ಕಡೂರು: ‘ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮತ್ತು ಸಮಾಜಕ್ಕೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ನಿರ್ವಹಿಸಿದ್ದರಿಂದ ಪತ್ರಿಕಾ ರಂಗವು ವ್ಯವಸ್ಥೆಯ ನಾಲ್ಕನೇ ಅಂಗವಾಗಿ ಗುರುತಿಸಲ್ಪಟ್ಟಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಯುನೈಟೆಡ್ ವರ್ಕಿಂಗ್ ಜರ್ನಲಿಸ್ಟ್ ಅಸೋಸಿಯೇಷನ್ ಮತ್ತು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಪತ್ರಿಕಾ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭ’ ಉದ್ಘಾಟಿಸಿ ಅವರು ಮಾತನಾಡಿದರು.
‘ಪತ್ರಕರ್ತರ ಸಮುದಾಯಕ್ಕೆ ಮುಕುಟಪ್ರಾಯರಾದವರು ಡಿವಿಜಿ. ಅವರು ಹುಟ್ಟುಹಾಕಿದ ಸಂಘಟನೆ ಇಂದು ಬೆಳೆದು ನಿಂತಿದೆ. ಸಮಾಜಕ್ಕೆ ಕೈಗನ್ನಡಿಯಾಗಿ ಕೆಲಸ ಮಾಡುವ ಪತ್ರಿಕಾರಂಗ ಪ್ರಜಾಪ್ರಭುತ್ವಕ್ಕೆ ಚಾಟಿ ಬೀಸುವುದನ್ನೂ ಮರೆತಿಲ್ಲ. ಆದರೂ ಪತ್ರಕರ್ತರು ತಮ್ಮ ಸೌಲಭ್ಯಗಳಿಗಾಗಿ ಯಾಚಿಸುವುದು ನಿಂತಿಲ್ಲ ಎನ್ನುವುದು ವಿಪರ್ಯಾಸ. ಪತ್ರಕರ್ತರ ಕ್ಷೇಮನಿಧಿ ಸ್ಥಾಪನೆಗೆ ಸರ್ಕಾರವನ್ನು ಸದನದಲ್ಲಿ ಒತ್ತಾಯಿಸುವುದಾಗಿ’ ತಿಳಿಸಿದರು.
ಜಿಲ್ಲಾ ಮಟ್ಟದಲ್ಲಿ ಗ್ರಾಮೀಣ ಪತ್ರಕರ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಸ್ಥಿತಿ ಇದೆ. ವೇತನ, ಸಂಪನ್ಮೂಲ ಕೊರತೆಯಿಂದ ಪತ್ರಿಕೋದ್ಯಮ ಅಡ್ಡದಾರಿ ಹಿಡಿಯುತ್ತಿದ್ದು, ಸಮಾಜದ ಒಳಿತಿಗಾಗಿ ನಾವು ನೈತಿಕತೆ ಉಳಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಪತ್ರಿಕೆಗಳನ್ನು ಕೊಂಡು ಓದಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ, ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಮಾತನಾಡಿದರು. ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಸಾಧಕರಿಗೆ ಸನ್ಮಾನಿಸಿದರು. ಕೆ.ಜಯಕುಮಾರ್, ಬೀರೂರು ಪುರಸಭೆ ಮಾಜಿ ಅಧ್ಯಕ್ಷೆ ವನಿತಾ ಮಧು, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಜಿ.ಲೋಕೇಶಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಎಚ್.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾದ ಕೆ.ವಿ.ವಾಸು, ಜಿನೇಶ್ ಇರ್ವತ್ತೂರು, ಲೋಕೇಶಪ್ಪ, ಪ್ರಕಾಶ್, ಎಂ.ರಾಜು, ಕೆ.ಎಸ್.ಸೋಮಶೇಖರ್, ಭರತ್, ಪ್ರಸನ್ನಕುಮಾರ್, ಗಿರೀಶ್, ಆನಂದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.