ADVERTISEMENT

ಕಡೂರು | ಪುರಸಭೆಗಳ ಅವಧಿ ಉಳಿಸಲು ಮುಖ್ಯಮಂತ್ರಿ ಭರವಸೆ: ಭಂಡಾರಿ ಶ್ರೀನಿವಾಸ್‌

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 5:21 IST
Last Updated 18 ಅಕ್ಟೋಬರ್ 2025, 5:21 IST
ಪುರಸಭೆ ಮತ್ತು ನಗರಸಭೆಗಳು ಪೂರ್ಣಾವಧಿ ಕಾರ್ಯ ನಿರ್ವಹಿಸಲು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನವಲಗುಂದ ಶಾಸಕ ಎನ್‌.ಎಚ್‌.ಕೋನರಡ್ಡಿ ಅವರ ನೇತೃತ್ವದಲ್ಲಿ ಗುರುವಾರ ಮನವಿ ಸಲ್ಲಿಸಲಾಯಿತು. ಕಡೂರು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಇದ್ದರು.
ಪುರಸಭೆ ಮತ್ತು ನಗರಸಭೆಗಳು ಪೂರ್ಣಾವಧಿ ಕಾರ್ಯ ನಿರ್ವಹಿಸಲು ಸಹಕರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನವಲಗುಂದ ಶಾಸಕ ಎನ್‌.ಎಚ್‌.ಕೋನರಡ್ಡಿ ಅವರ ನೇತೃತ್ವದಲ್ಲಿ ಗುರುವಾರ ಮನವಿ ಸಲ್ಲಿಸಲಾಯಿತು. ಕಡೂರು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್‌ ಇದ್ದರು.   

ಕಡೂರು: ‘ರಾಜ್ಯದ ವಿವಿಧ ನಗರಸಭೆ ಮತ್ತು ಪುರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರು ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಸ್ಥಳೀಯ ಸಂಸ್ಥೆಗಳು ಪೂರ್ಣಾವಧಿ ಅಧಿಕಾರ ನಡೆಸಲು ಕಾಲಾವಕಾಶ ಕೋರಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌ ತಿಳಿಸಿದರು.

ಕಡೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಹೈಕೋರ್ಟ್‌ನಲ್ಲಿ ಗುರುವಾರ ನಾವು ಸಲ್ಲಿಸಿದ್ದ ಅರ್ಜಿ ಕುರಿತು ತೀರ್ಪು ಬರುವುದಿತ್ತು. ನ್ಯಾಯಾಧೀಶರು ಅಧಿಕಾರಿಗಳನ್ನು ಮೀಸಲಾತಿ ಕಲ್ಪಿಸುವಲ್ಲಿ ವಿಳಂಬ ಮಾಡಿದ್ದು ಏಕೆ ಎಂದು ಪ್ರಶ್ನಿಸಿ ಅರ್ಜಿಯನ್ನು ಅ. 25ನೇ ತಾರೀಖಿಗೆ ಮುಂದೂಡಿದ್ದಾರೆ. ನಂತರ, ನವಲಗುಂದ ಶಾಸಕ ಎನ್‌.ಎಚ್‌.ಕೋನರಡ್ಡಿ ಅವರ ನೇತೃತ್ವದಲ್ಲಿ ಜಿಲ್ಲೆಯ ಕಡೂರು, ಬೀರೂರಿನ ಮೋಹನ್‌ ಕುಮಾರ್‌, ನರಸಿಂಹರಾಜಪುರದ ಜುಬೇದಾ, ಮೂಡಿಗೆರೆಯ ವೆಂಕಟೇಶ್‌, ಹೊಳಲ್ಕೆರೆಯ ವಿಜಯಸಿಂಹ, ಮೇಲುಕೋಟೆ, ಗೌರಿಬಿದನೂರು, ಹೊಸದುರ್ಗ ಪುರಸಭಾಧ್ಯಕ್ಷರು ಮುಳಬಾಗಿಲು, ಕೋಲಾರ, ಹಿರಿಯೂರು, ಕಲಬುರಗಿ ನಗರಸಭೆ, ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಕಲಘಟಗಿ, ನರಗುಂದ ಮೊದಲಾದ ಪುರಸಭೆ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷರು ಸೇರಿ ನಮ್ಮಲ್ಲಿ ಬಹಳ ಮಂದಿ ಹಿಂದುಳಿದ ವರ್ಗಗಳನ್ನು ಪ್ರತಿನಿಧಿಸುತ್ತಿದ್ದು ನಮ್ಮ 16 ತಿಂಗಳ ಅಧಿಕಾರಾವಧಿಯನ್ನು ಮೊಟಕುಗೊಳಿಸಲಾಗುತ್ತಿದೆ. ಇದನ್ನು ತಪ್ಪಿಸಿ ನಮಗೆ ನ್ಯಾಯ ದೊರೆಯಲು ಸಹಕರಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ವಿವರಿಸಿದರು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಅಡ್ವೊಕೇಟ್‌ ಜನರಲ್‌ ಅವರ ಜತೆ ಈ ವಿಷಯವಾಗಿ ಖುದ್ದಾಗಿ ಮಾತನಾಡಿ, ನ್ಯಾಯ ಒದಗಿಸಲು ಖಂಡಿತವಾಗಿ ಪ್ರಯತ್ನಿಸುತ್ತೇನೆ. ಜನಪ್ರತಿನಿಧಿಗಳ ಹಕ್ಕು ಮೊಟಕು ಗೊಳಿಸಲು ಬಿಡುವುದಿಲ್ಲ ಎನ್ನುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ADVERTISEMENT

ಈ ಸಂದರ್ಭದಲ್ಲಿ ಬಿ.ಆರ್‌.ಮೋಹನ್‌ಕುಮಾರ್‌, ಸೈಯದ್‌ ಯಾಸೀನ್‌, ಶಂಕರ್‌, ಮನು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.