ADVERTISEMENT

ಮೂಡಿಗೆರೆ | ಮಲೆನಾಡಿನಲ್ಲಿ ಕೊಳವೆ ಬಾವಿಯ ಆರ್ಭಟ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:04 IST
Last Updated 4 ಮಾರ್ಚ್ 2026, 6:04 IST
ಮೂಡಿಗೆರೆಯಲ್ಲಿ ತಡರಾತ್ರಿಯಲ್ಲೂ ಕೊಳವೆ ಬಾವಿ ಕೊರೆಯುತ್ತಿರುವುದು
ಮೂಡಿಗೆರೆಯಲ್ಲಿ ತಡರಾತ್ರಿಯಲ್ಲೂ ಕೊಳವೆ ಬಾವಿ ಕೊರೆಯುತ್ತಿರುವುದು   

ಮೂಡಿಗೆರೆ: ತಾಲ್ಲೂಕಿನಲ್ಲಿ ಬೇಸಿಗೆಯ ಬಿಸಿಲು ಏರತೊಡಗಿದಂತೆ ಕೊಳವೆ ಬಾವಿಯ ಆರ್ಭಟ ಹೆಚ್ಚಾಗಿದ್ದು, ಹಗಲು ರಾತ್ರಿಯೆನ್ನದೆ ಕೊಳವೆ ಬಾವಿ ಕೊರೆಯಲಾಗುತ್ತಿದೆ.

ಹಾಸನ, ಚನ್ನರಾಯಪಟ್ಟಣ, ಅರೇಹಳ್ಳಿ, ಗೆಂಡೆಹಳ್ಳಿ ಹಾಗೂ ಹೊರ ರಾಜ್ಯದ ಕೊಳವೆ ಬಾವಿ‌ ಕೊರೆಯುವ ಲಾರಿಗಳು ಎಲ್ಲೆಂದರಲ್ಲಿ ಕಾಣ ಸಿಗುತ್ತಿವೆ. ಕೊಳವೆ‌ ಬಾವಿ ತೆಗೆಯಲು‌ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯಬೇಕು ಎಂಬ ನಿಯಮವಿದ್ದರೂ, ಅನುಮತಿ ಪಡೆಯದೆ ಭೂಮಿಯ ಒಡಲನ್ನು ಬಗೆಯಲಾಗುತ್ತಿದೆ. ಈ ಬಾರಿ ಮಳೆ ಜನವರಿಯಲ್ಲಿಯೇ ಕಾಣಿಸಿಕೊಂಡಿದ್ದರಿಂದ ಕಾಫಿ ತೋಟಗಳನ್ನು ಉಳಿಸಿಕೊಳ್ಳಲು ಹೆಚ್ಚಾಗಿ ಕೊಳವೆ ಬಾವಿಗಳನ್ನೇ ಆಶ್ರಯಿಸಿಕೊಳ್ಳಲಾಗುತ್ತಿದೆ. ಸರ್ಕಾರಿ ರಜಾ ದಿನಗಳು, ವಾರಂತ್ಯಗಳಲ್ಲಿಯೇ‌ ಹೆಚ್ಚು ಕೊಳವೆ ಬಾವಿಗಳನ್ನು‌ ತೆಗೆಯಲಾಗುತ್ತದೆ. ಇದರಿಂದ ಸರ್ಕಾರದ ನಿಯಮಗಳು ಪಾಲನೆಯಾಗದೆ ಗ್ರಾಮಗಳಲ್ಲಿರುವ ಕೊಳವೆ ಬಾವಿಗಳ ಮಾಹಿತಿಯೇ ಸಿಗದಂತಾಗುತ್ತಿದೆ.

ಕೊಳವೆ ಬಾವಿ‌ ತೆಗೆಯಲು ಫಾರಂ 7 ಇರಬೇಕು ಎಂಬ ನಿಯಮವಿದ್ದರೂ ಅದು ಪಾಲನೆ ಆಗುತ್ತಿಲ್ಲ. ಕೊಳವೆ ಬಾವಿಗಳಿಗೆ ಬೇಡಿಕೆ ಹೆಚ್ಚಾದಂತೆ ದರ ಏರಿಕೆ ಕಾಣುತ್ತವೆ. ದುರ್ಗಮ ಪ್ರದೇಶ, ರಾತ್ರಿ ಕಾರ್ಯಾಚರಣೆ, ಕಾರ್ಮಿಕರ ಕೊರತೆ, ವಿವಾದಿತ ಭೂಮಿಯ ಕಾರಣ ದರ ಏರಿಕೆಗೆ‌ ನೆಪಗಳಾಗುತ್ತವೆ ಎಂಬುದು ಗ್ರಾಹಕರ ಆರೋಪವಾಗಿದೆ.

ADVERTISEMENT

‘ರಾತ್ರಿ ವೇಳೆ ಕೊಳವೆ ಬಾವಿಗಳನ್ನು ಕೊರೆಯಬಾರದು ಎಂಬ‌ ನಿಯಮವಿದ್ದರೂ ರಾತ್ರೋರಾತ್ರಿ ಕೊಳವೆ ಬಾವಿ ಕೊರೆಸಲಾಗುತ್ತಿದೆ. ಇದು ನಮ್ಮ ಗಮನಕ್ಕೂ ಬರುವುದಿಲ್ಲ. ಅನುಮತಿ ಬಗ್ಗೆ ಪ್ರಶ್ನಿಸಿದರೆ ರಾಜಕೀಯ ಒತ್ತಡ ತರಲಾಗುತ್ತದೆ. ಕೆಲವೆಡೆ ನೀರು ಸಿಗದ ಕೊಳವೆ ಬಾವಿಗಳನ್ನು ಮುಚ್ಚುವುದೇ ಇಲ್ಲ. ಅಂಥ ಕಡೆ ಅನಾಹುತ ನಡೆದರೂ ಅಧಿಕಾರಿಗಳನ್ನು ಬಲಿಪಶು ಮಾಡಲಾಗುತ್ತದೆ. ಕೊಳವೆ ಬಾವಿ ತೆಗೆಯುವ ಲಾರಿಗಳನ್ನು ಹಿಡಿತಕ್ಕೆ ತೆಗೆದುಕೊಂಡರೆ ಅನಧಿಕೃತ ಕೊಳವೆ ಬಾವಿ ನಿರ್ಮಾಣವನ್ನು ನಿಯಂತ್ರಿಸಬಹುದು’ ಎಂದು ಹೆಸರು ಹೇಳಲು ಇಚ್ಛಿಸದ ಪಿಡಿಒ ತಿಳಿಸಿದರು.

ಕೊಳವೆ ಬಾವಿ ತೆಗೆಯುವುದಕ್ಕಿಂತಲೂ ತೆಗೆದ ಕೊಳವೆ ಬಾವಿ‌ಯಲ್ಲಿ ನೀರು ಬಂದಿಲ್ಲ ಎಂದು ಖಾಲಿ ಬಿಡುವುದು ಅಪಾಯಕಾರಿಯಾಗಿದೆ. ಅನುಮತಿ ಕಡ್ಡಾಯಗೊಳಿಸಲು ಬಿಗಿ ನಿಯಮ ಅಗತ್ಯವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.