ADVERTISEMENT

ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಭೂಮಿಪೂಜೆ

ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ಸೇವೆ ಲಭ್ಯವಾಗಲಿ: ಆನಂದ್

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 6:27 IST
Last Updated 9 ಜುಲೈ 2025, 6:27 IST
ಚಿಕ್ಕಂಗಳ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣಕ್ಕೆ ಶಾಸಕ ಆನಂದ್ ಭೂಮಿ ಪೂಜೆ ನೆರವೇರಿಸಿ ನಾಮಫಲಕ ಅನಾವರಣಗೊಳಿಸಿದರು
ಚಿಕ್ಕಂಗಳ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣಕ್ಕೆ ಶಾಸಕ ಆನಂದ್ ಭೂಮಿ ಪೂಜೆ ನೆರವೇರಿಸಿ ನಾಮಫಲಕ ಅನಾವರಣಗೊಳಿಸಿದರು   

ಕಡೂರು: ‘ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ಸೇವೆ ಲಭ್ಯವಾದರೆ ಜನರು ನಗರ ಪ್ರದೇಶಗಳಿಗೆ ಅಲೆಯುವುದು ತಪ್ಪುತ‌್ತದೆ. ಆದ್ದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಲಾಗುವುದು’ ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ತಾಲ್ಲೂಕಿನ ಚಿಕ್ಕಂಗಳ ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಚಿಕ್ಕಂಗಳ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿದ್ದ ₹65 ಲಕ್ಷ ಅನುದಾನದ ಆಯುಷ್ಮಾನ್ ಆರೋಗ್ಯ ಮಂದಿರ ನಿರ್ಮಾಣಕ್ಕೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಚಿಕ್ಕಂಗಳ, ಎಮ್ಮೆದೊಡ್ಡಿ ಭಾಗಗಳಲ್ಲಿ ಹಲವಾರು ಸಣ್ಣ ಗ್ರಾಮಗಳಿದ್ದು, ಕೂಲಿ ಕಾರ್ಮಿಕರು, ಬಡವರೇ ಅಧಿಕ ವಾಸವಿದ್ದಾರೆ. ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳಿಗೂ ಇಲ್ಲಿನ ಜನರು ಪಟ್ಟಣಗಳಿಗೆ ಹೋಗುವುದನ್ನು ತಪ್ಪಿಸಲು ಇಲ್ಲಿ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಆಯ್ಕೆ ಮಾಡಿದ್ದು, ಸುಸಜ್ಜಿತ ಕಟ್ಟಡ ಶೀಘ್ರ  ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ADVERTISEMENT

ಶಾಸಕನಾದ ಬಳಿಕ ಆರೋಗ್ಯ ಕ್ಷೇತ್ರದ ಸೌಲಭ್ಯಗಳ ಉನ್ನತೀಕರಣಕ್ಕೆ ಒತ್ತು ನೀಡಿದ್ದು, ಕಡೂರು ಸಾರ್ವಜನಿಕ ಆಸ್ಪತ್ರೆ ಮೂಲಸೌಕರ್ಯಕ್ಕೆ ಮೊದಲ ಆದ್ಯತೆ ನೀಡಿದ್ದೇನೆ. ಆಂಬುಲೆನ್ಸ್, ಹೈಟೆಕ್ ಶೌಚಾಲಯ ನಿರ್ಮಾಣ, ಸ್ಪೆಷಲ್ ವಾರ್ಡ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಬಡವರಿಗೆ ಉತ್ತಮ ಚಿಕಿತ್ಸೆ ದೊರೆಯಬೇಕು ಎನ್ನುವುದು ನಮ್ಮ ಕಾಳಜಿ ಎಂದರು.

ಚಿಕ್ಕಂಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ ₹60 ಲಕ್ಷ ನೀಡಿದ್ದು, ರಸ್ತೆ, ಚರಂಡಿ, ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಿದೆ. ಇನ್ನೂ ಅನೇಕ ಬೇಡಿಕೆಗಳನ್ನು ಅಧ್ಯಕ್ಷರು ಕೋರಿದ್ದು, ಆದ್ಯತೆ ಮೇರೆಗೆ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದರು.

ಕೋವಿಡ್ ಸಂಕಷ್ಟ ಕಾಲದಿಂದ ಇಲ್ಲಿವರೆಗೆ ಉತ್ತಮ ಸೇವೆ ನೀಡಿರುವ ತಾಲ್ಲೂಕು ವೈದ್ಯಾಧಿಕಾರಿ ಡಾ.ರವಿಕುಮಾರ್ ಅವರು ಮಂಗಳೂರಿಗೆ ವರ್ಗವಾಗಿದ್ದಾರೆ. ಇಂತಹ ವೈದ್ಯರ ಸೇವೆ ಕಳೆದುಕೊಳ್ಳಲು ಬೇಸರವಾಗುತ್ತದೆ ಎಂದರು.

ಚಿಕ್ಕಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಎಂ. ನಾಯ್ಕ ಮಾತನಾಡಿದರು. ಉಪಾಧ್ಯಕ್ಷೆ ಜಯಬಾಯಿ, ಸದಸ್ಯರಾದ ಲತಾ ಹರೀಶ್, ಎ.ಸಿ. ಷಡಾಕ್ಷರಿ, ಸಿ.ಜಿ. ಪ್ರಕಾಶ್, ಕೆ. ಸುನೀತಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲೋಲಾಕ್ಷಿ ಬಾಯಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್, ಡಾ.ಪ್ರಿಯಾಂಕ, ಡಾ.ತೇಜಸ್, ಎಂಜಿನಿಯರ್ ರಶ್ಮಿ, ಮುಖ್ಯಶಿಕ್ಷಕಿ ಲೀಲಾವತಿ, ಗೌರಮ್ಮ, ಕೆರೆ ಸಂಘದ ಅಧ್ಯಕ್ಷ ಸಗಣಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.