ಕಡೂರು (ಚಿಕ್ಕಮಗಳೂರು): ತಾಲ್ಲೂಕಿನ ಎಮ್ಮೆದೊಡ್ಡಿ ಬಳಿ ಗುರುವಾರ ಬೈಕ್ ಸವಾರರ ಮೇಲೆ ಚಿರತೆ ದಾಳಿ ಮಾಡಿದ್ದು, ಸುದ್ದಿ ತಿಳಿದು ಗ್ರಾಮಸ್ಥರು ಚಿರತೆ ಅಟ್ಟಾಡಿಸಿ ಕಲ್ಲುಗಳನ್ನು ಎಸೆದಿದ್ದಾರೆ.
ಈ ಘಟನೆಯ ಕೆಲ ಹೊತ್ತಿನಲ್ಲೇ ಸಮೀಪದ ಮದಗದ ಕೆರೆಯಲ್ಲಿ ಚಿರತೆಯೊಂದರ ಕಳೇಬರವು ಪತ್ತೆಯಾಗಿದೆ.
‘ಕಳೇಬರದಲ್ಲಿ ಗಾಯದ ಗುರುತುಗಳಿವೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಇದು, ಅದೇ ಚಿರತೆಯೊ, ಬೇರೆಯದೊ ಎಂದು ತಿಳಿಯಲಿದೆ’ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು ತಿಳಿಸಿದ್ದಾರೆ.
ಬೆಳಿಗ್ಗೆ ಸಖರಾಯಪಟ್ಟಣಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ಹೊಸ ಸಿದ್ಧರಹಳ್ಳಿಯ ಮಂಜಪ್ಪ(56), ಹಳೇ ಸಿದ್ಧರಹಳ್ಳಿಯ ಮೂರ್ತಪ್ಪ (55) ಚಿರತೆ ದಾಳಿಯಿಂದ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿರತೆ ದಾಳಿ ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ನೂರಾರು ಜನರು ಚಿರತೆಯನ್ನು ಅಟ್ಟಾಡಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆ ಸೆರೆಗೆ ಬೋನು ಇರಿಸಿದರು.ಇದೇ ವೇಳೆ ಚಿರತೆ ಮೃತದೇಹ ಕಂಡುಬಂತು.
‘ಬೈಕ್ ಸವಾರರ ಮೇಲೆ ದಾಳಿ ಮಾಡಿರುವ ಚಿರತೆಯೇ ಬೇರೆ, ಇಲ್ಲಿ ಸತ್ತಿರುವ ಚಿರತೆಯೇ ಬೇರೆ. ದಾಳಿ ಮಾಡಿರುವ ಚಿರತೆ ಸೆರೆ ಹಿಡಿದು ಸ್ಥಳಾಂತರ ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.
‘ಚಿರತೆ ಕಳೇಬರದ ಮರಣೋತ್ತರ ಪರೀಕ್ಷೆ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು ಅವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.