಸಚಿವರು ಸೂಚಿಸಿದರು.
ಸಚಿವರ ಭೇಟಿ ಸಮಯದಲ್ಲಿ ಮೈಸೂರು ವಿಭಾಗದ ಎಡಿಆರ್‌ಎಂ ವಿನಾಯಕ್ ನಾಯಕ್, ಎಸಿಎಂ ವಿನೋದ್, ಡಿಸಿಎಂ ಗಿರೀಶ್, ಎಡಿಎನ್ ಬಷೀರ್, ಕಮರ್ಷಿಯಲ್ ಇನ್‌ಸ್ಪೆಕ್ಟರ್ ಮಂಜುನಾಥ್, ಬೀರೂರು ನಿಲ್ದಾಣದ ಅಧಿಕಾರಿಗಳು ಮತ್ತು ಸಿಬ್ಬಂದಿ, ಕಡೂರು ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ, ರೈಲ್ವೆ ಬಳಕೆದಾರರ ಸಮಿತಿಯ ವಿನಯ್, ಮುಖಂಡರಾದ ಬೀರೂರು ದೇವರಾಜ್, ಸವಿತಾ ರಮೇಶ್, ಮಾರ್ಗದ ಮಧು, ಶಾಮಿಯಾನಾ ಚಂದ್ರು ಇದ್ದರು.
ಬಳಿಕ, ಸಚಿವರು ಖಾಸಗಿ ಭೇಟಿಯಲ್ಲಿ ಬೀರೂರಿನ ಮಾಜಿ ಶಾಸಕ ಕೆ.ಬಿ.ಮಲ್ಲಿಕಾರ್ಜುನ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದರು. ನಂತರ ಅಧಿಕಾರಿಗಳೊಂದಿಗೆ ಬೀರೂರಿನ ಸಂತೆ ಸಮೀಪದಿಂದ ಕ್ಯಾಂಪ್ ಬಡಾವಣೆಗೆ ತೆರಳಲು ಅನುವಾಗುವಂತೆ ಅಂಡರ್ ಪಾಸ್ ನಿರ್ಮಿಸಲು ಸ್ಥಳ ಪರಿಶೀಲನೆ ನಡೆಸಿದರು.
ಮೊದಲು ದೇಶ ನಂತರ ಪಕ್ಷ ಬಿಜೆಪಿ
ರಾಜ್ಯಾಧ್ಯಕ್ಷರ ಹುದ್ದೆಗೆ ನಿಮ್ಮ ಹೆಸರು ಕೇಳಿ ಬರುತ್ತಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ ವಿ.ಸೋಮಣ್ಣ ಮೊದಲು ದೇಶ ನಂತರ ಪಕ್ಷ. ನಾನೀಗ ಕೇಂದ್ರದಲ್ಲಿ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ ರಾಜ್ಯದಲ್ಲಿ ಈಗಾಗಲೇ ಅಧ್ಯಕ್ಷರು ಇದ್ದಾರೆ. ಪಕ್ಷವೆಂದರೆ ತಾಯಿಯಂತೆ ಅಂತಹ ಸಂದರ್ಭ ಬಂದಾಗ ಪಕ್ಷದ ಹಿರಿಯ ನಾಯಕರು ವಿಶೇಷವಾಗಿ ರಾಜ್ಯ ಉಸ್ತುವಾರಿ ಬಿ.ಎಲ್.ಸಂತೋಷ್ ದೂರದೃಷ್ಟಿಯಿಂದ ಕ್ರಮ ವಹಿಸುತ್ತಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.