ತರೀಕೆರೆ: ‘ತಾಲ್ಲೂಕಿನ ದೊಡ್ಡಕುಂದೂರು ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ₹1 ಕೋಟಿಗೂ ಹೆಚ್ಚಿನ ಅನುದಾನ ಒದಗಿಸಲಾಗಿದೆ’ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.
ದೊಡ್ಡಕುಂದೂರು ಗ್ರಾಮದಲ್ಲಿ ₹55 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಈ ಭಾಗದಲ್ಲಿ ಭದ್ರಾ ನದಿಯ ಕಾಲುವೆಗೆ ತಡೆಗೋಡೆ ನಿರ್ಮಿಸಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು’ ಎಂದರು.
ಸ್ಮಶಾನ, ಹೊಲ, ಗದ್ದೆ, ಜಮೀನುಗಳಿಗೆ ಓಡಾಡಲು ರಸ್ತೆ ಅಭಿವೃದ್ದಿಗೆ ಅನುದಾನ ನೀಡಲಾಗುವುದು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.
ಕೆಂಚಿಕೊಪ್ಪ ಗ್ರಾ.ಪಂ. ಉಪಾಧ್ಯಕ್ಷ ಹರಿಕೃಷ್ಣ ಮಾತನಾಡಿ, ‘ಕೆಂಚಿಕೊಪ್ಪದಿಂದ ದೊಡ್ಡಕುಂದೂರಿಗೆ ಬರುವ 2 ಕಿ.ಮೀ. ರಸ್ತೆ ದುರಸ್ತಿಗೆ ಅನುದಾನ ನೀಡಬೇಕು’ ಎಂದು ಮನವಿ ಮಾಡಿದರು.
ಮುಖಂಡ ಅರುಣ ಮಾತನಾಡಿ, ‘ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಕೊಠಡಿ ಆಧುನೀಕರಣಕ್ಕೆ ₹5 ಲಕ್ಷ ಅನುದಾನವನ್ನು ಶಾಸಕರು ಒದಗಿಸಿದ್ದಾರೆ. ಉಳಿದ ಅಭಿವೃದ್ಧಿ ಕೆಲಸಗಳಿಗೂ ಹಂತ ಹಂತವಾಗಿ ಅನುದಾನ ಒದಗಿಸಬೇಕು’ ಎಂದು ಮನವಿ ಮಾಡಿದರು.
ಕೆಂಚಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಗುಲಾಬಿ, ರಂಗೇನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಜೀನತ್‌ಬಾನು, ಸದಸ್ಯ ಶಿವಕುಮಾರ್, ಕಾಡಾ ಸದಸ್ಯ ರಾಜಶೇಖರ್, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಮಣಿಕಂಠ, ಪಿಡಿಒ ಭದ್ರಾಚಾರಿ, ಮುಖಂಡರಾದ ಮುಸ್ತಾಫ, ಮಾಗುಂಡಿ, ಎಂಜಿನಿಯರ್ ರವಿ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.