ADVERTISEMENT

ಮುಳ್ಳಯ್ಯನಗಿರಿ: ಆನ್‌ಲೈನ್ ಮುಂಗಡ ಬುಕ್ಕಿಂಗ್ ಕಡ್ಡಾಯಕ್ಕೆ ತಯಾರಿ ಪೂರ್ಣ

ವಿಜಯಕುಮಾರ್ ಎಸ್.ಕೆ.
Published 7 ಆಗಸ್ಟ್ 2025, 6:19 IST
Last Updated 7 ಆಗಸ್ಟ್ 2025, 6:19 IST
ಮುಳ್ಳಯ್ಯನಗಿರಿ ಪ್ರವಾಸಿ ತಾಣದಲ್ಲಿ ವಾಹನಗಳ ಸಾಲು
ಮುಳ್ಳಯ್ಯನಗಿರಿ ಪ್ರವಾಸಿ ತಾಣದಲ್ಲಿ ವಾಹನಗಳ ಸಾಲು   

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಉಂಟಾಗುತ್ತಿರುವ ದಟ್ಟಣೆ ತಪ್ಪಿಸಲು ಜಿಲ್ಲಾಡಳಿತ ಮುಂದಾಗಿದೆ. ಹಲವು ಸವಾಲುಗಳ ನಡುವೆ ಆನ್‌ಲೈನ್ ನೋಂದಣಿ ಕಡ್ಡಾಯಕ್ಕೆ ಎಲ್ಲಾ ತಯಾರಿ ಪೂರ್ಣಗೊಳಿಸಿದೆ.

ಲೆಕ್ಕವಿಲ್ಲದಷ್ಟು ವಾಹನಗಳು ಗಿರಿ ಏರಿ ಉಂಟಾಗುತ್ತಿರುವ ದಟ್ಟಣೆ ನಡುವೆ ಸಿಲುಕಿ ಪ್ರವಾಸಿಗರೂ ನರಳುತ್ತಿದ್ದು, ಇದನ್ನು ತಪ್ಪಿಸಲು ಏಕಕಾಲಕ್ಕೆ 600 ವಾಹನಗಳಿಗಷ್ಟೇ ಅವಕಾಶ ನೀಡಲು ನಿರ್ಧರಿಸಿದೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರವಾಸೋದ್ಯಮ ನೀತಿ ಸಮನ್ವಯ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿ, ಮಾಣಿಕ್ಯಧಾರ, ಗಾಳಿಕೆರೆ, ಝರಿ ಜಲಪಾತ, ಹೊನ್ನಮ್ಮನಹಳ್ಳ ವೀಕ್ಷಣೆಗೆ ಜನ ಮುಗಿ ಬೀಳುತ್ತಿದ್ದಾರೆ. ವಾರಾಂತ್ಯದಲ್ಲಿ ಪರಿಸರದ ಸೊಬಗು ವೀಕ್ಷಣೆಯ ಬದಲು ದಟ್ಟಣೆಯಲ್ಲೇ ಸಿಲುಕಿ ನರಳುತ್ತಿದ್ದಾರೆ. ಇದನ್ನು ತಪ್ಪಿಸಲು ಏಕಕಾಲದಲ್ಲಿ 600 ವಾಹನಗಳಿಗಷ್ಟೇ ಸೀಮಿತ ಮಾಡುವುದು ಜಿಲ್ಲಾಡಳಿತದ ಉದ್ದೇಶ. ಬೆಳಿಗ್ಗೆ 6ರಿಂದ 12 ಗಂಟೆ ತನಕ ಒಂದು ಹಂತ ಮತ್ತು ಮಧ್ಯಾಹ್ನ 2ರಿಂದ 6 ಗಂಟೆ ತನಕ ಎರಡನೇ ಹಂತದಲ್ಲಿ ತಲಾ 600 ವಾಹನಗಳಿಗೆ ಅವಕಾಶ ದೊರಕಲಿದೆ. ಅಂದರೆ ದಿನಕ್ಕೆ 1,200 ವಾಹನಗಳಿಗೆ ಮಾತ್ರ ಅವಕಾಶ ಸಿಗಲಿದೆ.

ADVERTISEMENT

ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ ನಿರ್ಧಾರ ಘೋಷಣೆ ಮಾಡಿದ ಬಳಿಕ ಮುಳ್ಳಯ್ಯನಗಿರಿ, ಅತ್ತಿಗುಂಡಿ, ಇನಾಂ ದತ್ತಾತ್ರೇಯ ಪೀಠ ಸೇರಿ ಸ್ಥಳೀಯರು, ಜೀಪ್ ಚಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೆ ಜಿಲ್ಲಾಡಳಿತ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ. 100 ಜೀಪ್‌ಗಳಿಗೆ ಮಾತ್ರ ಅವಕಾಶ ನೀಡಿದ್ದು, ವಾರಾಂತ್ಯದಲ್ಲಿ ಹೆಚ್ಚಿನ ಜೀಪ್‌ಗಳಿಗೆ ಅವಕಾಶ ನೀಡಬೇಕು ಎಂಬುದು ಅವರ ಒತ್ತಾಯ.

‘ಸ್ಥಳೀಯರ ವಾಹನಗಳಿಗೆ ಉಚಿತ ಪ್ರವೇಶಕ್ಕೆ ಪಾಸ್ ನೀಡಲಾಗುತ್ತಿದೆ. ಆದರೆ, ಗಿರಿಭಾಗದಲ್ಲಿರುವ ನಿವಾಸಿಗಳ ಮನೆಗೆ ಕಷ್ಟ–ಸುಖಗಳಿಗೆ ಬರುವ ಸಂಬಂಧಿಕರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಂಡು ಬರಲು ಸಾಧ್ಯವೇ’ ಎಂಬುದು ಅವರ ಪ್ರಶ್ನೆ.

‘ಸೀತಾಳಯ್ಯನಗಿರಿ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ ಸ್ವಾಮಿ ದರ್ಗಾ, ಗಾಳಿಕೆರೆ ಕೆಂಚರಾಯ ಸ್ವಾಮಿ ದೇಗುಲಕ್ಕೆ ನಡೆದುಕೊಳ್ಳುವ ಭಕ್ತರಿದ್ದಾರೆ. ಅವರೂ ಆನ್‌ಲೈನ್ ಬುಕ್ಕಿಂಗ್ ಮಾಡಿಕೊಂಡು ಬರಬೇಕೆಂದರೆ ಕಷ್ಟ. ಈ ಎಲ್ಲಾ ಸಮಸ್ಯೆಗಳ ಕುರಿತು ಸ್ಥಳೀಯರೊಂದಿಗೆ ಸಭೆ ನಡೆಸಿ ನಂತರ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಬೇಕು’ ಎಂಬುದು ಅವರ ವಾದ.

ಈ ಎಲ್ಲಾ ಸವಾಲುಗಳನ್ನು ಬಗೆಹರಿಸುವ ವಿಶ್ವಾಸದೊಂದಿಗೆ ಜಿಲ್ಲಾಡಳಿತ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಒಂದೆರೆಡು ದಿನಗಳಲ್ಲೇ ಆನೈಲೈನ್‌ ಪೋರ್ಟಲ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ.

ಮುಳ್ಳಯ್ಯನಗಿರಿ ಆನ್‌ಲೈನ್ ಬುಕ್ಕಿಂಗ್ ಪೋರ್ಟಲ್ 
ಆನ್‌ಲೈನ್ ಪೋರ್ಟಲ್‌ ಸಿದ್ಧವಾಗಿದೆ. ಸ್ಥಳೀಯ ಹೋಮ್‌ಸ್ಟೆ ಮತ್ತು ದೇಗುಲ ಸಮಿತಿಗಳ ಸಭೆಯನ್ನು ಶುಕ್ರವಾರ ನಡೆಸಲಾಗುತ್ತಿದೆ
ಮೀನಾ ನಾಗರಾಜ್ ಜಿಲ್ಲಾಧಿಕಾರಿ

‘ಪೋರ್ಟಲ್‌ ಸಿದ್ಧ’

ಆನ್‌ಲೈನ್‌ನಲ್ಲಿ ಮೊದಲು ಬುಕ್ ಮಾಡಿಕೊಂಡವರಿಗೆ ಮಾತ್ರ ಅವಕಾಶ ದೊರಕಲಿದೆ. ವೆಬ್‌ಸೈಟ್ ಸಿದ್ಧವಾಗಿದ್ದು ಲೋಕರ್ಪಣೆಯಷ್ಟೇ ಬಾಕಿ ಇದೆ. ಜಿಲ್ಲಾಡಳಿತ ವೆಬ್‌ಸೈಟ್‌ನಲ್ಲಿ ಈಗಾಗಲೇ ವೆಬ್‌ಸೈಟ್‌ ಪೋರ್ಟಲ್‌ ಲಿಂಕ್ ಕೂಡ ಲಭ್ಯವಾಗಿದೆ. ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ ಆದೇಶ ಜಾರಿಯಷ್ಟೇ ಬಾಕಿ ಇದೆ.  ವೆಬ್‌ಸೈಟ್‌ನಲ್ಲಿ ಹೆಸರು ದೂರವಾಣಿ ಸಂಖ್ಯೆ ಸ್ಥಳ ಪ್ರವಾಸ ಬರುವ ದಿನಾಂಕ ವಾಹನ ಮಾದರಿ ಅವುಗಳ ನೋಂದಣಿ ಸಂಖ್ಯೆ ನಮೂದಿಸಿದರೆ ಎಷ್ಟು ಮೊತ್ತ ಪಾವತಿಸಬೇಕು ಎಂಬುದು ಸ್ವಯಂ ನಮೂದಾಗಲಿದೆ. ಅಂತಿಮವಾಗಿ ನಿಗದಿತ ಮೊತ್ತ ಪಾವತಿಸಿದರೆ ಬುಕ್ಕಿಂಗ್ ಅಂತಿಮವಾಗುತ್ತದೆ.

ಸ್ಥಳೀಯ ಪಾಸ್‌ಗೆ 110 ಅರ್ಜಿ

ಗಿರಿಭಾಗದಲ್ಲಿರುವ ಸ್ಥಳೀಯರು ತಮ್ಮ ಮನೆ ಮತ್ತು ತೋಟಗಳಿಗೆ ಹೋಗಲು ವಾಹನಗಳ ಸಂಖ್ಯೆ ಸಹಿತ ಪಾಸ್‌ಗಳನ್ನು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಇದಕ್ಕಾಗಿ ಈಗಾಗಲೇ 110 ಅರ್ಜಿಗಳೂ ಸಲ್ಲಿಕೆಯಾಗಿವೆ. ಸ್ಥಳೀಯರ ಮನೆಗೆ ಬರುವ ಸಂಬಂಧಿಕರಿಗೆ ಅಷ್ಟೇನು ನಿರ್ಬಂಧ ಇರುವುದಿಲ್ಲ. ಮೊದಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದು ಬರುವ ಸವಾಲುಗಳನ್ನು ಹಂತ–ಹಂತವಾಗಿ ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ. ಪ್ರವಾಸೋದ್ಯಮ ಇಲಾಖೆಗೆ ಬಂದು ಅರ್ಜಿ ಸಲ್ಲಿಸದಿದ್ದರೆ ಆಯಾ ಗ್ರಾಮ ಪಂಚಾಯಿತಿ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.