ADVERTISEMENT

ದುರ್ಬಲರ ಕಷ್ಟಕ್ಕೆ ಸ್ಪಂದಿಸಿದ ಉದ್ಯಮಿ

ಕೊಪ್ಪ: 500 ಮಂದಿಗೆ ಆಹಾರ ಕಿಟ್‌ ವಿತರಣೆ

ರವಿಕುಮಾರ್ ಶೆಟ್ಟಿಹಡ್ಲು
Published 18 ಮೇ 2021, 3:37 IST
Last Updated 18 ಮೇ 2021, 3:37 IST
ಕೊಪ್ಪ ತಾಲ್ಲೂಕಿನ ಶಾನುವಳ್ಳಿ ಗ್ರಾಮದವರಾದ ಸುಧಾಕರ್ ಎಸ್.ಶೆಟ್ಟಿ, ಶಿವಕರ ಎಸ್. ಶೆಟ್ಟಿ ಸಹೋದರರು ಬಡವರಿಗೆ ಆಹಾರ ವಸ್ತುಗಳ ಕಿಟ್ ವಿತರಿಸಿದರು.
ಕೊಪ್ಪ ತಾಲ್ಲೂಕಿನ ಶಾನುವಳ್ಳಿ ಗ್ರಾಮದವರಾದ ಸುಧಾಕರ್ ಎಸ್.ಶೆಟ್ಟಿ, ಶಿವಕರ ಎಸ್. ಶೆಟ್ಟಿ ಸಹೋದರರು ಬಡವರಿಗೆ ಆಹಾರ ವಸ್ತುಗಳ ಕಿಟ್ ವಿತರಿಸಿದರು.   

ಕೊಪ್ಪ: ದುಡಿದು ತಿನ್ನುವ ಕೈಗಳಿಗೆ ಕೋವಿಡ್ ಸಂದರ್ಭದಲ್ಲಿ ಕೆಲಸ ಕಾರ್ಯಗಳಿಲ್ಲದೇ ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಾಲ್ಲೂಕಿನ ಶಾನುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಮಖಾನೆಯ ಸುಧಾಕರ್ ಎಸ್. ಶೆಟ್ಟಿ ಅವರು ಬಡವರ, ಅಸಹಾಯಕರ ನೆರವಿಗೆ ನಿಂತಿದ್ದಾರೆ.

ಮೈಸೂರಿನಲ್ಲಿ ನೆಲೆಸಿರುವ ‘ಅಮ್ಮ ಫೌಂಡೇಶನ್’ ಸಂಸ್ಥಾಪಕ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಅವರು, ತಮ್ಮ ಫೌಂಡೇಶನ್ ಮೂಲಕ ಜನರಿಗೆ ಕೈಲಾದ ಸಹಾಯವನ್ನು ಮಾತ್ತಿದ್ದಾರೆ. ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) ಮಾಜಿ ಅಧ್ಯಕ್ಷರೂ ಆಗಿರುವ ಅವರು ತಾಲ್ಲೂಕಿನಲ್ಲಿ ಆರ್ಥಿಕ ವಾಗಿ ಹಿಂದುಳಿದ, ಅವಶ್ಯಕವಿರುವ ಸುಮಾರು 500 ಬಡ ಕುಟುಂಬಗಳಿಗೆ ಅಗತ್ಯ ಆಹಾರ ವಸ್ತುಗಳ ಕಿಟ್ ವಿತರಿಸಿ, ಸಹಾಯ ಹಸ್ತ ಚಾಚಿದ್ದಾರೆ. ಬಡ ವ್ಯಕ್ತಿಯೊಬ್ಬರು ಇತ್ತೀಚೆಗೆ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಚಿಕಿತ್ಸಾ ವೆಚ್ಚ ಭರಿಸಲಾಗದ್ದನ್ನು ಸ್ಥಳೀಯರು ಸುಧಾಕರ ಶೆಟ್ಟಿ ಅವರ ಸಹೋದರ ಶಾನುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಕರ ಶೆಟ್ಟಿ ಅವರ ಗಮನಕ್ಕೆ ತಂದರು. ಶಿವಕರ ಶೆಟ್ಟಿ ಅದನ್ನು ಸುಧಾಕರ್ ಶೆಟ್ಟಿ ಅವರ ಗಮನಕ್ಕೆ ತಂದು ಫೌಂಡೇಶನ್ ಮೂಲಕ ಬಿಲ್ ಪಾವತಿಸಿದ್ದರು ಎಂಬುದು ಗಮನಾರ್ಹ ಸಂಗತಿ.

ತಮ್ಮ ಸೇವೆಯ ಬಗ್ಗೆ ಸುಧಾಕರ್ ಎಸ್.ಶೆಟ್ಟಿ ಪ್ರತಿಕ್ರಿಯಿಸಿ, ‘ನಗರ ಪ್ರದೇಶದಿಂದ ಗ್ರಾಮಾಂತರ ಪ್ರದೇಶಕ್ಕೆ ಕೋವಿಡ್ ಛಾಯೆ ವ್ಯಾಪಿಸಿದೆ. ಇಂತಹ ಸಂದರ್ಭದಲ್ಲಿ ಕೊಪ್ಪ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ವಿಚಾರಿಸಿದಾಗ ಬಹಳ ಅನಿವಾರ್ಯತೆ ಇರುವ, ಆರ್ಥಿಕವಾಗಿ ಹಿಂದುಳಿದಿರುವ, ವಯಸ್ಸಾದ ಕೂಲಿ ಕಾರ್ಮಿಕರು, ಜಮೀನು ರಹಿತ ಜನತೆ ಬಹಳ ತೊಂದರೆಗೀಡಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ಅವರಿಗೆ ನೆರವಾಗಲು ಯತ್ನಿಸಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.