
ರಂಭಾಪುರಿ ಪೀಠ (ಬಾಳೆಹೊನ್ನೂರು): ‘ಧರ್ಮ ಪರಂಪರೆ ಮತ್ತು ಆದರ್ಶಗಳನ್ನು ಪರಿಪಾಲಿಸಿ ಕೌಟುಂಬಿಕ ಶಾಂತಿ ನೆಮ್ಮದಿ ನೆಲೆಸುವುದರಲ್ಲಿ ಮಹಿಳೆಯರ ಪಾತ್ರ ಬಹು ದೊಡ್ಡದು. ಪ್ರಚಲಿತ ಸಂದರ್ಭದಲ್ಲಿ ಹೆಣ್ಣು ನಿರಂತರ ಆತಂಕಕ್ಕೆ ಒಳಗಾಗುತ್ತಿರುವುದು ನೋವಿನ ಸಂಗತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದರು.
ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಜರುಗಿದ ಧರ್ಮ ಮತ್ತು ಮಹಿಳೆ ಚಿಂತನ ಸಮಾರಂಭದ ಅವರು ಮಾತನಾಡಿದರು.
ಮಹಿಳೆ ಜೀವನದ ಪ್ರತಿಯೊಂದು ಘಟ್ಟದಲ್ಲಿ ವಿವಿಧ ಜವಾಬ್ದಾರಿಯನ್ನು ನಿಭಾಯಿಸುತ್ತಾಳೆ. ಸಾಲ ಮಾಡಿಯಾದರೂ ಕೂಲಿ ಮಾಡಿಯಾದರೂ ತನ್ನ ಸಂಸಾರವನ್ನು ಸಾಕುವ ತಾಕತ್ತು ಮಹಿಳೆಗಿದೆ. ಮಹಿಳೆಯರು ದೈಹಿಕವಾಗಿ ಪುರುಷರಷ್ಟು ಸದೃಢರಲ್ಲ ನಿಜ. ಆದರೆ ಮಹಿಳೆ ಮಾನಸಿಕತೆ ಪುರುಷರಿಗಿಂತ ಗಟ್ಟಿ. ಮಕ್ಕಳ ಹಾಗೂ ತನ್ನ ಮನೆತನದ ಭವಿಷ್ಯಕ್ಕೆ ಟೊಂಕಕಟ್ಟಿ ನಿಲ್ಲುತ್ತಾಳೆ. ಸ್ವಾಭಿಮಾನದ ಜೀವನವನ್ನು ಎಲ್ಲರೂ ಸಾಗಿಸೋಣ ಎಂದರು.
ಮಠಗಳು ಸರ್ಕಾರಕ್ಕೆ ಸಮಾನವಾಗಿ ಸಾಮಾಜಿಕ ಬದ್ಧತೆಯೊಂದಿಗೆ ಕೆಲಸ ಮಾಡುತ್ತಿವೆ. ಮಠ ಮಾನ್ಯಗಳ ಇಂಥ ಕೆಲಸವನ್ನು ನೋಡಿದರೆ ನನಗೆ ನನ್ನ ಧರ್ಮದ ಬಗ್ಗೆ, ವೀರಶೈವ ಲಿಂಗಾಯತ ಧರ್ಮದಲ್ಲಿ ಹುಟ್ಟಿದ್ದು ಬಹಳ ಹೆಮ್ಮೆ ಎನಿಸುತ್ತದೆ. ಅನ್ನ, ಅಕ್ಷರ, ಆರೋಗ್ಯ, ಕೃಷಿ ದಾಸೋಹವನ್ನು ಮಾಡುತ್ತಿರುವುದನ್ನು ನೋಡಿದರೆ ಸಂತೋಷ ಎನಿಸುತ್ತದೆ ಎಂದರು.
ಇಂಥ ಮುಕ್ತ ಕಾಲಘಟ್ಟದಲ್ಲಿ ಈ ಧರ್ಮ ಚೆನ್ನಾಗಿಲ್ಲ, ಆ ಧರ್ಮ ಚೆನ್ನಾಗಿಲ್ಲ ಅಂತ ಹೇಳುವ ಮೂಲಕ ಮುಗ್ದ ಮಕ್ಕಳ, ಯುವ ಜನರ ಭಾವನೆಗಳನ್ನು ಕೆರಳಿಸುತ್ತಿದ್ದೇವೆ. ಎಷ್ಟು ದಿನ ಇರುತ್ತೀವಿ ಅನ್ನೋದು ಮುಖ್ಯ ಅಲ್ಲ, ಹೇಗೆ ಇದ್ದೀವಿ ಅನ್ನುವುದು ಮುಖ್ಯ ಎಂದರು.
ಶಿವಾನಂದ ಎಸ್ಟೇಟಿನಲ್ಲಿ ಪೂಜಾ-ಪ್ರಸಾದ, ಸಂಜೆ ಗೋವಿನಕೋವಿ ಬಸವಣ್ಣ ದೇವರ ದೇವಸ್ಥಾನದಲ್ಲಿ ಕೆಂಡಾರ್ಚನೆ ನಡೆಯಿತು. ಭದ್ರಾ ನದಿ ತಟದಲ್ಲಿ ನಡೆದ ಸುರಗಿ ಸಮಾರಾಧನೆಯೊಂದಿಗೆ ರಂಭಾಪುರಿ ಜಾತ್ರಾ ಮಹೋತ್ಸವಕ್ಕೆ ಅಂತಿಮ ತೆರೆ ಎಳೆಯಲಾಯಿತು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಟಿ.ಡಿ.ರಾಜೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಾನ್, ಬಿ.ಸಿ.ಗೀತಾ, ಚಂದ್ರಕಲಾ ಬೆಳ್ಳಾವರ, ಇಂಧುಮತಿ ಮಾನ್ವಿ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ಎಂ.ಆರ್.ವೆಂಕಪ್ಪಗೌಡ, ಅಬ್ದುಲ್ ವಹೀದ್, ಕೊಟ್ಟೂರು ಚಾನುಕೋಟಿಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿ, ಅನ್ನಪೂರ್ಣಮ್ಮ ಶಿವರಾಮೇಗೌಡ,ವಿದ್ಯಾನಂದ ಭಟ್, ಚಾರ್ಲ್ಸ್ ಮಸ್ಕರೆನಿಸ್ಸ, ಅಬ್ದುಲ್ ವಹೀದ್ ಬೈರೇಗುಡ್ಡ ಭಾಗವಹಿಸಿದ್ದರು.
ಆಧುನಿಕ ಯುಗದಲ್ಲಿ ಮಾನಸಿಕ ಶಾಂತಿ ಇಲ್ಲವಾಗಿದೆ. ಜಾಗತೀಕರಣ ಉದಾರೀಕರಣ ಮತ್ತು ಖಾಸಗೀಕರಣ ಬೆಳೆದರಷ್ಟೇ ಸಾಲದು. ಮನುಷ್ಯನಲ್ಲಿ ಮಾನವೀಯ ಅಂತ:ಕರಣಗಳು ಬೆಳೆಯಬೇಕು. ಸಂಸ್ಕೃತಿ ಸಂವರ್ಧನೆಗೆ ಮಹಿಳೆಯರ ಕೊಡುಗೆ ಅಪಾರ.ವೀರಸೋಮೇಶ್ವರ ಸ್ವಾಮೀಜಿ ರಂಭಾಪುರಿ ಪೀಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.