ADVERTISEMENT

ಕುದುರೆಮುಖ: ಕಾಡಂಚಿನ ಗ್ರಾಮಗಳಿಗೆ ಸಿಗದ ವಿದ್ಯುತ್

ವಿದ್ಯುತ್‌ ಮಾರ್ಗಕ್ಕೆ ವನ್ಯಜೀವಿ ಮಂಡಳಿ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 1:14 IST
Last Updated 4 ಅಕ್ಟೋಬರ್ 2025, 1:14 IST
ಶೃಂಗೇರಿ ತಾಲ್ಲೂಕಿನ ಮುಂಡೋಡಿ ಬಳಿ ವಿದ್ಯುತ್ ಸಂಪರ್ಕಕ್ಕೆ ಕಾದಿರುವ ಕಂಬ
ಶೃಂಗೇರಿ ತಾಲ್ಲೂಕಿನ ಮುಂಡೋಡಿ ಬಳಿ ವಿದ್ಯುತ್ ಸಂಪರ್ಕಕ್ಕೆ ಕಾದಿರುವ ಕಂಬ   

ಬೆಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಬರುವ ಮಲೆನಾಡು–ಕರಾವಳಿ ಭಾಗದ ಮೂರು ಜಿಲ್ಲೆಗಳ ಕೆಲವು ತಾಲ್ಲೂಕುಗಳಲ್ಲಿನ ಅರಣ್ಯದಂಚಿನ ಆದಿವಾಸಿ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡುವುದಕ್ಕೆ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯು ನಿರಾಕರಿಸಿದೆ. ಇದರಿಂದ ಕೆಲವು ಕುಟುಂಬಗಳ ಮನೆಗಳಲ್ಲಿ ವಿದ್ಯುದ್ದೀಪ ಕಾಣಲು ಇನ್ನಷ್ಟು ದಿನ ಕಾಯಬೇಕಾಗಿದೆ.

ಹಾಡಿ, ಮಜಿರೆಯಂತಹ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕುರಿತು ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿದ್ಯುತ್ ಕಂಪನಿಗಳು ಇಂತಹ ಜನವಸತಿ ಪ್ರದೇಶಗಳನ್ನು ಗುರುತಿಸಿ ವಿದ್ಯುತ್‌ ಸಂಪರ್ಕ ನೀಡಲು ಕ್ರಮ ವಹಿಸಬೇಕು. ಇದಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯ ಅನುದಾನವನ್ನು ಬಳಸಬೇಕು ಎಂದು ಸೂಚನೆ ನೀಡಿದ್ದರು. ಆ ನಂತರವೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಪ್ರಗತಿ ಕಂಡಿಲ್ಲ.

ಈಗಾಗಲೇ ಹಲವು ಜಿಲ್ಲೆಗಳ ಹಾಡಿಗಳಲ್ಲಿ ವಿದ್ಯುತ್‌ ಸಂಪರ್ಕ ನೀಡುವ ಚಟುವಟಿಕೆ ನಡೆದಿದೆ. ಆದರೆ ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ಹಂಚಿ ಹೋಗಿರುವ ಕುದುರೆಮುಖ ರಾಷ್ಟ್ರಿಯ ಉದ್ಯಾನದ ಏಳು ಹಾಡಿಗಳಿಗೆ ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ. ಅರಣ್ಯ ನಾಶ, ಪುನರ್ವಸತಿ ಯೋಜನೆಯ ಕಾರಣ ನೀಡಿರುವ ವನ್ಯಜೀವಿ ಮಂಡಳಿ ಸಂಪರ್ಕಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ADVERTISEMENT

ನಕ್ಸಲ್‌ ಪೀಡಿತ ಎಂಬ ಹಣೆಪಟ್ಟಿಯನ್ನು ‍‍ಪೊಲೀಸ್ ಇಲಾಖೆಯಿಂದ ಅಂಟಿಸಿಕೊಂಡಿರುವ ಈ ಪ್ರದೇಶಗಳು ಈಗಲೂ ಅಗತ್ಯ ಮೂಲಸೌಕರ್ಯದಿಂದ ವಂಚಿತವಾಗಿವೆ. ಅರಣ್ಯದಂಚಿನ ಗ್ರಾಮಗಳಲ್ಲಿ  ವಿದ್ಯುತ್‌, ರಸ್ತೆ ಸೌಲಭ್ಯ ಕಲ್ಪಿಸಬೇಕೆಂಬ ಸರ್ಕಾರದ ಸೂಚನೆ ಇದ್ದರೂ, ಸಂಪರ್ಕ ವಿಳಂಬವಾಗುತ್ತಿರುವುದಕ್ಕೆ ಸ್ಥಳೀಯರೂ ಬೇಸರ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಎಮ್ಮೆಗುಂಡಿ, ಯಾದಗಾರು, ಹೊರಾನೆ ಪ್ರದೇಶ, ಉಡುಪಿ ಜಿಲ್ಲೆ  ಹೆಬ್ರಿ ತಾಲ್ಲೂಕಿನ ತಿಂಗಳಮಕ್ಕಿ ಮತ್ತು ಮೂರಂಟೆಬೈಲು, ಕಾರ್ಕಳ ತಾಲ್ಲೂಕಿನ ಕನ್ಯಾಲ, ಬರ್ಕಳ, ಈದು ವ್ಯಾಪ್ತಿ ಹಾಗೂ ಬೆಳ್ತಂಗಡಿ ಗಡಿ ಭಾಗದಲ್ಲಿ ವಿದ್ಯುತ್‌ ಸಂಪರ್ಕ ನೀಡುವ ಪ್ರಸ್ತಾವ ದಶಕದಿಂದಲೂ ಇದೆ. ವಿದ್ಯುತ್‌ ಮಾರ್ಗಕ್ಕಾಗಿ ಅರಣ್ಯ ಕಡಿಯಬೇಕಾಗುತ್ತದೆ ಎನ್ನುವ ಆಕ್ಷೇಪವನ್ನು ಅರಣ್ಯ ಇಲಾಖೆ ಹಿಂದಿನಿಂದಲೂ ವ್ಯಕ್ತಪಡಿಸಲಾಗುತ್ತಿದೆ. 

ಈಗಾಗಲೇ ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಮೆಸ್ಕಾಂ) ಗೌಡ್ಲು ಹಾಗೂ ಮಲೆಕುಡಿಯ ಆದಿವಾಸಿ ಕುಟುಂಬಗಳೇ ಹೆಚ್ಚಿರುವ ಈ ಭಾಗಗಳಿಗೆ 11 ಕೆವಿ ವಿದ್ಯುತ್‌ ಮಾರ್ಗ ಸ್ಥಾಪಿಸಿ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಿದೆ. ಆದರೆ, ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿರುವುದರಿಂದ ವನ್ಯಜೀವಿ ಮಂಡಳಿ ಅನುಮತಿ ಕಡ್ಡಾಯ.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ವಿದ್ಯುತ್‌ ಯೋಜನೆಗಳಿಗೆ ಅನುಮತಿ ನಿರಾಕರಿಸಲಾಗಿದೆ. ಭೂಮಿಯೊಳಗೆ ಕೇಬಲ್‌ ಅಳವಡಿಸಿ ವಿದ್ಯುತ್‌ ಸಂಪರ್ಕ ನೀಡಬಹುದೇ ಇಲ್ಲವೇ ಪರ್ಯಾಯ ಮಾರ್ಗ ರೂಪಿಸಬಹುದೇ ಎನ್ನುವುದನ್ನು ಪರಿಶೀಲಿಸಿ ವರದಿ ನೀಡುವಂತೆ ಇಲಾಖೆ ಹಾಗೂ  ಮೆಸ್ಕಾಂಗೆ ಸೂಚನೆ ನೀಡಲಾಗಿದೆ.

ಈಗಾಗಲೇ ಕುದುರೆ ಮುಖ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಪುನವರ್ಸತಿ ಯೋಜನೆ ನಡೆಯುತ್ತಿದೆ. ಈ ಕುಟುಂಬಗಳು ಪುನರ್ವಸತಿ ಯೋಜನೆಯಡಿ ಬಂದರೆ ಅರಣ್ಯದಲ್ಲಿ ವಿದ್ಯುತ್‌ ಮಾರ್ಗ ರೂಪಿಸುವ ಪ್ರಮೇಯವೇ ಬರುವುದಿಲ್ಲ. ಈ ಎಲ್ಲಾ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಬೇಕು ಎಂದು ಮಂಡಳಿ ಸೂಚಿಸಿದೆ.

‘ಕುದುರೆ ಮುಖ್ಯ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಕೆಲವು ಕಡೆ ವಿದ್ಯುತ್‌ ಮಾರ್ಗಕ್ಕೆ ವನ್ಯಜೀವಿ ಮಂಡಳಿ ಅನುಮತಿ ನೀಡಿಲ್ಲ. ಪರಿಸರ ಮಹತ್ವದ ಜತೆಗೆ ಈಗಾಗಲೇ ಜಾರಿಯಲ್ಲಿರುವ ಅರಣ್ಯ ಪುನರ್ವಸತಿ ಯೋಜನೆಯೂ ಇದಕ್ಕೆ ಕಾರಣವಿರಬಹುದು. ಪುನರ್ವಸತಿ ಯೋಜನೆಗೆ ಕೆಲವು ಕುಟುಂಬಗಳು ಒಪ್ಪಿಗೆ ನೀಡುತ್ತಿಲ್ಲ. ಅಂತವರ ಹೇಳಿಕೆ ದಾಖಲಿಸಿ ಅಗತ್ಯ ಇರುವವರಿಗೆ ವಿದ್ಯುತ್‌ ಸಂಪರ್ಕ ನೀಡಲು ಪರ್ಯಾಯ ಮಾರ್ಗಗಳ ಕುರಿತಾದ ವರದಿಯನ್ನು ಮಂಡಳಿಗೆ ಸಲ್ಲಿಸಲಾಗುತ್ತದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ಶಿವರಾಮ ಬಾಬು ತಿಳಿಸಿದರು.

‘ಹಾಡಿ ವಿದ್ಯುದೀಕರಣ ಯೋಜನೆಗೆ ಮುಖ್ಯಮಂತ್ರಿ ಸೂಚಿಸಿದ ನಂತರ 7 ಹಾಡಿ, ಪ್ರಧಾನಮಂತ್ರಿ ಜುಗು ಯೋಜನೆಯಡಿ 9 ಮನೆಗಳನ್ನು ಗುರುತಿಸಿ ವಿದ್ಯುತ್ ಸಂಪರ್ಕ ನೀಡುವ ಪ್ರಕ್ರಿಯೆ ನಡೆದಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಅರಣ್ಯ ಇಲಾಖೆ ಆಕ್ಷೇಪಣೆಗೂ ಉತ್ತರ ನೀಡಲಾಗುವುದು’ ಎಂದು ಮೆಸ್ಕಾಂ ತಾಂತ್ರಿಕ ನಿರ್ದೇಶಕ ಹರೀಶ್‌ ಕುಮಾರ್‌ ಮಾಹಿತಿ ನೀಡಿದರು.

‘ ಸ್ಥಳೀಯ ವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅರಣ್ಯ ಇಲಾಖೆ ಪರ್ಯಾಯ ಮಾರ್ಗದೊಂದಿಗೆ ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ಕೊಡಬೇಕು. ಬೇರೆ ಕಡೆ ನೀಡುವಾಗ ಇಲ್ಲಿನವರಿಗೆ ಈ ಸೌಲಭ್ಯ ಸಿಗಬೇಕು. ಅರಣ್ಯ ಇಲಾಖೆ ಪುನರ್ವಸತಿ ಯೋಜನೆ ಬೇಡ ಎಂದು ಅಲ್ಲೇ ಜೀವನ ನಡೆಸುವವರಿಗಾದರೂ ವಿದ್ಯುತ್ ಬೇಡವೇ‘ ಎಂದು ಸ್ಥಳೀಯರು ಪ್ರಶ್ನಿಸಿದರು.

‌ಹಾಡಿ ಯೋಜನೆ ಕುಟುಂಬಗಳು 7 ಕುದುರೆ ಮುಖ ಪುನರ್ವಸತಿ ಪಟ್ಟಿಯಲ್ಲಿರುವ ಕುಟುಂಬ 1,300 ಒಪ್ಪಿಗೆ ನೀಡಿದ ಕುಟುಂಬ 653 ಪುನರ್ವಸತಿ ಪಡೆದ ಕುಟುಂಬ 353

ವಿದ್ಯುತ್‌ ಸಂಪರ್ಕಕ್ಕೆ ಅನುದಾನದ ಕೊರತೆ

ಶೃಂಗೇರಿ ತಾಲೂಕಿನ ಮುಂಡೋಡಿ ಕಚಿಗೆ ಭಾಗದಲ್ಲಿ ಇನ್ನೊಂದು ರೀತಿ ಸಮಸ್ಯೆಯಿದ್ದು ವಿದ್ಯುತ್‌ ಸಂಪರ್ಕ ನೀಡಲು ವಿಳಂಬವಾಗುತ್ತಲೇ ಇದೆ. ಹಿಂದೆ ಸೋಲಾರ್‌ ಉಪಕರಣ ನೀಡಿದ್ದರೂ ಹಾಳಾಗಿವೆ.  ‘ಚಿಕ್ಕಮಗಳೂರು ಜಿಲ್ಲಾಧಿಕಾರಿ ಸಭೆ ನಡೆಸಿದ್ದಾರೆ. ಕಂಬಗಳನ್ನು ಹಾಕಿ ವರ್ಷವೇ ಆಗಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೇಳಿದರೆ ಅನುದಾನ ಇಲ್ಲ ಎನ್ನುವ ಉತ್ತರ ಬರುತ್ತದೆ. ಸೌಲಭ್ಯಕ್ಕೆ ಇನ್ನು ಎಷ್ಟು ದಿನ ಜನ ಕಾಯಬೇಕು’ ಎಂದು ಸ್ಥಳೀಯರಾದ ಮಣಿ ಶೇಖರ್‌ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.