ADVERTISEMENT

ನರಸಿಂಹರಾಜಪುರ: ಉದ್ಘಾಟನೆ ಕಾಣದ ನೂತನ ಗ್ರಂಥಾಲಯ

ಕೆ.ವಿ.ನಾಗರಾಜ್
Published 1 ಸೆಪ್ಟೆಂಬರ್ 2025, 4:21 IST
Last Updated 1 ಸೆಪ್ಟೆಂಬರ್ 2025, 4:21 IST
ನರಸಿಂಹರಾಜಪುರದ ನ್ಯಾಯಾಲಯದ ಸಮೀಪ ನಿರ್ಮಿಸಿರುವ ನೂತನ ಗ್ರಂಥಾಲಯ ಕಟ್ಟಡ
ನರಸಿಂಹರಾಜಪುರದ ನ್ಯಾಯಾಲಯದ ಸಮೀಪ ನಿರ್ಮಿಸಿರುವ ನೂತನ ಗ್ರಂಥಾಲಯ ಕಟ್ಟಡ   

ನರಸಿಂಹರಾಜಪುರ: ತಾಲ್ಲೂಕು ಕೇಂದ್ರದಲ್ಲಿ ನೂತನ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಿ ನಾಲ್ಕೈದು ತಿಂಗಳು ಕಳೆದರೂ ಉದ್ಘಾಟನೆಯಾಗದೆ ಇರುವುದರಿಂದ ಸಾರ್ವಜನಿಕರಿಗೆ ಗ್ರಂಥಾಲಯ ಸೌಲಭ್ಯ ದೊರಕದಂತಾಗಿದೆ.

ಪಟ್ಟಣದ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿದ್ದ ಸಾರ್ವಜನಿಕ ಗ್ರಂಥಾಲಯವನ್ನು 1915ರಲ್ಲಿ ಅಂದಿನ ಮೈಸೂರು ರಾಜರಾಗಿದ್ದ ಕಂಠೀರವ ನರಸಿಂಹರಾಜ ಒಡೆಯರು ಉದ್ಘಾಟಿಸಿದ್ದರು. ಇಲ್ಲಿದ್ದ ಗ್ರಂಥಾಲಯವನ್ನು ಪಟ್ಟಣ ಪಂಚಾಯಿತಿ ಕಚೇರಿಗೆ ಬಳಸಿಕೊಂಡ ನಂತರ ಗ್ರಂಥಾಲಯವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ನಂತರ ಪಟ್ಟಣದ ನ್ಯಾಯಾಲಯದ ಸಮೀಪ ಕಟ್ಟಡವನ್ನು ನಿರ್ಮಿಸಿ ಅಲ್ಲಿಗೆ ವರ್ಗಾಯಿಸಲಾಗಿತ್ತು. ಈ ಕಟ್ಟಡದಲ್ಲಿ ಹಲವು ವರ್ಷ ಓದುಗರಿಗೆ ಉತ್ತಮ ಸೇವೆ ಲಭ್ಯವಾಗುತ್ತಿತ್ತು. ಈ ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಸರ್ಕಾರದಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ.

ನೂತನ ಕಟ್ಟಡ ನಿರ್ಮಿಸುವ ಸಲುವಾಗಿ ಹಿಂದಿನ ಗ್ರಂಥಾಲಯದಲ್ಲಿದ್ದ ಪುಸ್ತಕಗಳನ್ನು ಸಂತೆ ಮಾರುಕಟ್ಟೆಯಲ್ಲಿರುವ ಪಟ್ಟಣ ಪಂಚಾಯಿತಿ ಮಳಿಗೆಗೆ ವರ್ಗಾಯಿಸಲಾಗಿದೆ. ಸರ್ಕಾರದಿಂದ ಬಿಡುಗಡೆಯಾದ ₹40 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿ ನಾಲ್ಕೈದು ತಿಂಗಳು ಕಳೆದಿದ್ದರೂ ಗ್ರಂಥಾಲಯ ಕಟ್ಟಡವೂ ಉದ್ಘಾಟನೆಯಾಗಿಲ್ಲ. ಸಾರ್ವಜನಿಕರಿಗೆ ಗ್ರಂಥಾಲಯ ಸೌಲಭ್ಯವೂ ಇಲ್ಲವಾಗಿದೆ.

ADVERTISEMENT

ಗ್ರಂಥಾಲಯದ ಕಟ್ಟಡ ನಿರ್ಮಾಣವಾಗಿದ್ದರೂ ಹಸ್ತಾಂತರವಾಗಿಲ್ಲ. ಪುಸ್ತಕಗಳನ್ನು ಸಮರ್ಪವಾಗಿ ಜೋಡಿಸಲು ಹೊಸದಾಗಿ ರ‍್ಯಾಕ್ ನಿರ್ಮಾಣ ಮಾಡಬೇಕಾಗಿದೆ. ತಾತ್ಕಾಲಿಕವಾಗಿ ಸಂತೆ ಮಾರುಕಟ್ಟೆಯಲ್ಲಿರುವ ಪಟ್ಟಣ ಪಂಚಾಯಿತಿಗೆ ಸೇರಿದ ಕಟ್ಟಡದಲ್ಲಿ ಪುಸ್ತಕಗಳನ್ನು ದಾಸ್ತಾನು ಮಾಡಲಾಗಿದೆ. ಜನರಿಗೆ ದಿನಪತ್ರಿಕೆಗಳನ್ನು ಓದಲು ಅವಕಾಶ ಮಾಡಿಕೊಡಲಾಗಿದೆ ಎಂದು ಗ್ರಂಥಾಲಯದ ಸಿಬ್ಬಂದಿಯೊಬ್ಬರು ತಿಳಿಸಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ಹಲವು ಇಲಾಖೆಯ ಕಟ್ಟಡ ಕಾಮಗಾರಿಗಳು ಪೂರ್ಣಗೊಂಡಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಸಮಯ ನಿಗದಿ ಪಡಿಸಿ ಶೀಘ್ರದಲ್ಲೇ ಗ್ರಂಥಾಲಯ ಕಟ್ಟಡ ಉದ್ಘಾಟಿಸಲಾಗುವುದು
- ಟಿ.ಡಿ.ರಾಜೇಗೌಡ, ಶಾಸಕ

ಗ್ರಂಥಾಲಯ ಕಟ್ಟಡ ಉದ್ಘಾಟನೆ ಆಗದಿರುವುದರಿಂದ ಸಾರ್ವಜನಿಕರಿಗೆ, ಶಾಲಾ, ಕಾಲೇಜು ಮಕ್ಕಳಿಗೆ ಗ್ರಂಥಾಲಯದ ಸೌಲಭ್ಯ ಲಭ್ಯವಾಗದಂತಾಗಿದೆ. ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಶೀಘ್ರದಲ್ಲಿ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಸಾರ್ವಜನಿಕರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕು. ಉತ್ತಮ ಗ್ರಂಥಪಾಲಕರನ್ನು ನೇಮಿಸಬೇಕು ಎಂದು ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ವಿನಾಯಕ್ ಮಾಳೂರು ದಿಣ್ಣೆ ಆಗ್ರಹಿಸಿದರು.

ಗ್ರಂಥಾಲಯಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ನೀತಿ ಅನುಸರಿಸುತ್ತಿದೆ. ಜನಪ್ರತಿನಿಧಿಗಳು ಗ್ರಂಥಾಲಯದ ನಿರ್ವಹಣೆಯ ಬಗ್ಗೆ ಗಮನಹರಿಸಬೇಕು. ನೂತನ ಗ್ರಂಥಾಲಯ ಕಟ್ಟಡ ಉದ್ಘಾಟಿಸಲು ಕ್ರಮ ಕೈಗೊಳ್ಳಬೇಕು ಎಂದು ಪುಸ್ತಕ ಪ್ರೇಮಿಗಳು ಆಗ್ರಹಿಸಿದ್ದಾರೆ.

ನರಸಿಂಹರಾಜಪುರದ ನ್ಯಾಯಾಲಯದ ಸಮೀಪ ನಿರ್ಮಿಸಿರುವ ನೂತನ ಗ್ರಂಥಾಲಯ ಕಟ್ಟಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.