ADVERTISEMENT

ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ತಯಾರಿಸಿ: ಶಾಸಕ ರಾಜೇಗೌಡ

ಶೃಂಗೇರಿ ಕ್ಷೇತ್ರದ ತಾಲ್ಲೂಕುಗಳ ಅಧಿಕಾರಿ, ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 6:20 IST
Last Updated 18 ನವೆಂಬರ್ 2025, 6:20 IST
ಕೊಪ್ಪ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸುವ ಸಂಬಂಧ ಶಾಸಕ ಟಿ.ಡಿ.ರಾಜೇಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು
ಕೊಪ್ಪ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸುವ ಸಂಬಂಧ ಶಾಸಕ ಟಿ.ಡಿ.ರಾಜೇಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು   

ಕೊಪ್ಪ: 'ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಭೆ ನಡೆಸಿ ಕ್ರಿಯಾಯೋಜನೆ ಸಿದ್ದಪಡಿಸಿಕೊಡಿ. ಆದ್ಯತೆ ಮೇಲೆ ಅವುಗಳಿಗೆ ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಾಗುವುದು' ಎಂದು ಶಾಸಕ ಟಿ.ಡಿ.ರಾಜೇಗೌಡ ಸೂಚಿಸಿದರು.

ಪಟ್ಟಣ, ಗ್ರಾಮ ಒಳಗೊಂಡಂತೆ ತಾಲ್ಲೂಕಿನ ಅಭಿವೃದ್ಧಿಗಾಗಿ ಕೇಂದ್ರ, ರಾಜ್ಯ ಸರ್ಕಾರದ ಅನುದಾನ ಆಧರಿಸಿ ಕರಡು ಕ್ರಿಯಾ ಯೋಜನೆ ರೂಪಿಸುವ ಸಲುವಾಗಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಮೂರು ತಾಲ್ಲೂಕುಗಳಾದ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲ್ಲೂಕಿನ ಅಧಿಕಾರಿಗಳು, ಪಂಚಾಯಿತಿ ಚುನಾಯಿತ ಪ್ರತಿನಿಧಿಗಳೊಂದಿಗೆ ಸೋಮವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಿದರು.

'ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಅವರ ಸೂಚನೆ ಮೇರೆಗೆ ಸಭೆ ನಡೆಸಲಾಗುತ್ತಿದೆ. ಯಾವುದಾದರು ಕಾಮಗಾರಿಗಳು ಬಿಟ್ಟು ಹೋಗಿದ್ದರೆ ಎರಡು ದಿನದಲ್ಲಿ ಇನ್ನೊಂದು ಸಭೆ ನಡೆಸಿ ಹೆಚ್ಚುವರಿಯಾಗಿ ಅದನ್ನು ಸೇರಿಸಿ ಕೊಡಿ, ಅನುಮೋದನೆ ಪಡೆಯಲು ಅನುಕೂಲವಾಗುತ್ತದೆ. ಕಾಮಗಾರಿಗಳ ಪಟ್ಟಿಯಲ್ಲಿ ವ್ಯಕ್ತಿಗತ ಹಿತಾಸಕ್ತಿ ಒಳಗೊಳ್ಳುವಂತಿಲ್ಲ' ಎಂದು ಸೂಚಿಸಿದರು.

ADVERTISEMENT

ಶೃಂಗೇರಿ ತಾಲ್ಲೂಕು ಪಂಚಾಯಿತಿ ಇ.ಒ ಸುಧೀರ್ ಮಾತನಾಡಿ, 'ಶೃಂಗೇರಿ ಪಟ್ಟಣ, ಗ್ರಾಮ ಸೇರಿದಂತೆ ಒಟ್ಟು ₹70.29 ಕೋಟಿ ಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಇದರಲ್ಲಿ ಎಸ್‌ಸಿಪಿ, ಟಿಎಸ್‌ಪಿಗೆ ಅಂದಾಜು ₹17 ಕೋಟಿ ಮೀಸಲಿಡಬೇಕಿದೆ' ಎಂದರು.

ಕೊಪ್ಪ ಇ.ಒ.ಎಚ್.ಡಿ.ನವೀನ್ ಕುಮಾರ್ ಮಾತನಾಡಿ, 'ಎನ್.ಆರ್.ಪುರ ₹ 118.23 ಕೋಟಿ, ಈ ಪೈಕಿ ₹ 22 ಕೋಟಿ ಎಸ್‌ಸಿಪಿ, ಟಿಎಸ್‌ಪಿಗೆ ಹಾಗೂ ಕೊಪ್ಪದಲ್ಲಿ ₹ 137 ಕೋಟಿಗೆ ಕ್ರಿಯಾ ಯೋಜನೆ ಸಿದ್ಧಗೊಂಡಿದೆ’ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಯೊಬ್ಬರು, 'ಕಳೆದ 5 ವರ್ಷದಿಂದ ಮನೆ ಮಂಜೂರು ಆಗಿಲ್ಲ. ಅದನ್ನೂ ಸೇರಿಸಬಹುದಾ' ಎಂದು ಪ್ರಶ್ನಿಸಿದರು. ಆಗ ಶಾಸಕರು, 'ಮನೆ ಮಂಜೂರಾತಿಗೆ ಸಮಸ್ಯೆ ಇಲ್ಲ ನಿವೇಶನ ಮಂಜೂರಾತಿಗೆ ಅರಣ್ಯ ಸಮಸ್ಯೆ ಎದುರಾಗಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ನೋಡಲ್ ಅಧಿಕಾರಿ ತಿರುಮಲೇಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾ ಕೊಸ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್, ಎಪಿಎಂಸಿ ಅಧ್ಯಕ್ಷ ರಾಜೇಂದ್ರ, ಎನ್.ಆರ್.ಪುರ ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದಾ ಮತ್ತಿತರರು ಭಾಗವಹಿಸಿದ್ದರು.

'ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರು'

'ಮುಖ್ಯಮಂತ್ರಿ ವಿಶೇಷ ಅನುದಾನ ₹50 ಕೋಟಿ ಮಂಜೂರಾಗಿದೆ. ರಸ್ತೆ ಸಮುದಾಯದ ಭವನ ಕಟ್ಟಡಗಳು ದೇವಸ್ಥಾನಕ್ಕೆ ಆದ್ಯತೆ ನೀಡಲಾಗಿದೆ. ಮೊದಲು ರಸ್ತೆ ದುರಸ್ತಿಗೆ ಆದ್ಯತೆ ನೀಡಲಾಗಿದೆ. ₹ 200 ಕೋಟಿ ಮಂಜೂರಾಗಲಿದ್ದು ಮರು ಡಾಂಬರೀಕರಣಕ್ಕೆ ಒತ್ತು ನೀಡಲಾಗುವುದು. ಗುಣಮಟ್ಟದ ಕಾಮಗಾರಿ ನಡೆಸಬೇಕು ಕಳಪೆ ಕಾಮಗಾರಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು' ಎಂದು ಶಾಸಕ ಟಿ.ಡಿ.ರಾಜೇಗೌಡ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.