ADVERTISEMENT

ಕಳಸ: ಅಡಿಕೆ ಮರಗಳಿಗೆ ವಿಚಿತ್ರ ರೋಗಬಾಧೆ

ಕೆಂಬಣ್ಣಕ್ಕೆ ತಿರುಗಿದ ಅಡಿಕೆ ಫಸಲು– ಆತಂಕದಲ್ಲಿ ಮಲೆನಾಡಿನ ಬೆಳೆಗಾರರು

ರವಿ ಕೆಳಂಗಡಿ
Published 5 ಅಕ್ಟೋಬರ್ 2020, 19:30 IST
Last Updated 5 ಅಕ್ಟೋಬರ್ 2020, 19:30 IST
ಸಂಸೆಯಲ್ಲಿ ಅಡಿಕೆ ತೋಟಕ್ಕೆ ವಿಚಿತ್ರ ರೋಗ ತಗುಲಿ ಎಲೆಗಳೆಲ್ಲ ಬಾಡಿವೆ.
ಸಂಸೆಯಲ್ಲಿ ಅಡಿಕೆ ತೋಟಕ್ಕೆ ವಿಚಿತ್ರ ರೋಗ ತಗುಲಿ ಎಲೆಗಳೆಲ್ಲ ಬಾಡಿವೆ.   

ಕಳಸ: ಇಲ್ಲಿಗೆ ಸಮೀಪದ ಎಳನೀರು, ಬಡಮನೆ, ಸಂಸೆ, ಮೈದಾಡಿ, ಮರಸಣಿಗೆ ಗ್ರಾಮಗಳ ತೋಟಗಳಲ್ಲಿ 2 ವಾರಗಳಿಂದ ಅಡಿಕೆ ಮರಗಳಿಗೆ ವಿಚಿತ್ರ ರೋಗಬಾಧೆ ಕಾಣಿಸಿಕೊಂಡಿದೆ. ಮರದ ಎಲ್ಲ ಎಲೆಗಳು ಸೊರಗಿ, ತೊಂಡೆಯ ಕಡೆಗೆ ಬಾಗುತ್ತಿವೆ.ಇದರಿಂದ ಇಡೀ ತೋಟವೇ ಸೊರಗಿದ ಹಾಗೆ ಕಾಣುತ್ತಿದ್ದು, ಕೃಷಿಕರು ಕಂಗೆಟ್ಟಿದ್ದಾರೆ.

ಕಳೆದ ವರ್ಷ ಮರಸಣಿಗೆ ಸಮೀಪದ ಕೆಲ ತೋಟಗಳಲ್ಲಿ ಇದೇ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಈ ಬಾರಿ ಅಲ್ಲಿಂದ 10-15 ಕಿ.ಮೀ. ದೂರದ ಎಳನೀರು, ಬಡಮನೆ ಮತ್ತು ಸಂಸೆ ಪ್ರದೇಶದ ಸುಮಾರು 100 ಎಕರೆ ತೋಟಗಳಲ್ಲಿ ಈ ರೋಗ ಬಾಧೆ ಕಂಡು ಬಂದಿದೆ. ವಿಚಿತ್ರ ಎಂದರೆ ಒಂದೆರಡು ದಿನಗಳಲ್ಲೆ ಈ ರೋಗ ಲಕ್ಷಣ ಇಡೀ ತೋಟಕ್ಕೆ ವ್ಯಾಪಿಸುತ್ತಿದೆ. ಕೆಲವು ತೋಟಗಳಲ್ಲಿ ಅಡಿಕೆ ಫಸಲು ಕೂಡ ಕೆಂಬಣ್ಣಕ್ಕೆ ತಿರುಗಿ ನೆಲಕ್ಕೆ ಉದುರುತ್ತಿವೆ.

‘ಅಡಿಕೆ ಫಸಲು ಕೊಯ್ಲು ಆರಂಭವಾಗುವ ಈ ಸಂದರ್ಭದಲ್ಲಿ ಅತ್ಯಂತ ಅಪಾಯಕಾರಿಯಾಗಿ ವ್ಯಾಪಿಸುತ್ತಿರುವ ಈ ರೋಗದ ಬಗ್ಗೆ ಇಡೀ ತಾಲ್ಲೂಕಿನ ಬೆಳೆಗಾರರ ಸಮೂಹದಲ್ಲಿ ಭಯ ಆವರಿಸಿದೆ. ಈ ವರ್ಷ ಮೂರು ಬಾರಿ ಬೋರ್ಡೊ ದ್ರಾವಣ ಸಿಂಪಡಣೆ ಮಾಡಿ ಫಸಲು ಉಳಿಸಿಕೊಂಡಿದ್ದೇವೆ. ಗೊನೆ ತೆಗೆಯುವ ಸಮಯದಲ್ಲಿ ಕಂಡು ಬಂದಿರುವ ಈ ವಿಚಿತ್ರ ರೋಗ ನಮ್ಮ ನೆಮ್ಮದಿ ಕೆಡಿಸುತ್ತಿದೆ’ ಎಂದು ಮರಸಣಿಗೆ ಸಮೀಪದ ಮಕ್ಕಿಮನೆಯ ಬೆಳೆಗಾರ ವಜ್ರಕುಮಾರ್ ಹೇಳುತ್ತಾರೆ.

ADVERTISEMENT

ಈ ರೋಗವು ಅತ್ಯಂತ ವಿಕೋಪಕ್ಕೆ ತಲುಪಿರುವ ಬಡಮನೆಯ ತೋಟದ ರಾಜೇಂದ್ರ ಅತ್ಯಂತ ಹತಾಶರಾಗಿದ್ದಾರೆ. ‘ಒಂದು ವಾರದಲ್ಲಿ ರೋಗ ಹರಡುತ್ತಿರುವ ವೇಗ ನೋಡಿದರೆ ನಾವು ಈ ವರ್ಷ ಗೊನೆ ತೆಗೆಯುವುದೇ ಅನುಮಾನ ಅನಿಸುತ್ತಿದೆ. ಮೊದಲ ಗೊನೆಯ ಜೊತೆಗೆ ಮೂರನೇ ಮತ್ತು ನಾಲ್ಕನೇ ಗೊನೆಗೂ ರೋಗ ತಗುಲಿ ಕಾಯಿಗಳು ನೆಲಕ್ಕೆ ಉದುರುತ್ತಿವೆ’ ಎಂದು ಬೇಸರದಿಂದ ಹೇಳುತ್ತಾರೆ.

ಅವರ ತೋಟದಲ್ಲಿ ದೊಡ್ಡ ಮತ್ತು ಸಣ್ಣ ಮರಗಳ ಜೊತೆಗೆ ಪಾತಿಯಲ್ಲಿ ನೆಡಲು ಸಜ್ಜಾಗಿದ್ದ ಎಳೆಯ ಅಡಿಕೆ ಸಸಿಗಳಿಗೂ ಇದೇ ರೋಗ ತಗುಲಿರುವುದು ಅದರ ಗಂಭೀರತೆಗೆ ಸಾಕ್ಷಿ ಆಗಿದೆ. ಬಡಮನೆಯಿಂದ ಸಂಸೆ ಕಡೆಗೂ ಕಳೆದ ವಾರದಿಂದ ವ್ಯಾಪಿಸುತ್ತಿರುವ ಈ ರೋಗ ಕಾರ್ಮಣ್ಣಿನ ಧರಣೇಂದ್ರ ಮತ್ತು ಪ್ರಮೋದ್ ಅವರ ತೋಟಕ್ಕೂ ಹರಡಿದೆ.

‘ಈ ರೋಗ ಹರಡುವ ವೇಗ ನೋಡಿದರೆ ಇನ್ನು ಅಡಿಕೆ ಬೆಳೆಗಾರರು ಉಳಿಯುವುದೇ ಕಷ್ಟ. ಸರ್ಕಾರ ಈ ರೋಗಕ್ಕೆ ನಿಖರ ಕಾರಣ ಪತ್ತೆ ಹಚ್ಚಿ, ಔಷಧಿ ಸಲಹೆ ನೀಡಬೇಕು. ಇಲ್ಲದಿದ್ದರೆ ನಾವೆಲ್ಲರೂ ಆರ್ಥಿಕ ಸಂಕಟಕ್ಕೆ ಸಿಲುಕುತ್ತೇವೆ’ ಎಂದು ಬೆಳೆಗಾರ ಕೆ.ಜೆ.ಧರಣೇಂದ್ರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.