ADVERTISEMENT

ಐಶ್ವರ್ಯ ‍ಪಾರ್ಕ್‌ಗೆ ಬೇಕಿದೆ ಬೇಲಿ

ರಾಮೇಶ್ವರ ನಗರ ಬಡಾವಣೆಯಲ್ಲಿ ಇರುವ ಐಶ್ವರ್ಯ ಪಾರ್ಕ್‌ಗೆ ನಡಿಗೆ ಪಥವಿಲ್ಲ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:46 IST
Last Updated 24 ಡಿಸೆಂಬರ್ 2025, 6:46 IST
ರಾಮೇಶ್ವರನಗರದ ಐಶ್ವರ್ಯ ಪಾರ್ಕ್‌ ಪಕ್ಕದಲ್ಲಿ ಬಿದ್ದಿರುವ ಕಸದ ರಾಶಿ
ರಾಮೇಶ್ವರನಗರದ ಐಶ್ವರ್ಯ ಪಾರ್ಕ್‌ ಪಕ್ಕದಲ್ಲಿ ಬಿದ್ದಿರುವ ಕಸದ ರಾಶಿ   

ಚಿಕ್ಕಮಗಳೂರು: ಮುರಿದು ಬಿದ್ದ ತಂತಿ ಬೇಲಿ, ಬೇಲಿಯ ಪಕ್ಕದಲ್ಲೇ ಕಸದ ರಾಶಿ, ಉದ್ಯಾನದ ಒಳಗೆ ಬೀಡುಬಿಟ್ಟ ದನಗಳು... ಇದು ರಾಮೇಶ್ವರ ನಗರ ಬಡಾವಣೆಯಲ್ಲಿರುವ ಐಶ್ವರ್ಯ ಪಾರ್ಕ್‌ನ ದುಸ್ಥಿತಿ.

ಈ ಬಡಾವಣೆಯ ಜನರು ನಿತ್ಯ ವಾಯು ವಿಹಾರ ಮಾಡಲು, ವಿಶ್ರಾಂತಿ ಪಡೆಯಲು ಈ ಉದ್ಯಾನ ಉಪಯೋಗಿಸುತ್ತಾರೆ. ಮಕ್ಕಳು ಆಟವಾಡಿ ಸಂಭ್ರಮಿಸಲು ಎಲ್ಲಾ ರೀತಿಯ ಆಟಿಕೆ ಸಲಕರಣೆಗಳನ್ನು ನಗರಸಭೆ ಅಳವಡಿಸಿದೆ. ಆದರೆ, ಈ ಉದ್ಯಾನ ಸುತ್ತ ಸೂಕ್ತ ಬೇಲಿ ನಿರ್ಮಾಣ ಮಾಡಿಲ್ಲ.

ಪಾರ್ಕ್‌ನ ಒಂದು ಭಾಗಕ್ಕೆ ಜಾಲರಿ ಬೇಲಿ ಅಳವಡಿಸಲಾಗಿದೆ. ಮತ್ತೊಂದು ಕಡೆಗೆ ಕಲ್ಲು‌ಕಂಬ ಹಾಗೂ ಮುಳ್ಳುತಂತಿಯ ಬೇಲಿ ನಿರ್ಮಾಣ‌ ಮಾಡಲಾಗಿತ್ತು. ಆದರೆ, ಆ‌ ಬೇಲಿ ಈಗ ಸಂಪೂರ್ಣ ಹಾಳಾಗಿದೆ. ಜಾನುವಾರುಗಳು ಪಾರ್ಕ್ ಒಳಗೆ ಬಂದು ಸುತ್ತಲು ನೆಟ್ಟಿರುವ ಗಿಡಗಳನ್ನು ತಿಂದು ಅಲ್ಲೇ ವಿಶ್ರಾಂತಿ ಪಡೆಯುತ್ತಿವೆ. ಇದರಿಂದ ಈ ಪಾರ್ಕ್‌ನಲ್ಲಿ ಹಸಿರು ಇಲ್ಲದಂತಾಗಿದೆ.

ADVERTISEMENT

ನಿತ್ಯ ಈ ಬಡಾವಣೆಯ‌ ಜನ ಪಾರ್ಕ್‌ನಲ್ಲಿ ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರ ಮಾಡಿ ವಿಶ್ರಾಂತಿ ಪಡೆಯುತ್ತಾರೆ. ಪಾರ್ಕ್ ಪಕ್ಕದಲ್ಲೇ ಸಣ್ಣ ಹಳ್ಳದಂತೆ ನೀರು ಹರಿಯುತ್ತಿದೆ. ಆದರೆ, ಈ ಪಾರ್ಕ್ ಸುತ್ತ ಬೇಲೆ ಇಲ್ಲದೆ ಮಕ್ಕಳನ್ನು ಈ ಉದ್ಯಾನಕ್ಕೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.

ಈ ಬಡಾಣೆಯ ನಿವಾಸಿಗಳು ಪಾರ್ಕ್‌ ಪಕ್ಕದಲ್ಲೇ ಕಸ ತಂದು ಸುರಿಯುತ್ತಿದ್ದಾರೆ‌. ಸಮಯಕ್ಕೆ ಸರಿಯಾಗಿ ಕಸದ ಗಾಡಿ ಬಂದರೂ ಇಲ್ಲಿ ಯಾರು ಇಲ್ಲದ ವೇಳೆ ಹಾಗೂ ರಾತ್ರಿ ಸಮಯದಲ್ಲಿ  ಕಸ ರಾಶಿ ಬೀಳುತ್ತಿದೆ. ಇದರಿಂದ ಪಾರ್ಕ್‌ ಸೌಂದರ್ಯ ಮತಷ್ಟು ಹಾಳಾಗುತ್ತಿದೆ.

ಪಾರ್ಕ್‌ನಲ್ಲಿ ವಿಹಾರ ಮಾಡಲು ಸರಿಯಾಗಿ ನಡಿಗೆ ಪಥ ಇಲ್ಲದೆ ನಿವಾಸಿಗಳು ರಸ್ತೆಯಲ್ಲೇ ನಡಿಗೆ ಮಾಡಬೇಕಾದ ಅನಿವಾರ್ಯತೆ ಇದೆ. ಬಹುತೇಕರು ಜಿಲ್ಲಾ ಆಟದ ಮೈದಾನಕ್ಕೆ ಹೋಗುತ್ತಿದ್ದಾರೆ.

ಈ ಪಾರ್ಕ್‌ ಸುತ್ತಲು ಸೂಕ್ತವಾದ ಬೇಲಿ ನಿರ್ಮಾಣ ಮಾಡಬೇಕಿದೆ. ಜತೆಗೆ ಗಿಡಗಳನ್ನು ನೆಟ್ಟು ಹಸಿರು ಕಾಪಾಡಬೇಕಿದೆ. ನಗರಸಭೆ ಇತ್ತ ಗಮನ ಹರಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ರಾಮೇಶ್ವರನಗರದ ಐಶ್ವರ್ಯ ಪಾರ್ಕ್‌ನಲ್ಲಿ ನಿರ್ವಹಣೆಯಾಗದ ನಡಿಗೆ ‍ಪಥ
ರಾಮೇಶ್ವರನಗರದ ಐಶ್ವರ್ಯ ಪಾರ್ಕ್‌ನಲ್ಲಿ ಬೀಡು ಬಿಟ್ಟಿರುವ ಬೀಡಾಡಿ ದನಗಳು
ಎ.ಸಿ.ಕುಮಾರಗೌಡ

‘ಬೇಲಿ ನಿರ್ಮಾಣಕ್ಕೆ ಕ್ರಮ’

ನಮ್ಮ ವಾರ್ಡ್‌ ವ್ಯಾಪ್ತಿಯಲ್ಲಿ 12 ಉದ್ಯಾನಗಳಿದ್ದು ಇವುಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಐಶ್ವರ್ಯ ಪಾರ್ಕ್‌ಗೆ ಸುತ್ತ ದೀಪಗಳನ್ನು ಅಳವಡಿಸಲಾಗಿದೆ.‌ ಕಳೆ ತೆಗೆಸಿ ಮಕ್ಕಳ ಆಟಿಕೆಗಳಿಗೆ ಬಣ್ಣ ಬಳಿದು ಅನುಕೂಲ ಮಾಡಿಕೊಡಲಾಗಿದೆ ಎಂದು ನಗರಸಭೆ ಸದಸ್ಯ ಎ.ಸಿ.ಕುಮಾರಗೌಡ ಹೇಳಿದರು. ಅನುದಾನದ ಕೊರೆತೆಯಿಂದ ಈ ಪಾರ್ಕ್‌ನ ಬೇಲಿ ನಿರ್ಮಾಣ ಹಾಗೂ ನಡಿಗೆ ಪಥ ನಿರ್ಮಿಸುವ ಕಾಮಗಾರಿ ಬಾಕಿ ಉಳಿದಿದೆ. ಇದನ್ನು ಶೀಫ್ರದಲ್ಲೇ ಅಭಿವೃದ್ಧಿಪಡಿಸಲಾಗುದು ಎಂದರು. ವಾರ್ಡ್‌ನಲ್ಲಿ ಸ್ವಚ್ಛತೆ ಬಗ್ಗೆ ಈಗಾಲೇ ಜಾಗೃತಿ ಮೂಡಿಸಲಾಗಿದೆ. ಸ್ವಚ್ಛತೆ ಕಾಪಾಡಲು ಫಲಕ ಅಳವಡಿಸಲಾಗಿದೆ. ಆದರೂ ಕೆಲವರು ಕಸ ತಂದು ಸುರಿಯುತ್ತಿದ್ದಾರೆ. ಇಲ್ಲಿಯೂ ಸ್ವಚ್ಛತೆ ಬಗ್ಗೆ ಫಲಕ ಅಳವಡಿಸಿ ಕಸ ಹಾಕದಂತೆ ಜಾಗೃತಿ ಮೂಡಿಸಲಾಗುವುದು. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.