ADVERTISEMENT

ಚಿಕ್ಕಮಗಳೂರು | ಪ್ರವಾಸಿ ತಾಣ: ಬೇಕಿದೆ ಸೌಕರ್ಯ

ವಿಜಯಕುಮಾರ್ ಎಸ್.ಕೆ.
Published 1 ಸೆಪ್ಟೆಂಬರ್ 2025, 4:25 IST
Last Updated 1 ಸೆಪ್ಟೆಂಬರ್ 2025, 4:25 IST
ಕಳಸ ತಾಲ್ಲೂಕಿನ ಎಸ್.ಕೆ.ಮೇಗಲ್ ಗ್ರಾಮದ ಅಜ್ಜಿಗುಡ್ಡೆ ಪ್ರವಾಸಿ ತಾಣ
ಕಳಸ ತಾಲ್ಲೂಕಿನ ಎಸ್.ಕೆ.ಮೇಗಲ್ ಗ್ರಾಮದ ಅಜ್ಜಿಗುಡ್ಡೆ ಪ್ರವಾಸಿ ತಾಣ   

ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸೇರಿ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ವಾಹನ ಸಂಚಾರ ನಿಯಂತ್ರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಸೋಮವಾರ (ಸೆ.1) ಪ್ರಾಯೋಗಿಕವಾಗಿ ಜಾರಿಯಾಗಲಿದೆ. ಚಿಕ್ಕಮಗಳೂರು ಎಂದರೆ ಮುಳ್ಳಯ್ಯನಗಿರಿ ಮಾತ್ರವಲ್ಲ ಹಲವು ಪ್ರವಾಸಿ ತಾಣಗಳಿವೆ. ಆದರೆ, ರಸ್ತೆ ಸಂಪರ್ಕ ಮತ್ತು ಮೂಲಸೌಕರ್ಯ ಕೊರತೆಗಳಿವೆ.

ಐದು ವರ್ಷಗಳ ಅವಧಿಯಲ್ಲಿ ಐ.ಡಿ.ಪೀಠ ವ್ಯಾಪ್ತಿಯಲ್ಲಿ 68 ಭೂ ಕುಸಿತಗಳು ಸಂಭವಿಸಿವೆ. 2021ರಿಂದ 2025 ರವರೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ ವರ್ಷದಿಂದ ವರ್ಷಕ್ಕೆ ಭೂಕುಸಿತದ ಸಂಖ್ಯೆ ಹೆಚ್ಚಾಗುತ್ತಿದೆ. 2021ರಲ್ಲಿ 12 ಕಡೆ, 2022ರಲ್ಲಿ 16, 2023ರಲ್ಲಿ 5, 2024ರಲ್ಲಿ 20 ಹಾಗೂ 2025ರಲ್ಲಿ ಈವರೆಗೆ 15 ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಅಲ್ಲದೇ ಮಳೆಯ ಪ್ರಮಾಣವೂ ಜಾಸ್ತಿಯಾಗುತ್ತಿದೆ. ಜೂನ್ ಮತ್ತು ಜುಲೈನಲ್ಲಿ ಈ ಭಾಗದಲ್ಲಿ ಸುರಿದಿರುವ ಮಳೆಯ ಪ್ರಮಾಣ ಗಮನಿಸಿದರೆ ವಾಡಿಕೆಗಿಂತ ಮೂರು ಪಟ್ಟು ಜಾಸ್ತಿ ಇದೆ. 

ಕಡಿದಾದ ಇಳಿಜಾರು ಪ್ರದೇಶವೇ ಹೆಚ್ಚಿದ್ದು, ವಾಹನಗಳ ಸಂಖ್ಯೆ ಹೆಚ್ಚಾಗಿ ನೆಲಕ್ಕೆ ಒತ್ತಡ ಹೆಚ್ಚಾದಷ್ಟು ಭೂಕುಸಿತ ಹೆಚ್ಚಾಗಲಿದೆ ಎಂದು ಜಿಎಸ್ಐ ವರದಿ ಹೇಳಿದೆ. ಈ ಎಲ್ಲಾ ಕಾರಣಗಳಿಂದ ಕೆಲ ನಿಯಂತ್ರಣ ಅನಿವಾರ್ಯ ಎನ್ನುತ್ತಿದೆ ಜಿಲ್ಲಾಡಳಿತ.

ADVERTISEMENT

ಕೆಮ್ಮಣ್ಣುಗುಂಡಿ, ಎತ್ತಿನಭುಜ, ದೇವರಮನೆ, ರಾಣಿಝರಿ, ಅಯ್ಯನಕೆರೆ, ಕ್ಯಾತಮಕ್ಕಿ, ಕುದುರೆಮುಖ ಸೇರಿ ಹಲವು ಪ್ರವಾಸಿ ತಾಣಗಳಿವೆ. ಅಲ್ಲಿಯೂ ಅಷ್ಟೇ ನೈಸರ್ಗಿಕ ಸಂಪತ್ತು, ಪ್ರವಾಸಿಗರಿಗೆ ಹಿತ ಎನಿಸುವ ಪ್ರಕೃತಿ ತಾಣಗಳಿವೆ. ರಸ್ತೆ ಸಂಪರ್ಕ, ಮೌಲಸೌಕರ್ಯ ಇಲ್ಲದಿರುವ ಕಾರಣ ಪ್ರವಾಸಿ ತಾಣಗಳತ್ತ ಜನರ ಆಸಕ್ತಿ ಕಡಿಮೆ ಆಗಿದೆ. 

ವಾಸಿ ತಾಣಗಳಿಗೆ ರಸ್ತೆ ಸಂಪರ್ಕ ಸರಿಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳೆ ಬಿಡುವು ನೀಡಿದ ಕೂಡಲೇ ಕಾಮಗಾರಿಗಳು ಆರಂಭವಾಗಲಿವೆ.
–ಸಿ.ಎನ್.ಮೀನಾ ನಾಗರಾಜ್ ಜಿಲ್ಲಾಧಿಕಾರಿ

ಮಳೆಗಾಲದ ‌ವಾರಾಂತ್ಯಗಳಲ್ಲಿ ದಿನಕ್ಕೆ 3 ಸಾವಿರ ತನಕ ವಾಹನಗಳು ಮುಳ್ಳಯ್ಯನಗಿರಿ ಕಡೆಗೆ ಹೋಗುತ್ತಿವೆ. ಈಗ ದಿನಕ್ಕೆ 1,200 ವಾಹನಗಳನ್ನು ಜಿಲ್ಲಾಡಳಿತ ನಿಗದಿ ಮಾಡಿದೆ. ಬರುವ ಪ್ರವಾಸಿಗರು ಈಗ ಬೇರೆ ಬೇರೆ ತಾಣಗಳಿಗೆ ತೆರಳುವುದು ಅನಿವಾರ್ಯ. ಆದರೆ, ಅಲ್ಲಿಗೆ ಬೇಕಿರುವ ಸೌಕರ್ಯಗಳನ್ನು ಕಲ್ಪಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ.

ಕಳಸ: ಆಕರ್ಷಕ ವೀಕ್ಷಣಾ ತಾಣಗಳು

ಕಳಸ: ತಾಲ್ಲೂಕಿನ ಮೂಲೆ ಮೂಲೆಯಲ್ಲೂ ರಮಣೀಯ ವೀಕ್ಷಣಾ ತಾಣಗಳು ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.

15 ವರ್ಷದ ಹಿಂದೆ ಪ್ರವರ್ಧಮಾನಕ್ಕೆ ಬಂದ ಹೊರನಾಡು ಸಮೀಪದ ಬಲಿಗೆ ಕ್ಯಾತನಮಕ್ಕಿ, ಮೈದಾಡಿ, ರಾಣಿಝರಿ ಈಗ ರಾಜ್ಯದ ಪ್ರವಾಸಿಗರಿಗೆ ಚಿರಪರಿಚಿತ ತಾಣಗಳು. ಇದರ ಜೊತೆಗೆ ಹೊಸದಾಗಿ ಮತ್ತಷ್ಟು ಜಾಗಗಳು ಪರಿಚಯ ಆಗುತ್ತಿದ್ದು, ಪ್ರವಾಸಿಗರ ಪಾಲಿಗೆ ರೋಮಾಂಚನ ತರುತ್ತಿವೆ.

ಹೊರನಾಡು ಗ್ರಾಮದ ಕವನಳ್ಳ ಸಮೀಪದಿಂದ ತಲುಪಬಹುದಾದ ಮೇರುತಿಗುಡ್ಡದ ಚಾರಣ ಪ್ರವಾಸಿಗರ ಪಾಲಿಗೆ ಅವಿಸ್ಮರಣೀಯ ಅನುಭವ ಕೊಡುತ್ತದೆ. ಎಸ್.ಕೆ.ಮೇಗಲ್ ಗ್ರಾಮದ ಅಜ್ಜಿಗುಡ್ಡೆ ಮತ್ತು ಕಳಕೋಡು ಗ್ರಾಮದ ಕಾರ್ಲೆ ಸಮೀಪದ ಗುಡ್ಡದ ವೀಕ್ಷಣಾ ಪ್ರದೇಶ ಕೂಡ ಆಕರ್ಷಕವಾಗಿವೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಅನೇಕ ಗುಡ್ಡಗಳು ಸಾಹಸದ ಚಾರಣಕ್ಕೆ ಹೇಳಿ ಮಾಡಿಸಿದಂತೆ ಇವೆ. ಆದರೆ, ರಾಷ್ಟ್ರೀಯ ಉದ್ಯಾನ ಪ್ರವೇಶಿಸಲು ಸದ್ಯಕ್ಕೆ ಅನುಮತಿ ಇಲ್ಲ. ಇದರ ಜತೆಗೆ ಮಳೆಗಾಲದಲ್ಲಿ ಅಲ್ಲಲ್ಲಿ ಮೂಡುವ ಅನಾಮಿಕ ಜಲಪಾತಗಳು ಮತ್ತು ಎತ್ತರದ ದಿಣ್ಣೆಗಳ ಮೇಲಿನ ಅಪರಿಚಿತ ವೀಕ್ಷಣಾ ತಾಣಗಳು ಭವಿಷ್ಯದಲ್ಲಿ ಪ್ರವಾಸಿಗರ ನೆಚ್ಚಿನ ತಾಣಗಳಾಗಲಿವೆ. 

ಅಯ್ಯನಕೆರೆ, ಶಕುನಗಿರಿ: ಸೌಕರ್ಯಗಳ ಕೊರತೆ

ಕಡೂರು: ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಅಯ್ಯನಕೆರೆ ಜನರ ಗಮನ ಸೆಳೆಯುವ ಒಂದು ಪ್ರವಾಸಿ ತಾಣ ಆಗಿದೆ. ಜತೆಗೆ ಹಲವಾರು ಚಲನಚಿತ್ರಗಳಲ್ಲಿ ಇಲ್ಲಿನ ಪ್ರಕೃತಿ ರಮಣೀಯ ದೃಶ್ಯಗಳ ಚಿತ್ರೀಕರಣವೂ ನಡೆದಿದ್ದು, ಜನರ ಗಮನ ಸೆಳೆಯುವಲ್ಲಿ ಯಶಸ್ವಿಯೂ ಆಗಿದೆ.

ಕೆರೆ ತುಂಬಿದ ಸಂದರ್ಭದಲ್ಲಿ ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕೆರೆಯ ಕೋಡಿ ನೀರು ಹರಿಯುವಲ್ಲಿ ಇರುವ ವ್ಯವಸ್ಥೆಯಿಂದ ಮಹಿಳೆಯರು ಮಕ್ಕಳು ನೀರಾಟ ಆಡಲು ಸುಲಭವಾಗಿದೆ. ಆದರೆ, ಅಂತಹ ಸಂದರ್ಭದಲ್ಲಿ ಮೂಲ ಸೌಲಭ್ಯಗಳಾದ ಶೌಚಾಲಯ, ಒದ್ದೆಯಾದ ಬಟ್ಟೆ ಬದಲಿಸುವ ಕೊಠಡಿ, ಆಹಾರ ಲಭ್ಯತೆಯೂ ಇಲ್ಲ.

ಗ್ರಾಮ ಪಂಚಾಯಿತಿ ವತಿಯಿಂದ ಫುಡ್‌ಕೋರ್ಟ್‌ ನಿರ್ಮಿಸಲು ಮುಂದಾದರೂ ಇನ್ನೂ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಆದ್ದರಿಂದ ಪ್ರವಾಸಿಗರು ತಿಂಡಿ-ತಿನಿಸು ಅರಸಿಕೊಂಡು ಸಖರಾಯಪಟ್ಟಣಕ್ಕೆ ತೆರಳಬೇಕಿದೆ. ಅದೇ ರೀತಿ ಸಖರಾಯಪಟ್ಟಣದ ಶಕುನ ರಂಗನಾಥಸ್ವಾಮಿ ಇತಿಹಾಸ ಪ್ರಸಿದ್ಧ ದೇವಾಲಯವಾಗಿದ್ದು ರಥೋತ್ಸವದ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಬರುತ್ತಾರೆ. ಹಾಗೆ ಬಂದವರಲ್ಲಿ ಬಹಳಷ್ಟು ಮಂದಿ ದೇವಾಲಯದ ಮೂಲಸ್ಥಾನ ಶಕುನಗಿರಿಗೆ ತೆರಳುತ್ತಾರೆ. ಬೆಟ್ಟದ ಮೇಲಿರುವ ಶಕುನ ರಂಗನಾಥ ಸ್ವಾಮಿಯ ದರ್ಶನ ಮಾಡಲು ಬೆಟ್ಟದ ಬುಡಕ್ಕೆ ಕಾಲುದಾರಿಯಲ್ಲಿಯೇ ಭಕ್ತರು ಸಾಗಬೇಕಿದೆ. ಆಗೀಗ ಆಟೊರಿಕ್ಷಾಗಳು ಲಭ್ಯವಾದರೂ ಪೂರ್ಣ ಹಾದಿ ಕ್ರಮಿಸಲು ಸಾಧ್ಯವಿಲ್ಲ.

ಬೆಟ್ಟಕ್ಕೆ ಕೂಡ ಮೆಟ್ಟಿಲುಗಳ ಬದಲಾಗಿ ಕಾಲುಹಾದಿಯೇ ದಾರಿ. ಬೆಟ್ಟ ತಲುಪಿ ಬಾಯಾರಿದರೆ ನೀವು ಕೆಳಗಿನಿಂದಲೇ ನೀರು ಒಯ್ದಿದ್ದರೆ ಮಾತ್ರ ದಾಹ ತೀರಬಲ್ಲದು. ಏಕೆಂದರೆ ಬೆಟ್ಟದ ಮೇಲ್ಭಾಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಈ ಭಾಗಕ್ಕೆ ಇನ್ನಷ್ಟು ಜನರನ್ನು ಸೆಳೆಯಬಹುದಾಗಿದೆ.

ಕರ್ನಾಟಕದ ಕಾಶ್ಮೀರ ಕೊಪ್ಪ

ಕೊಪ್ಪ: ಬೆಟ್ಟ ಗುಡ್ಡಗಳಿಂದ ಆವೃತವಾಗಿ ಮಲೆನಾಡಿನ ಮಧ್ಯ ಭಾಗದಲ್ಲಿ ನೈಸರ್ಗಿಕ ಸೌಂದರ್ಯದಿಂದಲೇ ಜನರನ್ನು ಸೆಳೆಯುವ ಸುಂದರ ತಾಣ ಕೊಪ್ಪವನ್ನು ‘ಕರ್ನಾಟಕದ ಕಾಶ್ಮೀರ’ ಎಂದೂ ಕರೆಯಲಾಗುತ್ತದೆ.

ಪಟ್ಟಣದ ಕೇಂದ್ರ ಸ್ಥಾನದಲ್ಲಿ ಕೋಪದ ವೀರಭದ್ರಸ್ವಾಮಿ ದೇವಸ್ಥಾನ ಪ್ರಾಮುಖ್ಯ ಪಡೆದಿದೆ. ತುಂಗಾ ನದಿ ತೀರದಲ್ಲಿರುವ ಹಿಂದೂ ಧಾರ್ಮಿಕ ಕೇಂದ್ರಗಳಾದ ಹರಿಹರಪುರ ಮಠ, ಶಕಟಪುರ ಮಠಕ್ಕೆ, ಕೆಸುವೆ ಸಮೀಪದ ಕಮಂಡಲ ಗಣಪತಿ ದೇವಸ್ಥಾನಕ್ಕೆ ಪ್ರವಾಸಿಗರು ಹೆಚ್ಚು ಭೇಟಿ ನೀಡುತ್ತಾರೆ.

ತಾಲ್ಲೂಕಿನ ಕುದುರೆಗುಂಡಿ ಸಮೀಪದಲ್ಲಿರುವ ಅಬ್ಬಿಗುಂಡಿ ಜಲಪಾತ ಮಳೆಗಾಲದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿ ಚೆಕ್ ಡ್ಯಾಮ್‌ನಿಂದ ಧುಮ್ಮಿಕ್ಕುವ ನೀರನ್ನು ನೋಡಲು ಪ್ರವಾಸಿಗರು ಸ್ಥಳೀಯರ ಮಾರ್ಗದರ್ಶನದೊಂದಿಗೆ ಹುಡುಕಿಕೊಂಡು ಬರುತ್ತಾರೆ. ರಾಷ್ಟ್ರ ಕವಿ ಕುವೆಂಪು ಹುಟ್ಟೂರು ತಾಲ್ಲೂಕಿನ ಹಿರೇಕೊಡಿಗೆಗೆ ಭೇಟಿ ನೀಡುವ ಪ್ರವಾಸಿಗರು ಈ ಸ್ಥಳವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎನ್ನುತ್ತಾರೆ.

ಎತ್ತಿನ ಭುಜಕ್ಕೆ ಬೇಕು ಸೌಲಭ್ಯ

ಮೂಡಿಗೆರೆ: ತಾಲ್ಲೂಕಿನಲ್ಲಿ ‌ದೇವರಮನೆ, ಎತ್ತಿನ‌ಭುಜ, ಬೆಟ್ಟದಭೈರವೇಶ್ವರ ದೇವಾಲಯ ಸೇರಿದಂತೆ ಹಲವು ಪ್ರಾಕೃತಿಕ ಪ್ರವಾಸಿ ತಾಣಗಳಿದ್ದು, ಕೆಲವು ಮೂಲ‌ ಸೌಲಭ್ಯವಿಲ್ಲದೇ ಸೊರಗುತ್ತಿವೆ.

ತಾಲ್ಲೂಕು ಕೇಂದ್ರದಿಂದ 20 ಕಿಲೋ ಮೀಟರ್ ದೂರದಲ್ಲಿರುವ ದೇವರಮನೆಯು ಧಾರ್ಮಿಕ ಕೇಂದ್ರ ಮಾತ್ರವಾಗಿರದೇ, ಪ್ರಾಕೃತಿಕ‌ ಪ್ರವಾಸಿ ತಾಣವೂ ಆಗಿದೆ. ಆದರೆ. ಈ ತಾಣಕ್ಕೆ ಹಲವು ಮಾರ್ಗಗಳಿಂದ ತಲುಪ ಬಹುದಾದರೂ, ಬಹುತೇಕ ರಸ್ತೆಗಳು ಗುಂಡಿಯಾಗಿವೆ. ಪ್ರವಾಸಿಗರು ತಲುಪಲು ಸಂಕಷ್ಟವಾಗುತ್ತಿದೆ.

ಅಲ್ಲದೇ ಈ ತಾಣದಲ್ಲಿ ವಾಹನಗಳ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲ. ವಾರಾಂತ್ಯದಲ್ಲಿ ಗ್ರಾಮೀಣ ರಸ್ತೆಯಲ್ಲೂ ಸಂಚಾರ ದಟ್ಟಣೆ ಉಂಟಾಗಿ ಪ್ರವಾಸಿಗರೊಂದಿಗೆ ಸ್ಥಳೀಯರೂ ಸಮಸ್ಯೆ ಎದುರಿಸುವಂತಾಗಿದೆ.‌ ಈ ತಾಣದಲ್ಲಿ ವಾಸ್ತವ್ಯಕ್ಕೆ ಸರ್ಕಾರಿ ವಸತಿಗೃಹ, ವಾಹನ ನಿಲುಗಡೆ ಸ್ಥಳಗಳನ್ನು ನಿರ್ಮಿಸಿದರೆ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಸಾಧ್ಯವಾಗುತ್ತದೆ.

ತಾಲ್ಲೂಕಿನ ಪ್ರಸಿದ್ಧ ದೇವಾಲಯವಿರುವ ಭೈರಾಪುರದ ನಾಣ್ಯ ಭೈರವೇಶ್ವರ ದೇವಾಲಯವೂ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿಂದಲೇ ಎತ್ತಿನಭುಜ ಟ್ರಕ್ಕಿಂಗ್ ಪ್ರಾರಂಭವಾಗುತ್ತದೆ. ಈ ಪ್ರದೇಶವೂ ಮೂಲ ಸೌಲಭ್ಯ ವಂಚಿತವಾಗಿದ್ದು, ವಾಹನ‌ ಸೌಲಭ್ಯವಿಲ್ಲವಾಗಿದೆ. ಖಾಸಗಿ ವಾಹಗಳನ್ನೇ ಅವಲಂಬಿಸುವಂತಾಗಿದೆ. ಈ ರಸ್ತೆಯ ಮೂಲಕ ಶಿಶಿಲಾ ಗ್ರಾಮಕ್ಕೆ ರಸ್ತೆ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿತ್ತು. ಅದರೆ ಹೆದ್ದಾರಿ ಪ್ರಾಧಿಕಾರವು ಯೋಜನೆಯನ್ನು ಅನುಮೋದಿಸಲಿಲ್ಲ.‌

ತಾಲ್ಲೂಕಿನ ಜಾವಳಿ ಗ್ರಾಮದಲ್ಲಿ ಇರುವ ಹೇಮಾವತಿ ನದಿ ಉಗಮ ತಾಣ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದರೂ ಪ್ರವಾಸಿಗರ ಸಂಖ್ಯೆ ಮಾತ್ರ ವಿರಳ ವಾಗಿರುತ್ತದೆ. ಹೆದ್ದಾರಿಯಿಂದ ಕೇವಲ 2 ಕಿಲೋ ಮೀಟರ್ ದೂರದಲ್ಲಿರುವ ಈ ತಾಣವನ್ನು ಸಹ ಅಭಿವೃದ್ಧಿ ಪಡಿಸಿದರೆ ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿಸಬಹುದು.‌

ಹಾಂದಿ ಗ್ರಾಮದಲ್ಲಿರುವ ಬೇರುಗಂಡಿ ಬೃಹನ್ಮಠವು ಪ್ರಮುಖ ಧಾರ್ಮಿಕ ತಾಣವಾಗಿದ್ದು, ಸಿದ್ದೇಶ್ವರ ಗದ್ದುಗೆ ಸೇರಿದಂತೆ ಹಲವು ದೇವರು ನೆಲೆಸಿರುವ ಕೇಂದ್ರವಾಗಿದೆ. ಇಲ್ಲಿಗೆ ಸಮೀಪದಲ್ಲಿಯೇ ಸಂತೋಷ್ ಫಾಲ್ಸ್ ಇರುವುದರಿಂದ ಜಿಲ್ಲೆಯ ಜನರಿಗೆ ಒಂದು ದಿನದ ಪ್ರವಾಸಕ್ಕೆ ಸೂಕ್ತ ತಾಣವಾಗಿದೆ. 

ರಸ್ತೆ ಅಭಿವೃದ್ಧಿ ಬಾಕಿ

ತರೀಕೆರೆ: ಪ್ರಕೃತಿ ಮತ್ತು ನೈಸರ್ಗಿಕವಾಗಿ ಅರೆ ಮಲೆನಾಡಿನಿಂದ ಕೂಡಿರುವ ತರೀಕೆರೆ ತಾಲ್ಲೂಕು ವಿಶಿಷ್ಟ ಬೌಗೋಳಿಕ ಪ್ರದೇಶಗಳನ್ನೊಳಗೊಂಡಿದೆ. ತಾಲ್ಲೂಕಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು ತಾಲ್ಲೂಕು ಕೇಂದ್ರದಿಂದ ಕೆಮ್ಮಣ್ಣುಗುಂಡಿ 33 ಕಿ.ಮೀ., ಹೆಬ್ಬೆ ಜಲಪಾತ  37 ಕೀ.ಮೀ., ಭದ್ರಾ ಅಣೆಕಟ್ಟು 24 ಕಿ.ಮೀ., ಭದ್ರಾ ಅಭಯಾರಣ್ಯ 28 ಕಿ.ಮೀ., ಸೋಂಪುರ ಗ್ರಾಮದಲ್ಲಿರುವ ಸೋಮೇಶ‍್ವರ ದೇವಸ್ಥಾನ 18 ಕಿ.ಮೀ., ಅಮೃತಾಪುರದ ಅಮೃತೇಶ‍್ವರ ದೇವಸ್ಥಾನ 10 ಕಿ.ಮೀ. ದೂರದಲ್ಲಿವೆ. ಆದರೆ, ರಸ್ತೆಗಳ ಸಂಪರ್ಕಗಳ ಸಮಸ್ಯೆ ಇದೆ. ಕೆಮ್ಮಣ್ಣುಗುಂಡಿಗೆ ಹೋಗುವ ರಸ್ತೆ ಹಾಳಾಗಿ ಹಲವು ವರ್ಷಗಳೇ ಕಳೆದಿವೆ. ಆದರೆ, ಅಭಿವೃದ್ಧಿ ಕಂಡಿಲ್ಲ.

ಪೂರಕ ಮಾಹಿತಿ: ರವಿ ಕೆಳಂಗಡಿ, ರವಿಕುಮಾರ್ ಶೆಟ್ಟಿಹಡ್ಲು, ಎನ್.ಸೋಮಶೇಖರ್, ಕೆ.ನಾಗರಾಜ್

ಕಡೂರು ತಾಲ್ಲೂಕಿನ ಅಯ್ಯನಕೆರೆ ವೀಕ್ಷಣೆಗೆ ಬಂದ ಪ್ರವಾಸಿಗರು
ಕಡೂರು ತಾಲ್ಲೂಕಿನ ಅಯ್ಯನಕೆರೆಯ ನೋಟ
ಕಳಸ ತಾಲ್ಲೂಕಿನ ಕ್ಯಾತನಮಕ್ಕಿ ವೀಕ್ಷಣಾ ತಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.