ADVERTISEMENT

ಚಿಕ್ಕಮಗಳೂರು | ಜಂಟಿ ಸರ್ವೆಗೆ ರೋವರ್ ಬಳಕೆಗೆ ತಯಾರಿ

ಅರಣ್ಯ– ಕಂದಾಯ ಭೂಮಿ ಗೊಂದಲ ನಿವಾರಣೆಗೆ ಕ್ರಮ

ವಿಜಯಕುಮಾರ್ ಎಸ್.ಕೆ.
Published 20 ಜನವರಿ 2026, 2:46 IST
Last Updated 20 ಜನವರಿ 2026, 2:46 IST
<div class="paragraphs"><p>‌ಸಾಂದರ್ಭಿಕ ಚಿತ್ರ</p></div>

‌ಸಾಂದರ್ಭಿಕ ಚಿತ್ರ

   

ಚಿಕ್ಕಮಗಳೂರು: ಹಲವು ವರ್ಷಗಳಿಂದ ಕಗ್ಗಂಟಾಗಿ ಉಳಿದಿರುವ ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ಪರಿಹಾರಕ್ಕೆ ರೋವರ್ ಮತ್ತು ಜಿಪಿಎಸ್‌ ಆಧರಿತ ಸರ್ವೆ ನಡೆಸಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ.

ಊರೇ ಕಾಡು, ಕಾಡೇ ಊರು, ಅದೇ ಕಂದಾಯ ಭೂಮಿ, ಅದೇ ಜಿಲ್ಲಾ ಅರಣ್ಯ, ಅದೇ ಸೆಕ್ಷನ್ –4 ಜಾರಿಗೊಳಿಸಿರುವ ಸೆರ್ವೆ ನಂಬರ್, ಅದೇ ಪರಿಭಾವಿತ ಅರಣ್ಯ. ಹೀಗೆ ಹಲವು ರೀತಿಯ ಗೊಂದಲಗಳಲ್ಲಿ ಕಂದಾಯ ಭೂಮಿ ಮತ್ತು ಅರಣ್ಯ ಭೂಮಿಗಳಿವೆ.

ADVERTISEMENT

ಒಂದೇ ಸರ್ವೆ ನಂಬರ್, ಒಂದೇ ಜಾಗಕ್ಕೆ ಐದಾರು ರೀತಿಯ ದಾಖಲೆಗಳು ಸೃಷ್ಟಿಯಾಗಿವೆ. ಅರಣ್ಯ ಮತ್ತು ಕಂದಾಯ ಭೂಮಿ ಗೊಂದಲ ಪರಿಹಾರಕ್ಕೆ ಜಂಟಿ ಸರ್ವೆ ಕಾರ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಆರಂಭಿಸಿದ್ದಾರೆ. ಸರ್ವೆ ನಂಬರ್ ಆಧರಿಸಿ ಪರಿಶೀಲನೆ ಆರಂಭಿಸಿದಾಗ ಗೊಂದಲಗಳ ಸರಮಾಲೆಯೇ ತೆರೆದುಕೊಂಡಿವೆ.

ನಿರ್ದಿಷ್ಟ ಸರ್ವೆ ನಂಬರ್‌ನಲ್ಲಿ 50 ಎಕರೆ ಜಾಗವಿದ್ದರೆ ಅದಕ್ಕೆ ಐದಾರು ರೀತಿಯ ದಾಖಲೆಗಳು ಸೃಷ್ಟಿಯಾಗಿವೆ. ಭೂಮಿಗೆ ಸಂಬಂಧಿಸಿದ ಎಲ್ಲರ ಬಳಿ ದಾಖಲೆಗಳಿವೆ. ಆದರೆ, ಜಾಗ ಯಾವುದು, ಗಡಿ ಯಾವುದು ಎಂಬುದು ಗೊತ್ತಿಲ್ಲ. ಈ ಗೊಂದಲ ಬಿಡಿಸುವ ಹರಸಾಹಸದ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಸಾವಿರಾರು ಎಕರೆ ಜಾಗವನ್ನು ಸರ್ವೆ ಮಾಡಲು ಆಧುನಿಕ ತಂತ್ರಜ್ಞಾನ ಬಳಸಲು ತಯಾರಿ ನಡೆಸಿದೆ.

ರೋವರ್ ಸರ್ವೆ ಹೇಗೆ: ಜಮೀನು ಸರ್ವೆ ನಡೆಸುವಾಗ ಸಾಮಾನ್ಯವಾಗಿ ಕಬ್ಬಿಣದ ಚೈನ್‌ಗಳನ್ನು ಬಳಸಲಾಗುತ್ತದೆ. ಒಂದು ಎಕರೆ ಜಮೀನು ಅಳೆಯಲು ಗಂಟೆಗೂ ಹೆಚ್ಚು ಕಾಲ ಸಮಯ ಬೇಕಾಗುತ್ತದೆ. ಅಲ್ಲದೇ ಇದು ಸವಾಲಿನ ಕೆಲಸವೂ ಕೂಡ.

ಗುಡ್ಡಗಾಡು, ಕೆರೆ, ಅರಣ್ಯ ಪ್ರದೇಶಗಳಲ್ಲಿ ಸರ್ವೆ ಕಾರ್ಯ ಇನ್ನೂ ಕ್ಲಿಷ್ಟಕರ. ಈಗ ರೋವರ್ ಬಳಕೆಯಿಂದ ಇದು ಸುಲಭವಾಗಲಿದೆ. ರೋವರ್ ಯಂತ್ರ 800 ಗ್ರಾಂ ತೂಕ ಇದ್ದು, ಕೊಂಡೊಯ್ಯುವುದು ಸುಲಭ. ಜಾಗದ ದಾಖಲೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರೆ ನಿಖರವಾಗಿ ಅಳತೆ ಮಾಡಲಿದೆ.

ರಾಜ್ಯದಲ್ಲಿ 49 ಕಂಟಿನ್ಯೂಸ್ಲಿ ಆಪರೇಟಿಂಗ್ ರೆಫರೆನ್ಸ್ ಸ್ಟೇಷನ್‌ಗಳನ್ನು (ಸಿಒಆರ್‌ಎಸ್) ಸರ್ವೆ ಆಫ್ ಇಂಡಿಯಾ ಸ್ಥಾಪನೆ ಮಾಡಿದೆ. ಇದರೊಂದಿಗೆ ರೋವರ್ ಸಂಪರ್ಕ ಕಲ್ಪಿಸಿ ಜಮೀನು ಸರ್ವೆ ನಡೆಸಿದಾಗ ಗಡಿ ಗುರುತು ಮಾಡಿ ಟ್ಯಾಬ್‌ಗೆ ಸಂಪರ್ಕ ನೀಡಲಿದೆ. ಹತ್ತು ನಿಮಿಷದಲ್ಲಿ ನಕ್ಷೆ ಸಿದ್ಧವಾಗುತ್ತದೆ. ಸ್ಥಳದಲ್ಲಿಯೇ ಸಿಬ್ಬಂದಿ ಗಡಿ ಗುರುತು ಮಾಡುವ ವಿಧಾನ ಇದಾಗಿದೆ ಎಂದು ಭೂದಾಖಲೆಗಳ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.