ನರಸಿಂಹರಾಜಪುರ: ‘ತಾಲ್ಲೂಕು ಕೇಂದ್ರ ಅನಾದಿಯಿಂದಲೂ ಸರ್ವಧರ್ಮ ಸಮನ್ವಯ ಕಾಪಾಡಿಕೊಂಡು ಬಂದಿದ್ದು, ಇದನ್ನು ಮುಂದುವರಿಸಬೇಕು’ ಎಂದು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಸೋಮವಾರ ನಡೆದ ದರ್ಗಾಯೇ ಹಝ್ರತ್ ಹಯಾತ್ ಷಾವಲಿ ಅಲೈ ಅವರ 136ನೇ ಉರುಸ್ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊನ್ನೆಕೂಡಿಗೆ ಸೇತುವೆ ನಿರ್ಮಾಣಕ್ಕೆ ₹35ಕೋಟಿ ಅನುದಾನ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕಡಹಿನಬೈಲು ಏತನೀರಾವರಿ ಅನುದಾನದಿಂದ 69 ಕೆರೆಗಳಿಗೆ ನೀರು ತುಂಬಿಸಿದ್ದು ಕೃಷಿಗೆ ಸಹಾಯಕವಾಗಿದೆ. ಪಟ್ಟಣದ ರಸ್ತೆ ಅಭಿವೃದ್ಧಿಗೆ ₹60 ಕೋಟಿ ಅನುದಾನ ಲಭಿಸಿದ್ದು, ರಸ್ತೆ ವಿಸ್ತರಣೆ ನಂತರ ಪಟ್ಟಣದ ಚಿತ್ರಣ ಬದಲಾಗಲಿದೆ’ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, 'ನರಸಿಂಹರಾಜಪುರ ಸಹಬಾಳ್ವೆಗೆ ಹೆಸರಾಗಿದೆ. ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ ಧರ್ಮದ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗಿದೆ’ ಎಂದರು.
ಜೆಡಿಎಸ್ ರಾಜ್ಯ ಘಟಕದ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ‘ಧಾರ್ಮಿಕ ಸಂಸ್ಥೆಗಳು ರಾಜಕೀಯ ಮುಕ್ತವಾಗಿರಬೇಕು. ಮುಸ್ಲಿಂ ಧರ್ಮದ ಆಚರಣೆ ಹಿಂದೂ ಧರ್ಮದ ವಿರೋಧವಾಗಬಾರದು. ಹಿಂದೂ ಧರ್ಮದ ಆಚರಣೆ ಮುಸ್ಲಿಂ ಧರ್ಮದ ವಿರೋಧವಾಗಬಾರದು. ಎಲ್ಲಾ ಧರ್ಮಿಯರು ಎಲ್ಲಾ ಧರ್ಮದ ಆಚರಣೆಗಳಲ್ಲಿ ಭಾಗವಹಿಸಿ ಸಂಭ್ರಮಿಸಬೇಕು’ ಎಂದರು.
ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ, ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿದರು. ಉರುಸ್ ಆಚರಣಾ ಸಮಿತಿ ಅಧ್ಯಕ್ಷ ಜೀಶಾನ್ ಅಧ್ಯಕ್ಷತೆ ವಹಿಸಿದ್ದರು.
ಜಾಮೀಯ ಮಸೀದಿ ಮೌಲಾನ ಅಮ್ಜದ್ ಖಾನ್ ಮಝ್ಲರಿ, ಅಲ್ ನೂರ್ ಮಸೀದಿ ಮೌಲಾನ ಅಬ್ದುಲ್ಲಾ ಮಿಫ್ತಾಹಿ, ಇಂದಿರಾನಗರ ನೂರುಲ್ ಹುದಾ ಮದ್ರಸದ ಮೌಲಾನ ಎಂ.ಎ. ದಾವುದ್ ತೌಸಿಫ್ ರಝಾ ಅಲ್ ಅಝ್ಲರಿ, ಹಫೀಜ್ ಓ ಖಾರಿ ಅಬ್ಧುಲ್ ಖದ್ಧೂಸ್, ಜಾಮೀಯ ಮಸೀದಿ ಅಧ್ಯಕ್ಷ ನಾಸೀರ್ ಖಾನ್, ಪ್ರಧಾನ ಕಾರ್ಯದರ್ಶಿ ಸಾಧಿಕ್ ಭಾಷ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ಉಪಾಧ್ಯಕ್ಷೆ ಉಮಾಕೇಶವ್, ಸದಸ್ಯ ಮುನಾವರ ಪಾಷ, ಅಬ್ದುಲ್ ಕರೀಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.