ADVERTISEMENT

ಮೂಡಿಗೆರೆ: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 2:17 IST
Last Updated 2 ಫೆಬ್ರುವರಿ 2026, 2:17 IST
ಮೂಡಿಗೆರೆ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ ಬೆಳೆ ವಿಮೆ ಮಾಹಿತಿ ಸಭೆಯಲ್ಲಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿದರು
ಮೂಡಿಗೆರೆ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ನಡೆದ ಬೆಳೆ ವಿಮೆ ಮಾಹಿತಿ ಸಭೆಯಲ್ಲಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಮಾತನಾಡಿದರು   

ಮೂಡಿಗೆರೆ: ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯನ್ನು ಹೆಚ್ಚು ಪಾರದರ್ಶಕವಾಗಿಸಬೇಕು ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ದೇವರುಂದ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತೋಟಗಾರಿಕಾ ಇಲಾಖೆಯಿಂದ ಏರ್ಪಡಿಸಿದ್ದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಗೆ ಸಂಬಂಧಿಸಿದಂತೆ ರೈತರೊಂದಿಗೆ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

‘ಸ್ಯಾಟಲೈಟ್ ಮೂಲಕ ಮಳೆ ಪ್ರಮಾಣ ಅಳತೆ ಮಾಡಿ, ಪ್ರತಿ ಗ್ರಾಮದಲ್ಲಿನ ಮಳೆಯ ಪ್ರಮಾಣಕ್ಕನುಗುಣವಾಗಿ ವಿಮಾ ಮೊತ್ತವನ್ನು ರೈತರಿಗೆ ನೀಡಬೇಕು. ಹವಾಮಾನ ಆಧಾರಿತ ಬೆಳೆವಿಮೆಯ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಇಲ್ಲ. ಕಳೆದ ಸಾಲಿನಲ್ಲಿ ಮಲೆನಾಡಿನಾದ್ಯಂತ ವ್ಯಾಪಕ ಮಳೆಯಾಗಿದ್ದು, ಅಪಾರ ಬೆಳೆ ನಷ್ಟವಾಗಿದೆ. ಆದರೆ, ಮಳೆ ಮಾಪನವನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ರೈತರಿಗೆ ವಿಮಾ ಮೊತ್ತ ಸಿಗದಂತಾಗಿದೆ. ಹಾಗಾಗಿ ತಂತ್ರಜ್ಞಾನ ಬಳಸಿಕೊಂಡು ಸ್ಯಾಟಲೈಟ್ ಮೂಲಕ ಮಳೆಮಾಪನ ಮಾಡಿದರೆ ನಿಖರ ಮಾಹಿತಿ ಲಭ್ಯವಾಗುತ್ತದೆ. ವಿಮಾ ಯೋಜನೆಯ ಪ್ರತಿ ಹಂತದ ಮಾಹಿತಿ ರೈತರಿಗೆ ಲಭ್ಯವಾಗುವಂತೆ ಕ್ರಮ ವಹಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಬೆಳೆಗಾರರ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾತನಾಡಿ, ‘ಪ್ರಕೃತಿ ವಿಕೋಪದಿಂದ ಉಂಟಾಗುವ ಬೆಳೆನಷ್ಟದ ಅಂದಾಜು ಪ್ರಕ್ರಿಯೆ ಹಾಗೂ ನಷ್ಟಕ್ಕೆ ನೀಡಲಾಗುವ ವಿಮೆ, ಯಾವ ಮಾನದಂಡವನ್ನು ಆಧರಿಸಿ ಲೆಕ್ಕಾಚಾರ ಮಾಡುತ್ತಾರೆಂಬುದೇ ಯಕ್ಷಪ್ರಶ್ನೆಯಾಗಿದೆ. ನಷ್ಟದ ಪ್ರಮಾಣವನ್ನು ಅಂದಾಜು ಮಾಡುವ ಮಾನದಂಡಗಳು ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಇದನ್ನು ಗ್ರಾಮ ಮಟ್ಟಕ್ಕೆ ವಿಕೇಂದ್ರೀಕರಣಗೊಳಿಸಿ, ಗ್ರಾಮ ಮಟ್ಟದಲ್ಲಿ ನಷ್ಟದ ಪ್ರಮಾಣ ಅಂದಾಜು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಗ್ರಾಮ ಮಟ್ಟದಲ್ಲಿ ಉಂಟಾಗುವ ನಷ್ಟಕ್ಕೆ ಅನುಗುಣವಾಗಿ ಪರಿಗಣಿಸಿ ವಿಮೆ ನೀಡಬೇಕು’ ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಅಶ್ವಿನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಇಲಾಖೆಯ ಅಧಿಕಾರಿ ಶ್ವೇತಾ, ಸಭೆಗೆ ವಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಬೆಳೆಗಾರರ ಸಂಘದ ಕಾರ್ಯದರ್ಶಿ ಮನೋಹರ್, ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ, ಸಿಪಿಐ ಮುಖಂಡ ಬಿ.ಕೆ. ಲಕ್ಷ್ಮಣಕುಮಾರ್, ಗೋಣಿಬೀಡು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಗೌಡ, ಕಾರ್ಯದರ್ಶಿ ಚಂದ್ರಶೇಖರ್, ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ.ಆರ್.  ಯತೀಶ್ ಬೆಟ್ಟಗೆರೆ, ಮಾಕೋನಹಳ್ಳಿ ಸಹಕಾರ ಸಂಘದ ಎಂ.ಎನ್. ಅಶ್ವತ್, ರೈತ ಸಂಘದ ಮುಖಂಡ ಬಿ.ಸಿ. ದಯಾಕರ್, ರೈತ ಉತ್ಪಾದಕ ಸಂಘದ ಅಧ್ಯಕ್ಷ ಪೂರ್ಣೇಶ್ ಜಿ.ಹೊಸಳ್ಳಿ, ಮೆಸ್ಕಾಂ ಗ್ರಾಹಕರ ಹಿತರಕ್ಷಣಾ ವೇದಿಕೆಯ ಎಂ.ಜೆ. ಭರತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.