ADVERTISEMENT

ಕಳಸ: ಓಕುಳಿಯಲ್ಲಿ ಮಿಂದೆದ್ದ ಜೈನ ಧರ್ಮೀಯರು

​ಪ್ರಜಾವಾಣಿ ವಾರ್ತೆ
Published 23 ಮೇ 2025, 12:38 IST
Last Updated 23 ಮೇ 2025, 12:38 IST
ಕಳಸದ ಚಂದ್ರನಾಥ ಬಸದಿಯ ಎದುರು ಭಕ್ತರು ಗುರುವಾರ ರಾತ್ರಿ ಸಡಗರದಿಂದ ನೃತ್ಯ ಮಾಡಿದರು
ಕಳಸದ ಚಂದ್ರನಾಥ ಬಸದಿಯ ಎದುರು ಭಕ್ತರು ಗುರುವಾರ ರಾತ್ರಿ ಸಡಗರದಿಂದ ನೃತ್ಯ ಮಾಡಿದರು   

ಕಳಸ: ಪಟ್ಟಣದಲ್ಲಿ ಸುರಿಮಳೆ ನಡುವೆಯೂ ಗುರುವಾರ ರಾತ್ರಿ 12ರವರೆಗೆ ನಡೆದ ಓಕುಳಿಯಲ್ಲಿ ಜೈನ ಧರ್ಮೀಯರು ಮಿಂದೆದ್ದರು.

5 ದಿನಗಳ ಕಾಲ ಚಂದ್ರನಾಥ ಮತ್ತು ಪಾರ್ಶ್ವನಾಥ ಸ್ವಾಮಿ ಬಸದಿಯ ಪಂಚಕಲ್ಯಾಣ ಸಂಪನ್ನಗೊಂಡ ಬಳಿಕ, ಕಳಸ ಸೀಮೆಯ ಜೈನರು ಅರಿಶಿನದ ನೀರನ್ನು ಪರಸ್ಪರರ ಮೈಮೇಲೆ ಎರಚಿಕೊಂಡು ಓಕುಳಿಯಾಡಿದರು.

ಚಂದ್ರನಾಥ ಮತ್ತು ಪಾರ್ಶ್ವನಾಥ ತೀರ್ಥಂಕರರ ಪ್ರತಿಷ್ಠೆ ಬಳಿಕ, ಅವರ ನಿರ್ವಾಣ ಕಲ್ಯಾಣ ಮತ್ತು ಮೋಕ್ಷದ ಕಲ್ಪನೆಯನ್ನು ಮುನಿ ಶ್ರೀಗಳಾದ ಗುಣಭದ್ರ ನಂದಿ ಮತ್ತು ಪ್ರಸಂಗಸಾಗರ್ ಅನಾವರಣಗೊಳಿಸಿದರು. ತೀರ್ಥಂಕರರಾಗುವ ಮುನ್ನ ಚಂದ್ರನಾಥ ಮತ್ತು ಪಾರ್ಶ್ವನಾಥರ ದೇಹವು ಕರ್ಪೂರದಂತೆ ಕರಗಿ ಅರಿಶಿನ ಮಾತ್ರ ಉಳಿಯುವ ಬಗ್ಗೆ ಭಕ್ತರು ಪುಳಕಗೊಂಡರು.

ADVERTISEMENT

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಮಠಾಧೀಶರು ಪಂಚಕಲ್ಯಾಣದಲ್ಲಿ ಭಾಗಿಯಾಗಿ ಪಾಂಡಿತ್ಯ ತೋರಿದರು. ವಿವಿಧ ಕ್ಷೇತ್ರಗಳ ಗಣ್ಯರನ್ನು ಗೌರವಿಸಲಾಯಿತು. ಸದಭಿರುಚಿಯ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಂಡವು. ಭಕ್ತರು ಶಿಖರ ಏರಿಸುವ ಮತ್ತು ಅಭಿಷೇಕ ಮಾಡುವ ಅವಕಾಶವನ್ನು ಹರಾಜಿನಲ್ಲಿ ಪೈಪೋಟಿ ಮೂಲಕ ಪಡೆದುಕೊಂಡರು.

ಎರಡೂ ಬಸದಿಗಳಲ್ಲಿ ನಡೆದ 1008 ಕಳಸಗಳ ಜಲ ಮತ್ತು ಹಾಲು, ಮೊಸರು, ಎಳನೀರು, ಕಬ್ಬಿನ ಹಾಲು, ಬೆಲ್ಲ, ಸಕ್ಕರೆ, ಬೇಳೆಗಳು, ಗಂಧ, ಚಂದನ, ಅಭಿಷೇಕ, ಅರಿಶಿನ, ಅಕ್ಕಿಹಿಟ್ಟಿನ ಅಭಿಷೇಕವನ್ನು ಭಕ್ತರು ಕಣ್ತುಂಬಿಕೊಂಡರು. ಹೊಸ ಬಸದಿಗಳಲ್ಲಿ ಮೊದಲ ಮಹಾಮಂಗಳಾರತಿ ನಡೆಯಿತು.

ಪಂಚಕಲ್ಯಾಣದ ವಿವಿಧ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ಕಾರ್ಕಳ ತಾಲ್ಲೂಕಿನ ಪುರೋಹಿತರ ತಂಡ ಮತ್ತು ಬಾಣಸಿಗರು ಸೈ ಎನಿಸಿಕೊಂಡರು. ಎಲ್ಲ ಧರ್ಮೀಯರು ಬಸದಿ ಪರಿಸರದಲ್ಲಿ ನೆರೆದು ಸರ್ವಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾದರು.

ಕಳಸದ ಚಂದ್ರನಾಥ ಬಸದಿಯಲ್ಲಿ ಪಂಚಕಲ್ಯಾಣ ಪೂರ್ಣಗೊಂಡ ನಂತರ ಗಂಧಾಭಿಷೇಕ ನೆರವೇರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.