ADVERTISEMENT

ಜಯಪುರ ನಾಡಕಚೇರಿ ಒತ್ತುವರಿ ಜಾಗ ತೆರವು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 6:12 IST
Last Updated 18 ಡಿಸೆಂಬರ್ 2025, 6:12 IST
ಬಾಳೆಹೊನ್ನೂರು ಸಮೀಪದ ಜಯಪುರದಲ್ಲಿ ನಾಡಕಚೇರಿ ಜಾಗ ಒತ್ತುವರಿಯನ್ನು ಚಿಕ್ಕಮಗಳೂರಿನ ಉಪ ವಿಭಾಗಾಧಿಕಾರಿ ಸುದರ್ಶನ್ ಹಾಗೂ ಕೊಪ್ಪ ತಹಶೀಲ್ದಾರ್ ಲಿಖಿತಾ ಮೋಹನ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು 
ಬಾಳೆಹೊನ್ನೂರು ಸಮೀಪದ ಜಯಪುರದಲ್ಲಿ ನಾಡಕಚೇರಿ ಜಾಗ ಒತ್ತುವರಿಯನ್ನು ಚಿಕ್ಕಮಗಳೂರಿನ ಉಪ ವಿಭಾಗಾಧಿಕಾರಿ ಸುದರ್ಶನ್ ಹಾಗೂ ಕೊಪ್ಪ ತಹಶೀಲ್ದಾರ್ ಲಿಖಿತಾ ಮೋಹನ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು    

ಜಯಪುರ (ಬಾಳೆಹೊನ್ನೂರು): ನೂತನ ನಾಡ ಕಚೇರಿ ನಿರ್ಮಾಣಕ್ಕೆ ಮೀಸಲಿಟ್ಟ ಜಾಗ ಒತ್ತುವರಿಯಾಗಿದ್ದನ್ನು ಉಪವಿಭಾಗಾಧಿಕಾರಿ ಸುದರ್ಶನ್ ಹಾಗೂ ಕೊಪ್ಪ ತಹಶೀಲ್ದಾರ್ ಲಿಖಿತಾ ಮೋಹನ್ ನೇತೃತ್ವದಲ್ಲಿ ಪೊಲೀಸರ ಬಿಗಿ ಬಂದೂಬಸ್ತ್‌ನೊಂದಿಗೆ ಬುಧವಾರ ತೆರವು ಮಾಡಲಾಯಿತು.

ಉದ್ದೇಶಿತ ನಾಡಕಚೇರಿ ಜಾಗವನ್ನು ಪಟೇಲರು ಮತ್ತು ಶ್ಯಾನುಭೋಗರ ಗ್ರಾಮಾಧಿಕಾರಿಗಳ ಸಂಘ ಉಚಿತವಾಗಿ ನೀಡಿದೆ. ಸರ್ವೇ ನಂ.28ರಲ್ಲಿ 100x80 ಉದ್ದಳತೆ ಹೊಂದಿರುವ 7.5 ಗುಂಟೆಯಲ್ಲಿ ಪ್ರಸ್ತುತ 4.5 ಗುಂಟೆ ಜಾಗದಲ್ಲಿ ನಾಡಕಚೇರಿ ನಿರ್ಮಾಣವಾಗುತ್ತಿದ್ದು, ಉಳಿದ ಮೂರು ಗುಂಟೆ ಒತ್ತುವರಿಯಾಗಿದ್ದು ಅದನ್ನು ಬಿಡಿಸಿಕೊಳ್ಳಲು ತಾಲ್ಲೂಕು ಆಡಳಿತ ಮುಂದಾಗಿದ್ದು, ಕಳೆದ ವಾರ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದರು.

ಚರ್ಚ್‌ಗೆ ತೆರಳುವ ರಸ್ತೆಗೆ ಹೊಂದಿಕೊಂಡಿರುವ ಜಾಗದಲ್ಲಿ ಹಾಗೂ ಪೊಲೀಸ್ ಠಾಣೆಗೆ ತೆರಳುವ ಭಾಗದಲ್ಲಿ ನಿರ್ಮಿಸಿದ್ದ ಕಾಂಪೌಂಡ್ ಅನ್ನು ಜೆಸಿಬಿ ಬಳಸಿ ತೆರವು ಮಾಡಲಾಗಿದೆ.

ADVERTISEMENT

‘ನ್ಯಾಯಾಲಯದ ಆದೇಶ ಉಲ್ಲಂಘನೆ’: ಜಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೊಪ್ಪ ನ್ಯಾಯಾಲಯ ಆದೇಶ ನೀಡಿತ್ತು. ಕೊಪ್ಪ ತಹಶೀಲ್ದಾರ್ ಕಚೇರಿಗೆ ಆದೇಶ ಪ್ರತಿ ನೀಡಿದ್ದರೂ ನ್ಯಾಯಾಲಯದ ಆದೇಶ ಪಾಲಿಸದೆ ಉಲ್ಲಂಘನೆ ಮಾಡಿದ್ದಾರೆ ಎಂದು ಜಾಗದ ಮಾಲೀಕ ಗಜೇಂದ್ರ ಆರೋಪಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್‌ ಏರ್ಪಡಿಸಲಾಗಿತ್ತು. ಕಂದಾಯ ನಿರೀಕ್ಷಕ ವಿನಯ್, ಠಾಣಾಧಿಕಾರಿ ಅಂಬರೀಷ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.