ADVERTISEMENT

ಮನರೇಗಾ: ಮೂಲ ಕಾಯ್ದೆ ತಿರುಚುವ ಯತ್ನ

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಆರೋಪ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 7:11 IST
Last Updated 11 ಫೆಬ್ರುವರಿ 2026, 7:11 IST
ನರಸಿಂಹರಾಜಪುರದ ತಾಲ್ಲೂಕು ಕಾಂಗ್ರೆಸ್ ಘಟಕದ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿಬಿ –ಜಿ ರಾಮ್ ಜಿ ಯೋಜನೆಯ ದುಷ್ಪರಿಣಾಮದ ಭಿತ್ತಿಪತ್ರವನ್ನು ಕೆ.ಪಿ.ಅಂಶುಮಂತ್ ಬಿಡುಗಡೆ ಮಾಡಿದರು
ನರಸಿಂಹರಾಜಪುರದ ತಾಲ್ಲೂಕು ಕಾಂಗ್ರೆಸ್ ಘಟಕದ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿಬಿ –ಜಿ ರಾಮ್ ಜಿ ಯೋಜನೆಯ ದುಷ್ಪರಿಣಾಮದ ಭಿತ್ತಿಪತ್ರವನ್ನು ಕೆ.ಪಿ.ಅಂಶುಮಂತ್ ಬಿಡುಗಡೆ ಮಾಡಿದರು   

ನರಸಿಂಹರಾಜಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮೂಲ ಸ್ವರೂಪವನ್ನು ಕೇಂದ್ರ ಸರ್ಕಾರ ತಿರುಚುವ ಪ್ರಯತ್ನ ಮಾಡುತ್ತಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಆರೋಪಿಸಿದರು.

ಇಲ್ಲಿನ ತಾಲ್ಲೂಕು ಕಾಂಗ್ರೆಸ್ ಘಟಕದ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯ ಸಾಧಕಗಳು ಹಾಗೂ ವಿಬಿ–ಜಿ ರಾಮ್ ಜಿ ಯೋಜನೆಯ ದುಷ್ಟಪರಿಣಾಮಗಳ ಮಾಹಿತಿ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

ವಿಬಿ–ಜಿ ರಾಮ್ ಜಿ ಯೋಜನೆ ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಜನರ ಬದುಕನ್ನು ನಾಶ ಮಾಡಲು ಹೊರಟಿದೆ. ಗ್ರಾಮೀಣ ಭಾಗದವರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಯುಪಿಎ ನೇತೃತ್ವದ ಸರ್ಕಾರದ ಅವಧಿಯಲ್ಲಿ ನರೇಗಾ ಯೋಜನೆಯ ಬಗ್ಗೆ 13 ತಿಂಗಳು ಚರ್ಚಿಸಿ, ಸಂವಿಧಾನದ ಅಡಿಯಲ್ಲಿ 2005ರಲ್ಲಿ ಜಾರಿಗೆ ತರಲಾಗಿತ್ತು. ಆದರೆ, ಇಂದಿನ ಎನ್‌ಡಿಎ ನೇತೃತ್ವದ ಸರ್ಕಾರವು ಸಂಸತ್‌ನಲ್ಲಿ ಚರ್ಚಿಸದೆ, ನರೇಗಾ ಹೆಸರು ಬದಲಿಸುವ ಜೊತೆಗೆ ಮೂಲ ಸ್ವರೂಪವನ್ನು ಬದಲಿಸಿದೆ. ನರೇಗಾ ಯೋಜನೆಯಲ್ಲಿ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದಿದ್ದು, ಹಂತ ಹಂತವಾಗಿ ಯೋಜನೆಯನ್ನು ರದ್ದು ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಆರೋಪಿಸಿದರು.

ADVERTISEMENT

ಈ ಹಿಂದೆ ಯೋಜನೆಯ ಕೂಲಿ ವೆಚ್ಚದ ಪಾಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ 90:10ರ ಅನುಪಾತದಲ್ಲಿತ್ತು. ಪರಿಷ್ಕೃತ ಯೋಜನೆ ಪ್ರಕಾರ ರಾಜ್ಯ ಸರ್ಕಾರಗಳು ಶೇ 40ರಷ್ಟು ವೆಚ್ಚ ಭರಿಸಬೇಕಾಗಿದ್ದು, ಇದು ಒಕ್ಕೂಟ ವ್ಯವಸ್ಥೆಯನ್ನು ನಾಶಪಡಿಸುವ ಹುನ್ನಾರವಾಗಿದೆ. ರಾಜ್ಯ ಸರ್ಕಾರದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ನರೇಗಾ ಯೋಜನೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡಲಾಗುವುದು ಎಂದರು.

ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಮುಖಂಡರಾದ ಎಸ್.ಡಿ.ರಾಜೇಂದ್ರ, ಎಚ್.ಎಂ.ಶಿವಣ್ಣ, ಪಿ.ಆರ್.ಸದಾಶಿವ, ಬೆನ್ನಿ, ಈ.ಸಿ.ಜೋಯಿ, ದೇವಂತ್, ಜುಬೇದಾ, ಅಂಜುಮ್, ಉಪೇಂದ್ರ, ಸುನಿಲ್ ಕುಮಾರ್, ರತನ್ ಗೌಡ, ದೇವಂತ್ ಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.