ADVERTISEMENT

ಎಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಒಬಿಸಿ ಸಮಾವೇಶ: ಮಧುಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 7:38 IST
Last Updated 5 ನವೆಂಬರ್ 2022, 7:38 IST
ಮಧುಬಂಗಾರಪ್ಪ
ಮಧುಬಂಗಾರಪ್ಪ   

ಚಿಕ್ಕಮಗಳೂರು: ‘ಕಾಂಗ್ರೆಸ್‌ ಜಿಲ್ಲಾ ಸಮಿತಿಯ ಹಿಂದುಳಿದವರ್ಗಗಳ ಘಟಕಕ್ಕೆ ಪದಾಧಿಕಾರಿಗಳ ನೇಮಕ ಆರಂಭಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಪ್ರಕ್ರಿಯೆ ನಡೆಸಲಾಗುತ್ತದೆ’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಧುಬಂಗಾರಪ್ಪ ಇಲ್ಲಿ ಶುಕ್ರವಾರ ತಿಳಿಸಿದರು.

‘ಚಿತ್ರದುರ್ಗದಿಂದ ಪ್ರಕ್ರಿಯೆ ಆರಂಭಿಸಿದ್ದೇನೆ. ಸ್ಥಳೀಯವಾಗಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ, ವರಿಷ್ಠರ ಒಪ್ಪಿಗೆ ಪಡೆದು ಜಿಲ್ಲಾ, ಬ್ಲಾಕ್ ಮಟ್ಟಕ್ಕೆ ನೂತನ ಪದಾಧಿಕಾರಿಗಳು ಆಯ್ಕೆ ಮಾಡುವ ಹೊಸ ಹೆಜ್ಜೆ ಇಟ್ಟಿದ್ದೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಚಿಕ್ಕ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡುತ್ತೇವೆ. ಈ ಸಮುದಾಯಗಳಿಗೆ ರಾಜಕೀಯ ಅರಿವು, ಪ್ರಾತಿನಿಧ್ಯ ನೀಡಲು, ಪ್ರಣಾಳಿಕೆಯಲ್ಲೂ ಕಾರ್ಯಕ್ರಮಗಳನ್ನು ನೀಡಲು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ಎಲ್ಲ ಜಿಲ್ಲೆಗಳಲ್ಲೂ ಒಬಿಸಿ ಸಮಾವೇಶ ಮಾಡುತ್ತೇವೆ. ಇದೆಲ್ಲವೂ ಪಕ್ಷ ಸಂಘಟನೆಗೂ ಅನುಕೂಲವಾಗಲಿದೆ’ ಎಂದು ವಿವರಿಸಿದರು.

‘ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ ಭಾಗದಲ್ಲಿ ಒತ್ತು ನೀಡುವಂತೆ ಪಕ್ಷ ತಿಳಿಸಿದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿದ್ದೇನೆ’ ಎಂದರು.

‘ಕೆಪಿಸಿಸಿ ಪ್ರಣಾಳಿಕೆ ತಯಾರಿ ಸಮಿತಿಯ ಉಪಾಧ್ಯಕ್ಷ ಜವಾಬ್ದಾರಿಯನ್ನು ವಹಿಸಿದ್ದಾರೆ. ಡಾ.ಜಿ.ಪರಮೇಶ್ವರ್‌ ಅವರು ಸಮಿತಿ ಅಧ್ಯಕ್ಷರಾಗಿದ್ದಾರೆ. ಈ ಬಾರಿ ರಾಜ್ಯ ಪ್ರಣಾಳಿಕೆ ಜೊತೆಗೆ ಜಿಲ್ಲಾವಾರು ಪ್ರತ್ಯೇಕ ಪ್ರಣಾಳಿಕೆ ಮಾಡಬೇಕು ಎಂಬ ಸಲಹೆ ಇದೆ. ಈ ನಿಟ್ಟಿನಲ್ಲಿ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಮಾಹಿತಿ ನೀಡುತ್ತಾರೆ’ ಎಂದು ಹೇಳಿದರು.

‘ಭಾರತ್‌ ಜೋಡೊ ಯಾತ್ರೆಗೆ ರಾಜ್ಯದಲ್ಲಿ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ. ಪಕ್ಷದ ಎಲ್ಲ ವಿಭಾಗಗಳು ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಿವೆ. ಇದೊಂದು ಪರಿವರ್ತನೆಯ ನಿಟ್ಟಿನ ಪಾದಯಾತ್ರೆ’ ಎಂದು ಹೇಳಿದರು.

‘ಬಿಜೆಪಿಯುವರು ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡಿಲ್ಲ. ಕಸ್ತೂರಿ ರಂಗನ್‌ ವರದಿಗೆ ಹಲವು ಜಿಲ್ಲೆಗಳಲ್ಲಿ ವಿರೋಧ ವ್ಯಕ್ತವಾಗಿದೆ. ಈ ಜಿಲ್ಲೆಗಳನ್ನು ಪ್ರತಿನಿಧಿಸುವ ಸಂಸದರು ವರದಿ ವಿರುದ್ಧ ‌ಧ್ವನಿ ಎತ್ತಿಲ್ಲ’ ಎಂದು ಆರೋಪಿಸಿದರು.

‘ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಹಿನ್ನೀರಿನ ಪ್ರದೇಶ ಜನರು ವಿದ್ಯುತ್‌ ಯೋಜನೆ ಜಾಗ ಕೊಟ್ಟಿದ್ದರು. ಆದರೆ, ಸರ್ಕಾರ ಆ ಜನರಿಗೆ ವ್ಯವಸ್ಥೆ ಕಲ್ಪಿಸಿಲ್ಲ. ಬೆಳಕು ಕೊಟ್ಟ ಜನರನ್ನು ಕತ್ತಲಲ್ಲಿ ಕೂರಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಹಲವರಿಗೆ192(ಎ) ಭೂಕಬಳಿಕೆ ಕಾಯ್ದೆಯಡಿ ನೋಟಿಸ್‌ ನೀಡಿದ್ದಾರೆ’ ಎಂದು ದೂರಿದರು.

‘ಸರ್ಕಾರವು ವಿದ್ಯುತ್‌ ಕ್ಷೇತ್ರ ಖಾಸಗೀಕರಣಕ್ಕೆ ಮುಂದಾಗಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸಿದರೆ, ಮೀಟರ್‌ಗಳನ್ನು ಕಿತ್ತು ಕಚೇರಿಗಳ ಮುಂದೆ ಎಸೆಯುವ ಆಂದೋಲನ ಆಯೋಜಿಸುತ್ತೇವೆ’ ಎಂದು ಎಚ್ಚರಿಸಿದರು.

‘ಬಿಜೆಪಿ ಸರ್ಕಾರದ ಧರ್ಮದ ಹೆಸರಿನ ರಾಜಕಾರಣ, ಬೆಲೆ ಏರಿಕೆ ಬಿಸಿ ಎಲ್ಲವೂ ಜನರಿಗೆ ಗೊತ್ತಾಗಿದೆ. ಬದಲಾವಣೆ ಮಾಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಡಾ.ಕೆ.ಪಿ.ಅಂಶುಮಂತ್‌, ಮಂಜುನಾಥ್‌, ರೂಬೆನ್‌ ಮೊಸೆಸ್‌, ಶಿವಾನಂದಸ್ವಾಮಿ, ನಯಾಜ್‌, ಎ.ಎನ್‌.ಮಹೇಶ್‌, ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.