
ಚಿಕ್ಕಮಗಳೂರು: ಕುವೆಂಪು ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಶನಿವಾರ ನಡೆದ ಅಂತರ ಕಾಲೇಜು ಕಬಡ್ಡಿ ಟೂರ್ನಿಯಲ್ಲಿ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿ ಶಂಕರಘಟ್ಟ ತಂಡ ಪ್ರಥಮ ಸ್ಥಾನ ಗೆದ್ದುಕೊಂಡಿತು.
ಸಾಗರದ ಎಲ್.ಬಿ. ಮತ್ತು ಎಸ್.ಬಿ.ಎಸ್. ತಂಡ ದ್ವಿತೀಯ ಹಾಗೂ ಶಿವಮೊಗ್ಗ ಯು.ಸಿ.ಪಿ.ಇ. ಶಂಕರಘಟ್ಟ ತಂಡವು ತೃತೀಯ ಸ್ಥಾನ ಗೆದ್ದುಕೊಂಡಿತು. ಕುವೆಂಪು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಎನ್.ಡಿ. ವಿರೂಪಾಕ್ಷ ಹಾಗೂ ಐಡಿಎಸ್‌ಜಿ ಪ್ರಾಂಶುಪಾಲೆ ತಸನಿಮ್ ಕೌಸರ್ ಮನಿಯಾರ್ ಬಹುಮಾನ ವಿತರಿಸಿದರು.
ಕುವೆಂಪು ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ನಿರ್ದೇಶಕ ಎನ್.ಡಿ. ವಿರೂಪಾಕ್ಷ ಮಾತನಾಡಿ, ಎರಡು ದಿನಗಳ ಕಬಡ್ಡಿ ಟೂರ್ನಿಯನ್ನು ಕಾಲೇಜು ಆಡಳಿತ ಸುವ್ಯವಸ್ಥಿತವಾಗಿ ನಡೆಸಿದೆ ಎಂದರು.
ಕ್ರೀಡಾ ಚಟುವಟಿಕೆ ಜೊತೆಗೆ ಶೈಕ್ಷಣಿಕ ಅರ್ಹತೆಯನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಅರ್ಹತೆಯಿಲ್ಲದಿದ್ದರೆ ಸಮಾಜದಲ್ಲಿ ಬದುಕುವುದು ಕಷ್ಟವಾಗಲಿದೆ. ಉತ್ತರ ಭಾರತದ ಕ್ರೀಡಾಪಟು ಕ್ರೀಡೆಯಲ್ಲಿ ಸಾಧನೆ ಮಾಡಿದ್ದರು. ಆದರೆ, ಶೈಕ್ಷಣಿಕ ಅರ್ಹತೆ ಹೊಂದಿರದ ಕಾರಣ ಅವರ ಜೀವನ ಬೀದಿಗಾಡಿಗಳಲ್ಲಿ ವ್ಯಾಪಾರ ನಡೆಸುವಂತಾಗಿದೆ ಎಂದು ತಿಳಿಸಿದರು.
ಕ್ರೀಡೆ ಹಾಗೂ ವ್ಯಾಸಂಗದ ವೇಳೆ ವಿದ್ಯಾರ್ಥಿಗಳು ಸಮಯ ವ್ಯರ್ಥಗೊಳಿಸದಿರಿ. ಕ್ಷಣಕಾಲದ ಶ್ರೀಮಂತಿಕೆ, ವ್ಯಾಮೋಹಕ್ಕೆ ಒಳಗಾಗದೆ, ದೀರ್ಘಕಾಲದ ಜೀವನಕ್ಕೆ ಮೊದಲು ಆದ್ಯತೆ ನೀಡಬೇಕು. ಹರ್ಷದ ಕೂಳಿಗಿಂತ, ವರ್ಷದ ಕೂಳು ಮುಖ್ಯ. ಹಾಗಾಗಿ ಬದುಕನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು ಎಂದರು.
ಕಾಲೇಜು ಅಧ್ಯಾಪಕ ಕೆ.ಎನ್.ಲಕ್ಷ್ಮಿಕಾಂತ್ ಮಾತನಾಡಿ, ಎರಡು ದಿನದಲ್ಲಿ 28 ತಂಡಗಳು ತೀರ್ಪುಗಾರರ ನಿರ್ಧಾರ ಒಪ್ಪಿ ಟೂರ್ನಿ ಯಶಸ್ವಿಗೊಳಿಸಿದ್ದಾರೆ ಎಂದು ತಿಳಿಸಿದರು.
ಐಡಿಎಸ್‌ಜಿ ಸರ್ಕಾರಿ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಕೆ.ಸಿ. ಕುಮಾರಸ್ವಾಮಿ, ಪ್ರಾಧ್ಯಾಪಕ ಎಸ್.ವಿ. ನಾಗರಾಜ್, ಕ್ರೀಡಾ ಸಮಿತಿ ಸದಸ್ಯರಾದ ಎಸ್. ಮಹೇಶ್, ಸೋಮಶೇಖರ್, ಮೋಹನ್‌ಕುಮಾರ್, ಸುಧಾ, ದೈಹಿಕ ಶಿಕ್ಷಣ ಶಿಕ್ಷಕ ರವೀಂದ್ರೇಗೌಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.