ADVERTISEMENT

ಕೊಪ್ಪ | ರಸ್ತೆ ಡಾಂಬರೀಕರಣಕ್ಕೆ ಕ್ರಮ ವಹಿಸಿ: ಸುಧಾಕರ ಎಸ್.ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 5:41 IST
Last Updated 30 ಅಕ್ಟೋಬರ್ 2025, 5:41 IST
ಕೊಪ್ಪದ ಮೇಲಿನ ಪೇಟೆಯಲ್ಲಿ ರಸ್ತೆಯಲ್ಲಿ ಉಂಟಾದ ಗುಂಡಿಗಳಿಗೆ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ನೇತೃತ್ವದಲ್ಲಿ ಕಾಂಕ್ರೀಟ್ ಹಾಕಿ ಮುಚ್ಚಲಾಯಿತು
ಕೊಪ್ಪದ ಮೇಲಿನ ಪೇಟೆಯಲ್ಲಿ ರಸ್ತೆಯಲ್ಲಿ ಉಂಟಾದ ಗುಂಡಿಗಳಿಗೆ ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ನೇತೃತ್ವದಲ್ಲಿ ಕಾಂಕ್ರೀಟ್ ಹಾಕಿ ಮುಚ್ಚಲಾಯಿತು   

ಕೊಪ್ಪ: ಕ್ಷೇತ್ರದ ಶಾಸಕರು ಅಭಿವೃದ್ಧಿ ಬಗ್ಗೆ ಯೋಚನೆ ಮಾಡದೇ ಪರಸ್ಪರ ಆರೋಪ–ಪ್ರತ್ಯಾರೋಪ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದೀರಿ. ರಸ್ತೆ ಡಾಂಬರೀಕರಣಕ್ಕೆ ಕ್ರಮ ವಹಿಸದಿದ್ದರೆ ಕೊಪ್ಪ ಬಂದ್‌ಗೆ ಕರೆಕೊಡಲಾಗುವುದು. ಅಭಿವೃದ್ಧಿಗೆ ಒತ್ತು ಕೊಟ್ಟರೆ ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ' ಎಂದು ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಹೇಳಿದರು.

ರಸ್ತೆ ದುರಸ್ತಿ, ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ, ಒತ್ತುವರಿ ತೆರವಿಗೆ ಎಸ್ಐಟಿ ರಚಿಸಿದ ಕ್ರಮ ವಿರೋಧಿಸಿ ಜೆಡಿಎಸ್ ಬುಧವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಗುಂಡಿ ತಪ್ಪಿಸಲು ಹೋಗಿ ಅಪಘಾತ ನಡೆಯುವುದು ನಿರಂತರವಾಗಿದೆ. ಬಿಜೆಪಿ ಮುಖಂಡರ ವಿರುದ್ಧ ಮಾತನಾಡುವುದೇ ನಿಮ್ಮ ಅಭಿವೃದ್ಧಿಯಾಗಿದೆ. ಕಾಂಗ್ರೆಸ್ ಮುಖಂಡರು ಶಾಸಕರನ್ನು ಯಾಕೆ ಎಚ್ಚರಿಸುವ ಕೆಲಸ ಮಾಡಿಲ್ಲ. ಮಾತೆತ್ತಿದರೆ ₹50 ಕೋಟಿ, ₹100 ಕೋಟಿ ಬಂದಿದೆ ಎನ್ನುತ್ತೀರಿ, ಎಲ್ಲಿ ಅಭಿವೃದ್ಧಿಯಾಗಿದೆ’ ಎಂದು ಪ್ರಶ್ನಿಸಿದರು.

ಹಕ್ಕುಪತ್ರ ವಿತರಣೆಗೆ ಮೊದಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕೆಂದು ಕಾನೂನು ಮಾಡಿದ್ದೀರಿ. ಅರಣ್ಯ ಕಂದಾಯ ಜಂಟಿ ಸರ್ವೆ ಮಾಡದೇ ಒತ್ತುವರಿ ಎಂದು ಯಾಕೆ ಹೇಳುತ್ತಿದ್ದಿರಿ. ಪ್ರತಿಭಟನೆ ನಡೆಸಬೇಕಾದ ರೈತರು ಮೌನ ವಹಿಸಿದ್ದಾರೆ. ನಾನು ಗಾರ್ಮೆಂಟ್ಸ್ ಮಾಡಲು ಶಂಕರ್ ರೈಸ್ ಮಿಲ್ ಬಳಿ ಸಿದ್ಧತೆ ನಡೆಸಿದ್ದೆ, ಒಂದು ಸಾವಿರ ಜನರಿಗೆ ಕೆಲಸ ಸಿಗುತ್ತದೆ. ನಮ್ಮ ಕೈ ಬಲವಾಗುತ್ತದೆ ಎಂದು 124 ವರ್ಷದಿಂದ ಇದ್ದ ರೈಸ್ ಮಿಲ್ ಜಾಗವನ್ನು ಸೊಪ್ಪಿನಬೆಟ್ಟ ಕಾರಣ ಹೇಳಿ ಅರ್ಜಿ ಪಾಸ್ ಮಾಡಿಲ್ಲ. ಜಿದ್ದಿನ ರಾಜಕೀಯ ಬಿಟ್ಟು ಅಭಿವೃದ್ಧಿ ರಾಜಕೀಯ ಮಾಡೋಣ ಎಂದರು.

ADVERTISEMENT

ಕೊಪ್ಪ ಪಟ್ಟಣಕ್ಕೆ ಕಾಯಕಲ್ಪ ಬೇಕು, ಕುಡಿಯುವ ನೀರು, ಕಸ ವಿಲೇವಾರಿ ಅಧೋಗತಿಯಾಗಿದೆ. ಇಂದಿನ ಪ್ರತಿಭಟನೆ ಕಣ್ಣು ತೆರೆಸುವ ಕೆಲಸವಾಗಿದೆ. ಕಾಂಗ್ರೆಸ್ ಮುಖಂಡರು ನೇರವಾಗಿ ಮೋದಿ, ಕುಮಾರಣ್ಣನನ್ನು ಬೈಯುವ ಕೆಲಸ ಮಾಡುತ್ತಿದ್ದೀರಿ, ಸ್ಥಳೀಯ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ. ಶಾಸಕರನ್ನು ಏಳಿಸಿ ಕೆಲಸ ಮಾಡಿಸಿ ಎಂದು ಅವರು ಹೇಳಿದರು. 

ಜೆಡಿಎಸ್ ಶೃಂಗೇರಿ ಕ್ಷೇತ್ರ ಘಟಕದ ಅಧ್ಯಕ್ಷ ದಿವಾಕರ್ ಭಟ್, ‘ನಮ್ಮ ನಾಯಕ ಸುಧಾಕರ ಶೆಟ್ಟಿ ಅವರು ಸ್ವಂತ ಹಣದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ರಸ್ತೆ ದುರಸ್ತಿ ಬಗ್ಗೆ ಐಟಿ–ಬಿಟಿಯವರು ಕೇಳಿದರೆ ನೀವೆ ದುರಸ್ತಿ ಮಾಡಿಕೊಳ್ಳಿ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಈ ರೀತಿ ದುಃಸ್ಥಿತಿ ಬಂದಿದೆ ಎಂದರೆ ಅಸಮರ್ಥ ಸರ್ಕಾರ ಇದೆ’ ಎಂದರು.

ಗ್ಯಾರಂಟಿ ಯೋಜನೆ ಹೆಸರಲ್ಲಿ ಒಂದು ಕಡೆ ಕೊಟ್ಟು ಇನ್ನೊಂದು ಕಡೆ ವಾಪಾಸ್ ಪಡೆಯುತ್ತೀರಿ. ಈ ಭಾಗದಲ್ಲಿ ರಸ್ತೆ ಸರಿ ಇಲ್ಲ ಎಂದು ನಿಮ್ಮ ನಾಯಕರಿಗೆ, ಶಾಸಕರಿಗೆ ಹೇಳುವ ಧೈರ್ಯ ಇಲ್ಲಿನ ಮುಖಂಡರಿಗೆ ಇಲ್ಲವೇ. ಲೀಸ್‌ಗೆ ಜಮೀನು ಕೊಡುವುದರಿಂದ ಮಧ್ಯಮ, ಸಣ್ಣ ರೈತರಿಗೆ ಯಾವುದೇ ಲಾಭವಿಲ್ಲ, ದೊಡ್ಡ ಜಮೀನುದಾರರಿಗೆ ಮಾತ್ರ ಲಾಭ. ಇನ್ನೊಬ್ಬರನ್ನು ಭೈಯುವುದನ್ನು ಬಿಟ್ಟು ಒಳ್ಳೆಯ ಕೆಲಸ ಮಾಡಿ. ಒಂದು ತಿಂಗಳಿಂದ ಮಳೆ ಇಲ್ಲ, ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಜೆಡಿಎಸ್ ತಾಲ್ಲೂಕು ಫಟಕದ ಉಪಾಧ್ಯಕ್ಷ ವಾಸಪ್ಪ ಕುಂಚೂರು, ‘ರಾಜ್ಯ ಸರ್ಕಾರಕ್ಕೆ ಈ ಮೂಲಕ ಎಚ್ಚರಿಕೆ ಕೊಡುತ್ತಿದ್ದೇವೆ. ಕಾಂಗ್ರೆಸ್, ಬಿಜೆಪಿಗೆ ಅಭಿವೃದ್ಧಿಗಾಗಿ ಜನ ಅಧಿಕಾರ ಕೊಟ್ಟರು ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ, ಕ್ಷೇತ್ರದ ಜನರು ನಿರೀಕ್ಷೆ ಮಾಡಿದ್ದರು. ನಿಮಗೆ ಮಾನ ಮರ್ಯಾದೆ ಇದ್ದರೆ ಅಭಿವೃದ್ಧಿ ಮಾಡಿ ನಿಮ್ಮನ್ನು ಜನ ಮೆಚ್ಚುತ್ತಾರೆ. ಬಸ್ ನಿಲ್ದಾಣ ದನದ ಕೊಟ್ಟಿಗೆಯಂತಾಗಿದೆ’ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕಗ್ಗಾ ರಾಮಸ್ವಾಮಿ, ಕಾರ್ಯದರ್ಶಿ ಶಾಂತಕುಮಾರ್ ಜೈನ್, ಉಪಾಧ್ಯಕ್ಷ ವಾಸಪ್ಪ ಕುಂಚೂರು ಮಾತನಾಡಿದರು. ಮುಖಂಡರಾದ ಪೂರ್ಣೇಶ್, ಚಂದ್ರಶೇಖರ್, ರವೀಂದ್ರ, ಉದಯ್ ಸುವರ್ಣ, ಸತೀಶ್ ಮಾಕಾರ್ ಇದ್ದರು.

ಸ್ವಂತ ಖರ್ಚಿನಿಂದ ರಸ್ತೆಗೆ ಕಾಂಕ್ರೀಟ್ 

ಮೇಲಿನಪೇಟೆ ಕುವೆಂಪು ವೃತ್ತದಿಂದ ಬಸ್ ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಸುಧಾಕರ್ ಶೆಟ್ಟಿ ಅವರು ಸ್ವಂತ ಖರ್ಚಿನಿಂದ ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚುವ ಕೆಲಸ ಮಾಡಿದರು. ಗುಂಡಿ ಬಿದ್ದ ರಸ್ತೆಗೆ ಸಿಮೆಂಟ್ ಕಾಂಕ್ರೀಟ್ ತುಂಬಲಾಯಿತು. ಈ ವೇಳೆ ಕ್ಷೇತ್ರದ ಶಾಸಕರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ‘ಶೃಂಗೇರಿ ಕ್ಷೇತ್ರ ಅಭಿವೃದ್ಧಿಯಲ್ಲಿ ಶೂನ್ಯ’ ‘ಸರ್ಕಾರ ಶಾಸಕರು ನಿದ್ದೆ ಮಾಡುತ್ತಿದ್ದಾರೆ’ ‘ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿವೆ’ ಎಂಬ ಘೋಷಣೆ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.