ADVERTISEMENT

ದೇಗುಲಗಳಲ್ಲಿ ದರ್ಶನಕ್ಕೆ ಅವಕಾಶ

ಲಾಡ್ಜ್‌ ಶುರು, ಹೋಟೆಲ್‌ನಲ್ಲಿ ಆಹಾರ ಸೇವನೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 15:27 IST
Last Updated 7 ಜೂನ್ 2020, 15:27 IST
ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಪ್ರವೇಶ ಮಾರ್ಗದಲ್ಲಿ ಅಂಕಗಳನ್ನು ಬರೆಯಲಾಗಿದೆ. ಭಿತ್ತಿಪತ್ರಗಳನ್ನು ಅಳವಡಿಸಲಾಗಿದೆ.
ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಪ್ರವೇಶ ಮಾರ್ಗದಲ್ಲಿ ಅಂಕಗಳನ್ನು ಬರೆಯಲಾಗಿದೆ. ಭಿತ್ತಿಪತ್ರಗಳನ್ನು ಅಳವಡಿಸಲಾಗಿದೆ.   

ಚಿಕ್ಕಮಗಳೂರು: ಇದೇ 8ರಿಂದ ಮುಜರಾಯಿ ದೇಗುಲಗಳಲ್ಲಿ ಸಾರ್ವಜನಿಕರಿಗೆ ದರ್ಶನ, ಮಸೀದಿಗಳು ಮತ್ತು ಚರ್ಚ್‌ಗಳಲ್ಲಿ ಪ್ರಾರ್ಥನೆ, ಹೋಟೆಲ್‌ಗಳಲ್ಲಿ ಆಹಾರ, ಪಾನೀಯ ಸೇವನೆಗೆ, ಲಾಡ್ಜ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಕಾಫಿನಾಡಿನ ದೇಗುಲ, ಹೋಟೆಲ್‌, ಲಾಡ್ಜ್‌ ಇತರೆಡೆಗಳಲ್ಲಿ ಭಾನುವಾರ ಸಿದ್ಧತೆಗಳು ನಡೆದವು.

ಕೋವಿಡ್‌–19 ಹರಡದಂತೆ ತಡೆ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನು ಪಾಲಿಸಲು ಸೂಚನೆ ನೀಡಲಾಗಿದೆ. ಲಾಡ್ಜ್‌ ಕಟ್ಟಡ, ಆವರಣ, ದೇಗುಲ ಆವರಣ ಇತರೆಡೆಗಳಲ್ಲಿ ಸಚ್ಛತಾ ಕಾರ್ಯಗಳು ಭಾನುವಾರ ನಡೆದವು.

ಬಾಬಾಬುಡನ್‌ ಗಿರಿಯಲ್ಲಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ, ಕಳಸದ ಕಳಸೇಶ್ವರ ದೇಗುಲ, ಕಿಗ್ಗಾ ಶುಷ್ಯಶೃಂಗ ದೇಗುಲ ಸಹಿತ ಮುಜರಾಯಿ ವ್ಯಾಪ್ತಿಯ ದೇಗುಲಗಳಲ್ಲಿ ಸೋಮವಾರದಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಭಕ್ತರ ಉಷ್ಣಾಂಶ ತಪಾಸಣೆ ಮಾಡಬೇಕು. ಕೈಗಳಿಗೆ ಸ್ಯಾನಿಟೈಸರ್‌ ಹಾಕಬೇಕು. ಅಂತರ ಕಾಪಾಡಬೇಕು. ಮಾಸ್ಕ್‌ ಧರಿಸಿಬೇಕು. ವಿಗ್ರಹ, ಗೋಡೆ, ಕಂಬ, ಪಲ್ಲಕ್ಕಿ, ಗ್ರಂಥ ಇತ್ಯಾದಿ ಮುಟ್ಟುವಂತಿಲ್ಲ ಇತ್ಯಾದಿ ಮಾರ್ಗಸೂಚಿ ಪಾಲನೆಗೆ ಸೂಚಿಸಲಾಗಿದೆ.

‘ಇಲಾಖೆಯಿಂದ ಸೂಚಿಸಿರುವ ಮಾರ್ಗಸೂಚಿ ಪಾಲಿಸುವಂತೆ ತಿಳಿಸಲಾಗಿದೆ. ದರ್ಶನಕ್ಕೆ ಮಾತ್ರ ಅವಕಾಶ ಇದೆ. ಬೇರೆ ಕೈಂಕರ್ಯಗಳು ಇರಲ್ಲ’ ಎಂದು ಮುಜರಾಯಿ ಇಲಾಖೆಯ ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದೇಗುಲ, ಹೋಟೆಲ್‌, ಲಾಡ್ಜ್‌ ಎಲ್ಲ ಕಡೆ ಅಂತರ ಕಾಪಾಡುವ ನಿಟ್ಟಿನಲ್ಲಿ ಅಂಕಗಳನ್ನು ಬರೆಯಲಾಗಿದೆ. ಆವರಣಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ.

‘ಲಾಡ್ಜ್‌ ಕಟ್ಟಡವನ್ನು ಸ್ವಚ್ಛ ಮಾಡಿಸಿದ್ದೇವೆ. ಒಂದು ರೂಮಿಗೆ ಒಬ್ಬರಿಗೆ ಮಾತ್ರ ತಂಗಲು ಅವಕಾಶ. ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಮಾರ್ಗಸೂಚಿಗಳ ಪಾಲನೆಗೆ ನಿಗಾ ವಹಿಸಿದ್ದೇವೆ’ ಎಂದು ಸೌಂದರ್ಯ ಲಾಡ್ಜ್‌ನ ಬಿ.ಸಿ.ರಾವ್‌ ತಿಳಿಸಿದರು.

‘ಹೋಟೆಲ್‌ಗಳಲ್ಲಿ ಒಂದು ಟೇಬಲ್‌ನಲ್ಲಿ ಕೂರಲು ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಶುಚಿ ಕಾಪಾಡಲು ಒತ್ತು ನೀಡಲಾಗುವುದು. ಕೆಲಸ ಮಾಡುವವರಿಗೆ ಕೈಗವುಸು, ತಲೆಗೆ ಕ್ಯಾಪ್‌ ನೀಡುವಂತೆ ತಿಳಿಸಿದ್ದೇವೆ’ ಎಂದು ಹೋಟೆಲ್‌ ಮಾಲೀಕರ ಸಂಘದ ಕಾರ್ಯದರ್ಶಿ ರಾಜಣ್ಣ ತಿಳಿಸಿದರು

‘ಮಸೀದಿಗಳಲ್ಲಿ ನಮಾಜ್‌ ನಿಟ್ಟಿನಲ್ಲಿ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತೇವೆ. ವ್ಯವಸ್ಥೆ ಕಲ್ಪಿಸಿದ್ದೇವೆ’ ಎಂದು ಅಂಜುಮನ್‌ ಮಸೀದಿಯ ಗುರು ಔರಂಗಜೇಬ್‌ಅಲಂಗೀರ್‌ ರಶಾದಿ ತಿಳಿಸಿದರು.

‘ಹಿರೇಮಗಳೂರಿನ ಭಾರ್ಗವಪುರಿ ರಾಮಚಂದ್ರಸ್ವಾಮಿ ದೇಗುಲದಲ್ಲಿ ದರ್ಶನಕ್ಕೆ ಅವಕಾಶ ಇರುತ್ತದೆ. ಭಕ್ತರು ಅಂತರ ಕಾಪಾಡಿಕೊಂಡು ದರ್ಶನ ಪಡೆಯಬಹುದು’ ಎಂದು ದೇಗುಲದ ಅರ್ಚಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.