ADVERTISEMENT

ಮುಗಿಲು ಮುಟ್ಟಿದ ಸಂತ್ರಸ್ತರ ಆರ್ತನಾದ

ಮಲೆನಾಡಿನಲ್ಲಿ ಇಳಿಮುಖನಾದ ವರುಣದೇವ: ಹಲವು ಕಡೆ ರಸ್ತೆಗಳೇ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2019, 20:00 IST
Last Updated 11 ಆಗಸ್ಟ್ 2019, 20:00 IST
ಮೂಡಿಗೆರೆ ತಾಲ್ಲೂಕಿನ ಕಣಚೂರು ಗ್ರಾಮದ ಬಳಿ ಹೇಮಾವತಿ ನದಿಗೆ ಸಿಲುಕಿ ಹಾನಿಯಾಗಿರುವ ಅಡಿಕೆ ತೋಟ.
ಮೂಡಿಗೆರೆ ತಾಲ್ಲೂಕಿನ ಕಣಚೂರು ಗ್ರಾಮದ ಬಳಿ ಹೇಮಾವತಿ ನದಿಗೆ ಸಿಲುಕಿ ಹಾನಿಯಾಗಿರುವ ಅಡಿಕೆ ತೋಟ.   

ಮೂಡಿಗೆರೆ: ತಾಲ್ಲೂಕಿನಾದ್ಯಂತ ಭಾನುವಾರ ಮಳೆಯು ಸ್ವಲ್ಪ ಮಟ್ಟಿಗೆ ಇಳಿಮುಖವಾಗಿತ್ತು. ಮುಂಜಾನೆ ಕೆಲ ಕಾಲ ಧಾರಾಕಾರವಾಗಿ ಸುರಿದ ಮಳೆ ಬಳಿಕ ಆಗೊಮ್ಮೆ, ಈಗೊಮ್ಮೆ ಕಾಣಿಸಿಕೊಂಡು ಇಳಿಮುಖವಾಗತೊಡಗಿತು.

ಮಳೆ ಇಳಿಮುಖವಾಗಿದ್ದರಿಂದ ನದಿಗಳು, ತೊರೆಗಳಲ್ಲಿ ರಭಸದ ತೀವ್ರತೆ ಕಡಿಮೆಯಾಗಿದ್ದರೂ, ಹರಿವಿನಮಟ್ಟ ಹೆಚ್ಚಳವಾಗಿಯೇ ಇತ್ತು. ಬಂಕೇನಹಳ್ಳಿ, ಮುಗ್ರಹಳ್ಳಿ, ಕಿತ್ಲೆಗಂಡಿ, ಅಗ್ರಹಾರ ಮುಂತಾದ ಕಡೆಗಳಲ್ಲಿರುವ ಹೇಮಾವತಿ ನದಿಯ ಸೇತುವೆಗಳಲ್ಲಿ ಬೃಹದಾಕಾರದ ಮರದ ದಿಮ್ಮಿಗಳು, ಕಾಫಿ ಗಿಡಗಳ ಬುಡಗಳು, ಅಡಿಕೆ ಮರಗಳು ತೇಲಿ ಬಂದು ಸಿಕ್ಕಿಹಾಕಿಕೊಂಡಿದ್ದು, ತಾಲ್ಲೂಕಿನಲ್ಲಿ ಮಳೆಯಿಂದ ಕೊಚ್ಚಿಬಂದ ಕಾಫಿತೋಟದ ಅವಶೇಷಗಳಿಗೆ ಸಾಕ್ಷಿಯಾಗಿದೆ.

ಮಳೆ ಇಳಿಮುಖವಾಗಿದ್ದರಿಂದ ಭಾನುವಾರ ಮುಂಜಾನೆಯಿಂದಲೇ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಲಾಗಿತ್ತು. ಆಲೇಖಾನ್ ಹೊರಟ್ಟಿ, ಮಧುಗುಂಡಿ ಮುಂತಾದ ಕಡೆಗಳಲ್ಲಿ ಭೂಕುಸಿತದಿಂದ ಮನೆಮಠಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದ ಕುಟುಂಬಗಳನ್ನು ಭಾರತೀಯ ಸೇನಾಪಡೆ, ನಮ್ಮುಡುಗರು ತಂಡ, ಸಮಾಜ ಸೇವಾ ಕಾರ್ಯಕರ್ತರು ಬಿರುಸಿನಿಂದ ಕಾರ್ಯಾಚರಣೆ ನಡೆಸಿ ಜನರನ್ನು ರಕ್ಷಿಸಿದರು.

ADVERTISEMENT

ತಾಲ್ಲೂಕಿನ ಗೋಣಿಬೀಡಿನ ಸರ್ಕಾರಿ ವಿದ್ಯಾರ್ಥಿ ನಿಲಯ, ಬಣಕಲ್ ನಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯ, ಕೊಟ್ಟಿಗೆಹಾರ ಸರ್ಕಾರಿ ಶಾಲೆ, ಮೊರಾರ್ಜಿ ವಸತಿ ಶಾಲೆ, ಇಡಕಣಿ ಗಣಪತಿ ಸೇವಾ ಕೇಂದ್ರ ಮುಂತಾದ ಕಡೆಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ನಿರಾಶ್ರಿತರಿಗೆ ಊಟ, ವಸತಿ ಹಾಗೂ ಬಟ್ಟೆಬರೆಗಳನ್ನು ನೀಡಲಾಗಿದೆ. ವಿವಿಧೆಡೆಯಿಂದ ಬಂದಿರುವ ವೈದ್ಯರು, ಶುಶ್ರೂಷಕಿಯರು ನಿರಾಶ್ರಿತರ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಎಲ್ಲಾ ಗಂಜಿ ಕೇಂದ್ರಗಳಿಗೆ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಜಡಿ ಮಳೆಯಿಂದಾಗಿ ಮನೆಯಿಂದ ಹೊರಗೆ ಬರದ ಜನರು, ಇಂದು ಮಳೆ ಬಿಡುವು ನೀಡಿದ್ದರಿಂದ ತಮ್ಮ ತಮ್ಮ ಜಮೀನುಗಳಿಗೆ ತೆರಳಿ ಅನಾಹುತವಾಗಿರುವ ಬಗ್ಗೆ ಆಕ್ರಂದನ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಬಾಳೂರು, ಕಳಸ, ಬಣಕಲ್ ಹೋಬಳಿಯ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿರುವುದರಿಂದ ಸಾರಿಗೆ ಸೌಲಭ್ಯವಿಲ್ಲದೇ ಗಂಜಿ ಕೇಂದ್ರದಲ್ಲಿರುವ ನಿರಾಶ್ರಿತರು ತಮ್ಮ ಮನೆ, ಜಮೀನುಗಳನ್ನೊಮ್ಮೆ ನೋಡಿ ಬರೋಣವೆಂದರೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಾಶ್ರಿತರಿಗೆ ಬಾಳಿ ಬದುಕಿದ ಮನೆಗಳನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ, ಸಣ್ಣಪುಟ್ಟ ಮಕ್ಕಳನ್ನು ಹೊಂದಿರುವ ಕುಟುಂಬದವರು ಮಕ್ಕಳನ್ನು ಗಂಜಿ ಕೇಂದ್ರದಲ್ಲಿ ಸಂತೈಸುವುದೇ ಸವಾಲಾಗಿದೆ.

ರಸ್ತೆಗಳೆಲ್ಲವೂ ಕೊಚ್ಚಿಹೋಗಿದ್ದು, ಕೊಟ್ಟಿಗೆಹಾರದಿಂದ – ಬಾಳೂರು ಹ್ಯಾಂಡ್ ಪೋಸ್ಟಿನವರೆಗಿನ ಹತ್ತು ದಿನಗಳ ಹಿಂದೆ ಇಲ್ಲೊಂದು ರಸ್ತೆಯಿತ್ತು ಎಂಬುದನ್ನೆ ನಂಬಲಾರದ ಸ್ಥಿತಿಗೆ ಗುಡ್ಡದ ಅವಶೇಷಗಳು ಬಂದು ರಸ್ತೆ ಮೇಲೆ ನಿಂತಿವೆ. ಗ್ರಾಮೀಣ ರಸ್ತೆಗಳು ಕೊಚ್ಚಿಹೋಗಿದ್ದು, ಗುತ್ತಿ, ದೇವರಮನೆ, ದೇವರುಂದ, ಹೆಮ್ಮಕ್ಕಿ, ತತ್ಕೊಳ, ಚಿಕ್ಕಳ್ಳ, ಜಿ.ಹೊಸಳ್ಳಿ ಮುಂತಾದ ಭಾಗಗಳಿಂದ ತಾಲ್ಲೂಕು ಕೇಂದ್ರಕ್ಕೆ ಸಂಪರ್ಕವಿಲ್ಲದಂತಾಗಿದೆ. ಮಳೆ ಇಳಿಮುಖವಾದ ಬೆನ್ನಲ್ಲೇ ಹತ್ತು ದಿನಗಳಿಂದ ರಜೆ ಘೋಷಿಸಿದ್ದ ಶಾಲಾ– ಕಾಲೇಜುಗಳು ಪುನರ್ ಪ್ರಾರಂಭವಾದರೂ, ಗ್ರಾಮೀಣ ಪ್ರದೇಶದಿಂದ ಶಾಲೆಗಳಿಗೆ ಬರಲಾಗದ ಸ್ಥಿತಿ ಏರ್ಪಟ್ಟಿದೆ.

ಸಂತ್ರಸ್ತರ ನೆರವಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು
ಜಿಲ್ಲಾಧಿಕಾರಿ ಗೌತಮ್ ಬಗಾದಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಸಹಿತ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ತಹಶೀಲ್ದಾರ್ ರಮೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ. ವೆಂಕಟೇಶ್ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ತಡರಾತ್ರಿಯವರೆಗೂ ಎಡಬಿಡದೇ ಕಾರ್ಯನಿರ್ವಹಿಸುತ್ತಿದ್ದರೆ, ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ. ರತನ್ ಸ್ಥಳದಲ್ಲೇ ಬೀಡುಬಿಟ್ಟಿದ್ದು, ನಿರಾಶ್ರಿತರ ರಕ್ಷಣೆಯಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.