ADVERTISEMENT

ಕಡೂರು: ಬರದ ನಾಡಲ್ಲಿ ರಫೀಕ್ ಖಾನ್ ಕಮಾಲ್

ನಾಲ್ಕು ಎಕರೆ ಜಮೀನಿನಲ್ಲಿ ದಾಳಿಂಬೆ ಕೃಷಿಯಿಂದ ಕೈತುಂಬಾ ಲಾಭ

ಬಾಲು ಮಚ್ಚೇರಿ
Published 12 ಫೆಬ್ರುವರಿ 2020, 19:45 IST
Last Updated 12 ಫೆಬ್ರುವರಿ 2020, 19:45 IST
ರಫೀಕ್ ಖಾನ್
ರಫೀಕ್ ಖಾನ್   

ಕಡೂರು: ಬರದ ನಾಡಿನಲ್ಲಿ ಸಮೃದ್ಧ ತೋಟಗಾರಿಕೆ ಬೆಳೆ ಮಾಡಬಹುದೆಂದು ಎಂಬುದಕ್ಕೆ ತಾಲ್ಲೂಕಿನ ಮಲ್ಲಿದೇವಿಹಳ್ಳಿ ರಫೀಕ್ ಖಾನ್ ಇತರ ರೈತರಿಗೆ ಮಾದರಿ ಆಗಿದ್ದಾರೆ.

ಮೂಲತಃ ಚಿಕ್ಕಮಗಳೂರಿ ನವರಾದ ರಫೀಕ್ ಖಾನ್ ಮಲ್ಲಿದೇವಿಹಳ್ಳಿಯ ಸಾದರಹಳ್ಳಿ ರಸ್ತೆಯಲ್ಲಿ ನಾಲ್ಕು ಎಕರೆ ಜಮೀನು ಖರೀದಿಸಿದಾಗ ಬಹಳಷ್ಟು ಜನರು ಹುಬ್ಬೇರಿಸಿದ್ದರು. ಹಣ್ಣಿನ ವ್ಯಾಪಾರ ಮಾಡುತ್ತಿದ್ದ ರಫೀಕ್ ಸ್ವಂತ ಹಣ್ಣು ಬೆಳೆಯಬೇಕೆಂದು ನಿರ್ಧರಿಸಿದ್ದರು. ನಾಲ್ಕು ಎಕರೆ ಜಮೀನಿನಲ್ಲಿ ಕೊಳವೆಬಾವಿ ತೆಗೆಸಿದರು. ಎರಡರಲ್ಲಿ ನೀರು ಬರಲಿಲ್ಲ. ಮೂರನೇ ಬಾವಿಯಲ್ಲಿ ಸಮೃದ್ಧ ನೀರು ಸಿಕ್ಕಿತು. ತಮ್ಮ ಹೊಲದಲ್ಲಿ ದಾಳಿಂಬೆ ಕೃಷಿಗೆ ಮುಂದಾದದರು ರಫೀಕ್ ಖಾನ್.

2014 ರಲ್ಲಿ ಗುಜರಾತ್‌ನಿಂದ ₹ 40 ರೂಪಾಯಿಗೆ ಒಂದರಂತೆ ದಾಳಿಂಬೆ ಗಿಡ ಖರೀದಿಸಿ ತಂದರು. 1000 ಗಿಡಗಳನ್ನು ನಾಟಿ ಮಾಡಿ ಅದಕ್ಕೆ ಹನಿ ನೀರಾವರಿ ವ್ಯವಸ್ಥೆ ಮಾಡಿದರು. ಜೊತೆಯಲ್ಲಿ ಹೊಲದ ಸುತ್ತ 850 ಸಿಲ್ವರ್ ಗಿಡ, 100 ತೆಂಗು ಹಾಕಿದರು. ಪ್ರಾಣಿಗಳ ಹಾವಳಿ ತಪ್ಪಿಸಲು ಸೋಲಾರ್ ಬೇಲಿ ಹಾಕಿಸಿದರು.

ADVERTISEMENT

ದಾಳಿಂಬೆ ಗಿಡದ ನಿರ್ವಹಿಸಲು ತಾಳ್ಮೆ ಮತ್ತು ಶ್ರಮ ಮುಖ್ಯ. ರಫೀಕ್ ಕೃಷಿ ತಜ್ಙರ ಮಾರ್ಗದರ್ಶನದಲ್ಲಿ ಗಿಡಗಳಿಗೆ ಗೊಬ್ಬರ ಔಷಧಿ ನೀಡಿದರು. ಸೊಂಪಾಗಿ ಬೆಳೆದ ದಾಳಿಂಬೆ ಗಣನೀಯ ಪ್ರಮಾಣದ ಇಳುವರಿ ನೀಡಲಾರಂಭಿಸಿತು. 3ನೇ ವರ್ಷದಲ್ಲಿ 40 ಟನ್ ಇಳುವರಿ ದೊರೆತಿದೆ. ಒಂದು ಕ್ವಿಂಟಲ್‌ಗೆ ಸರಾಸರಿ ₹ 7,000 ಬೆಲೆ ದೊರೆತಿದೆ. ಹಣ್ಣುಗಳನ್ನು ಸ್ಥಳೀಯವಾಗಿಯೇ ಮಾ‍ರಾಟ ಮಾಡಿದ್ದಾರೆ. ದಾಳಿಂಬೆಯಲ್ಲಿ ಖರ್ಚು ತುಸು ಹೆಚ್ಚೆನಿಸಿದರೂ ಬೆಳೆ ಚೆನ್ನಾಗಿ ಬಂದರೆ ನಷ್ಟವಾಗುವುದಿಲ್ಲ. ಪ್ರಸ್ತುತ ದಾಳಿಂಬೆ ಗಿಡಗಳು ಹೊಸದಾಗಿ ಹೂವು ಬಿಡಲಾರಂಭಿಸಿವೆ. ಸುತ್ತಮುತ್ತಲ ಹೊಲಗಳ ನಡುವೆ ಹಸಿರು ತುಂಬಿದ ರಫೀಕ್ ತೋಟ ಗಮನ ಸೆಳೆಯುತ್ತದೆ.

ಕೃಷಿಯಲ್ಲಿ ಲಾಭವಿಲ್ಲ ಎಂಬುದು ಸರಿಯಲ್ಲ. ಬೇರೆಲ್ಲ ಹೋಗಿ ಹತ್ತು ಸಾವಿರ ಸಂಬಳಕ್ಕೆ ದಿನವಿಡೀ ದುಡಿಯಲು ಪಟ್ಟಣ ಸೇರುವ ಗ್ರಾಮೀಣ ಯುವಕರು ತಮ್ಮ ಹೊಲದಲ್ಲಿಯೇ ಮನಸ್ಸು ಮಾಡಿ ದುಡಿದರೆ ನೆಮ್ಮದಿಯುತ ಜೀವನ ಸಿಗುವುದು ಖಚಿತ ಎಂದು ಆತ್ಮವಿಶ್ವಾಸದಿಂದ ಹೇಳುವ ರಫೀಕ್ ಖಾನ್‌ ಮೊಬೈಲ್‌ (9880358632)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.