ಚಿಕ್ಕಮಗಳೂರು: ಇಂಡಿಯನ್ ಮೋಟಾರ್ ಸ್ಪೋರ್ಟ್ಸ್–2025ರ ದಕ್ಷಿಣ ವಲಯದ ಮೊದಲನೇ ಸುತ್ತಿನ ‘ರ‍್ಯಾಲಿ ಆಫ್ ಚಿಕ್ಕಮಗಳೂರು’ ಕಾರ್ ರ‍್ಯಾಲಿಯಲ್ಲಿ 130ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
ಮೇ 31 ಮತ್ತು ಜೂನ್1 ರಂದು ನಗರದ ಸುತ್ತ ನಡೆಯಲಿದೆ. ರ‍್ಯಾಲಿಯು ಸುಮಾರು 210 ಕಿಲೋ ಮೀಟರ್ ಇರಲಿದೆ. ಮೇ 31ರಂದು ಸಂಜೆ 4.30ಕ್ಕೆ ನಗರದ ಸಿಗ್ನೇಚರ್ ಅಪಾರ್ಟ್‌ಮೆಂಟ್‌ನಲ್ಲಿ ಆರಂಭಗೊಳ್ಳಲಿದೆ. ಸಂಜೆ 5 ಗಂಟೆಗೆ ಮೊದಲನೇ ಹಂತದ ರ‍್ಯಾಲಿ ನಡೆಯಲಿದ್ದು, ರಾತ್ರಿ 11 ಗಂಟೆಗೆ ಮುಕ್ತಾಯಗೊಳ್ಳಲಿದೆ ಎಂದು ಮೋಟರ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಯಂತ್ ಪೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರ‍್ಯಾಲಿಯ ಎರಡನೇ ಹಂತ ಜೂನ್1ರಂದು ಬೆಳಿಗ್ಗೆ 7 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನ 2 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ವರ್ಷ ಸ್ಪರ್ಧಿಗಳಿಂದ ದಾಖಲೆಯ 130ಕ್ಕೂ ಹೆಚ್ಚು ನೋಂದಣಿ ಲಭಿಸಿದ್ದು, ಈ ರ‍್ಯಾಲಿ ಇತಿಹಾಸದಲ್ಲೇ ಅತ್ಯಧಿಕವಾಗಿದೆ. ವಿಜೇತರಿಗೆ ಟ್ರೋಫಿಗಳ ಜೊತೆಗೆ ₹3.5 ಲಕ್ಷ ನಗದು ಬಹುಮಾನ ಮತ್ತು ‘ಸ್ಟಾರ್ ಆಫ್ ಚಿಕ್ಕಮಗಳೂರು’, ‘ಸ್ಟಾರ್ ಆಫ್ ಕರ್ನಾಟಕ’, ‘ಕಾಫಿ ಟ್ರೈಲ್ ಪ್ರೋ ಸ್ಟಾಕ್–ಓಪನ್’ ಮೊದಲಾದ ಗೌರವ ಪ್ರಶಸ್ತಿಗಳು ಲಭಿಸಲಿವೆ ಎಂದು ವಿವರಿಸಿದರು.
ರ‍್ಯಾಲಿಯು ಎಂಟು ವಿಭಿನ್ನ ವಿಭಾಗಗಳಲ್ಲಿ ನಡೆಯಲಿದ್ದು, ಅದರಲ್ಲಿ ಐಎನ್‌ಟಿಎಸ್‌ಡಿಆರ್‌ಸಿ(ಇಂಡಿಯನ್ ನ್ಯಾಷನಲ್ ಟೈಮ್‌ಸ್ಪೀಡ್ ಡಿಸ್ಟೆನ್ಸ್ ರ್‍ಯಾಲಿ ಚಾಂಪಿಯನ್‌ಶಿಪ್) ಎಕ್ಸ್‌ಪರ್ಟ್, ಪ್ರೋ ಸ್ಟಾಕ್, ಕಾರ್ಪೊರೇಟ್, ದಂಪತಿ, ಮಹಿಳಾ ವಿಭಾಗಗಳ ಜತೆಗೆ ಸೂಪರ್ ಕಾರ್, ಚಿಕ್ಕಮಗಳೂರು ಕ್ಲಾಸ್ ಮತ್ತು ಕರ್ನಾಟಕ ಸೂಪರ್ ಕಾರ್ ಕ್ಲಾಸ್ ಕೂಡ ಇವೆ. ಈ ವಿಭಾಗಗಳಲ್ಲಿ ಸ್ಪರ್ಧೆಯ ತೀವ್ರತೆ ಮತ್ತಷ್ಟು ಹೆಚ್ಚಾಗಿದೆ. ಎಫ್‌ಎಂಎಸ್‌ಸಿಐ(ಫೆಡರೇಷನ್ ಆಫ್ ಮೋಟರ್ ಸ್ಪೋರ್ಟ್ಸ್ ಕ್ಲಬ್) ಅನುಮೋದಿತ ಈ ರ‍್ಯಾಲಿ, ಐಎನ್‌ಟಿಎಸ್‌ಡಿಆರ್‌ಸಿ–2025 ಚಾಂಪಿಯನ್‌ಶಿಪ್ ಫೈನಲ್‌ಗೆ ಮಾರ್ಗದರ್ಶನ ನೀಡುವ ಹಲವು ಅರ್ಹತಾ ಸುತ್ತುಗಳಲ್ಲಿ ಮೊದಲನೆಯದು. ಪ್ರತಿ ವಿಭಾಗದ ಮೊದಲ ಮೂವರು ಸ್ಪರ್ಧಿಗಳು, ಕನಿಷ್ಠ ಎರಡು ಅರ್ಹತಾ ಸುತ್ತುಗಳಲ್ಲಿ ಭಾಗವಹಿಸಿದ್ದರೆ ಮಾತ್ರ ಫೈನಲ್‌ಗೆ ಆಯ್ಕೆಯಾಗುತ್ತಾರೆ ಎಂದು ಹೇಳಿದರು.
ರ‍್ಯಾಲಿಗೆ ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಕೊಲ್ಕತ್ತದಿಂದ ಪ್ರಕಾಶ್, ಕೊಯಮತ್ತೂರಿನಿಂದ ದೀಪಕ್, ಚೆನ್ನೈನಿಂದ ನಾಗ, ದೆಹಲಿಯಿಂದ ಕ್ಷಮತಾ, ಕಾಶ್ಮೀರದಿಂದ ಅನ್ಮೋಲ್, ಬೆಂಗಳೂರಿನಿಂದ ಅಪರ್ಣ ಪಾಟಕ್, ಲಲಿತಾ ಗೌಡ, ಮುಂಬೈನಿಂದ ಗೀತಿಕಾ ಪಂತ್ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಭಿಜಿತ್ ಪೈ, ದಿಲೀಪ್ ಕುಮಾರ್, ದೀಪಕ್ ಕುಮಾರ್, ದೀವಿನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.