ADVERTISEMENT

ಕಳಸ: ಧರ್ಮಸ್ಥಳ ಕ್ಷೇತ್ರದ ಪರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 2:54 IST
Last Updated 18 ಆಗಸ್ಟ್ 2025, 2:54 IST
ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನ ನಡೆಯುತ್ತಿರುವುದನ್ನು ಖಂಡಿಸಿ ಕಳಸದಲ್ಲಿ ಭಾನುವಾರ ಭಕ್ತರು ಮೆರವಣಿಗೆ ನಡೆಸಿದರು
ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನ ನಡೆಯುತ್ತಿರುವುದನ್ನು ಖಂಡಿಸಿ ಕಳಸದಲ್ಲಿ ಭಾನುವಾರ ಭಕ್ತರು ಮೆರವಣಿಗೆ ನಡೆಸಿದರು   

ಕಳಸ: ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪರವಾಗಿ ಕ್ಷೇತ್ರದ ಭಕ್ತರು ಮತ್ತು ಕಳಸ ಚಂದ್ರನಾಥ ಸ್ವಾಮಿ ಬಸದಿ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಪಟ್ಟಣದಲ್ಲಿ ಭಾನುವಾರ ಮೆರವಣಿಗೆ ನಡೆಸಿದರು.

ಭಾರಿ ಮಳೆ ನಡುವೆಯೂ ಮುಖ್ಯ ರಸ್ತೆಯಲ್ಲಿ ಭಕ್ತರು ಜಾಗ್ರತಾ ಸಮಾವೇಶ ನಡೆಸಿದರು. ಆನಂತರ ಮೆರವಣಿಗೆಯಲ್ಲಿ ನೂರಾರು ಜನರು ತಾಲ್ಲೂಕು ಕಚೇರಿಗೆ ಸಾಗಿ ತಹಶೀಲ್ದಾರ್ ಕಾವ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಧರ್ಮಸ್ಥಳ ಕ್ಷೇತ್ರದ ವೀರೇಂದ್ರ ಹೆಗ್ಗಡೆ ಕುಟುಂಬದ ವಿರುದ್ಧ ನಡೆಯುತ್ತಿರುವ ಅವಹೇಳನ, ಪಿತೂರಿ ಮತ್ತು ಷಡ್ಯಂತ್ರ ವಿರುದ್ಧ ಕೂಡಲೇ ಸೂಕ್ತ ಕ್ರಮ ವಹಿಸುವಂತೆ  ಒತ್ತಾಯಿಸಲಾಯಿತು.

ADVERTISEMENT

ಧರ್ಮಸ್ಥಳ ಕ್ಷೇತ್ರವು ತನ್ನ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಚೈತನ್ಯ ತುಂಬಿದೆ. ಲೆಕ್ಕವಿಲ್ಲದಷ್ಟು ದೇಗುಲಗಳ ಜೀರ್ಣೋದ್ಧಾರ ಮಾಡಿರುವ ಈ ಕ್ಷೇತ್ರ, ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದೆ. ಅನ್ನದಾನದಿಂದ ದಕ್ಷಿಣ ಭಾರತದಲ್ಲೇ ಅತ್ಯಂತ ಹೆಸರಾಂತ ಕ್ಷೇತ್ರವಾಗಿದೆ.
ಇಷ್ಟೆಲ್ಲಾ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ವೀರೇಂದ್ರ ಹೆಗ್ಗಡೆ ಮತ್ತು ಧರ್ಮಸ್ಥಳ ಕ್ಷೇತ್ರದ ವಿರುದ್ಧ ವ್ಯವಸ್ಥಿತ ಪಿತೂರಿ ಮತ್ತು ಷಡ್ಯಂತ್ರ ರೂಪಿಸಲಾಗಿದೆ. ಇದರಿಂದ ಕ್ಷೇತ್ರದ ಭಕ್ತರು ಮತ್ತು ವೀರೇಂದ್ರ ಹೆಗ್ಗಡೆಯವರ ಅಭಿಮಾನಿಗಳಿಗೆ ಅತ್ಯಂತ ದುಃಖವಾಗಿದೆ. ಕ್ಷೇತ್ರದ ಹೆಸರಿಗೆ ಕಳಂಕ ತರುತ್ತಿರುವವರರ ವಿರುದ್ಧ ತುರ್ತು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಬಾಹುಬಲಿ ಬೆಟ್ಟದ ಬುಡದಲ್ಲಿ ಕೂಡ ಅಸ್ತಿಪಂಜರಕ್ಕಾಗಿ ಅಗೆದಿರುವುದು ಖಂಡನೀಯ. ಧರ್ಮಸ್ಥಳದ ಬಗ್ಗೆ ದೂರು ನೀಡಿರುವ ಸಾಕ್ಷಿ ದೂರುದಾರನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯಾಸತ್ಯತೆ ಹೊರ ಹಾಕಬೇಕು ಎಂದೂ ಮನವಿಯಲ್ಲಿ ಒತ್ತಾಯಿಸಲಾಯಿತು.

ಮುಖಂಡರಾದ ಕೆ.ಸಿ.ಧರಣೇಂದ್ರ, ಧರ್ಮಪಾಲ್ ಜೈನ್, ಹರ್ಷೇಂದ್ರ ಜೈನ್, ನಾಗಭೂಷಣ್, ಜ್ವಾಲನಯ್ಯ, ಕೀರ್ತಿ ಜೈನ್, ಸವಿಂಜಯ, ನಿರ್ಮಲ್ ಕುಮಾರ್, ವೀರೇಂದ್ರ, ರಾಮಪ್ರಕಾಶ್, ಸುರೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.