ADVERTISEMENT

ಹೈಟೆಕ್‌ ಸಂಕೀರ್ಣಕ್ಕೆ ಯೋಜನೆ

ನಗರಸಭೆ: ₹ 1.82 ಕೋಟಿ ಉಳಿತಾಯ ಬಜೆಟ್‌ ಮಂಡನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 16:08 IST
Last Updated 25 ಮಾರ್ಚ್ 2021, 16:08 IST
ಚಿಕ್ಕಮಗಳೂರಿನ ನಗರಸಭೆ ಸಭಾಂಗಣದಲ್ಲಿ ನಡೆದ ಬಜೆಟ್‌ ಸಭೆಯಲ್ಲಿ ಜಿಲ್ಲಾಧಿಕಾರಿ ರಮೇಶ್‌ ಮಾತನಾಡಿದರು.
ಚಿಕ್ಕಮಗಳೂರಿನ ನಗರಸಭೆ ಸಭಾಂಗಣದಲ್ಲಿ ನಡೆದ ಬಜೆಟ್‌ ಸಭೆಯಲ್ಲಿ ಜಿಲ್ಲಾಧಿಕಾರಿ ರಮೇಶ್‌ ಮಾತನಾಡಿದರು.   

ಚಿಕ್ಕಮಗಳೂರು: ನಗರದ ರಸ್ತೆ, ಚರಂಡಿ, ಉದ್ಯಾನ, ತ್ಯಾಜ್ಯ ವಿಲೇವಾರಿ ಸಹಿತ ವಿವಿಧ ಮೂಲಸೌಕರ್ಯಗಳ ನಿರ್ವಹಣೆ, ಅಭಿವೃದ್ಧಿ ಅಂಶಗಳ ₹ 84.36 ಕೋಟಿ ಮೊತ್ತದ ಬಜೆಟ್‌ ಅನ್ನು ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಗುರುವಾರ ಮಂಡಿಸಿದರು.

2021–22ನೇ ಸಾಲಿಗೆ ಪ್ರಾರಂಭಿಕ ಶಿಲ್ಕು ₹ 20.63 ಕೋಟಿ, ಆದಾಯ ₹ 63.72ಕೋಟಿ ಪ್ರಾರಂಭಿಕ ಶಿಲ್ಕು ಸಹಿತ ಒಟ್ಟು ಆದಾಯ ₹ 84.36 ಕೋಟಿ ನಿರೀಕ್ಷಿಸಲಾಗಿದೆ. ವೆಚ್ಚ ₹ 82.53 ಕೋಟಿ ಅಂದಾಜಿಸಲಾಗಿದೆ. ಒಟ್ಟಾರೆ ₹ 1.8 ಕೋಟಿ ಉಳಿತಾಯ ಲೆಕ್ಕ ಹಾಕಲಾಗಿದೆ. ರಾಜಸ್ವ, ಬಂಡವಾಳ, ವಿಶೇಷ ಖಾತೆ ಹಂತಗಳಲ್ಲಿ ಆಯವ್ಯಯ ಸಿದ್ಧಪಡಿಸಲಾಗಿದೆ.

ಎಂ.ಜಿ ರಸ್ತೆಯ ಮಯೂರ ಹೋಟೆಲ್‌ ಪಕ್ಕದಲ್ಲಿನ ಹಿಂದೂಮುಸಾಫಿರ್‌ ಖಾನಾ ಜಾಗದಲ್ಲಿ ಹೈಟೆಕ್‌ ವಾಣಿಜ್ಯ ಸಂಕೀರ್ಣ ಹಾಗೂ ಪಾರ್ಕಿಂಗ್ ಲಾಟ್‌ ನಿರ್ಮಾಣ ಉದ್ದೇಶಿಸಲಾಗಿದೆ. ಇದಕ್ಕೆ ₹ 10 ಕೋಟಿ ಮೊತ್ತದ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿದೆ.ಆಜಾದ್‌ ಪಾರ್ಕ್‌ ವೃತ್ತದ ಬಳಿಯ ನಗರಸಭೆ ನಿವೇಶನದಲ್ಲಿ ಹೈಟೆಕ್‌ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ₹ 2 ಕೋಟಿ ಮೀಸಲಿಡಲಾಗಿದೆ. ನಗರಸಭೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹ 19ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ADVERTISEMENT

ಅಮೃತ್‌ ಯೋಜನೆ ಕಾಮಗಾರಿ ಶೇ 70 ಮುಗಿದಿದ್ದು, ಎರಡು ತಿಂಗಳಲ್ಲಿ ಮನೆಗಳಿಗೆ ಮೀಟರ್‌ ಅಳವಡಿಸಿ ನೀರು ಪೂರೈಕೆಗೆ ವ್ಯವಸ್ಥೆ ಕೈಗೊಳ್ಳಾಗುವುದು. ಮನೆಗಳ ಕಸ ಸಂಗ್ರಹಕ್ಕೆ 22 ಆಟೊಟಿಪ್ಪರ್‌, ಎರಡು ಟ್ರಾಕ್ಟರ್‌ ಖರೀದಿಸಲಾಗಿದ್ದು, ಏಪ್ರಿಲ್‌ ನಿಂದ ಕಾರ್ಯನಿರ್ವಹಿಸಲಿವೆ. ಪೌರಕಾರ್ಮಿಕರಿಗೆ ಕಲ್ಲುದೊಡ್ಡಿಯ ಉಪ್ಪಳ್ಳಿಯ ಸರ್ವೆ ನಂ 27ರಲ್ಲಿ ಬಡಾವಣೆ ನಿರ್ಮಾಣ, ಗೃಹಭಾಗ್ಯ ಯೋಜನೆಯಡಿ 74 ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಬೇಲೂರು ರಸ್ತೆಯಲ್ಲಿ ನಗರಸಭೆ ಉದ್ಯಾನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಫುಡ್‌ ಕೋರ್ಟ್‌ ನಿರ್ಮಾಣಕ್ಕೆ ₹ 1.5 ಕೋಟಿ ಮೊತ್ತದ ಡಿಪಿಆರ್‌ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ನಗರಸಭೆ ಆವರಣದಲ್ಲಿನ ಉದ್ಯಾನ ಅಭಿವೃದ್ಧಿಗೆ 1.5 ಕೋಟಿ ಮೀಸಲು, ಡಿಪಿಆರ್‌ ತಯಾರಿ. ರತ್ನಗಿರಿ ಬೋರೆಯ ಮಹಾತ್ಮ ಗಾಂಧಿ ಉದ್ಯಾನ ಅಭಿವೃದ್ಧಿಗೆ ₹ 10 ಲಕ್ಷ ಹಂಚಿಕೆ. ನಗರಸಭೆ ಕಚೇರಿ ಕಟ್ಟಡ ₹ 35 ಲಕ್ಷ ವೆಚ್ಚದಲ್ಲಿ ಆಧುನೀಕರಣಕ್ಕೆ ಕ್ರಮ. ಕೆ.ಎಂ ರಸ್ತೆಯ ಎಬಿಸಿ ಕಾಫಿ ಕ್ಯೂರಿಂಗ್‌ ಮುಂಭಾಗದಲ್ಲಿ ನಗರಸಭೆ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಕೆ.ಎಂ.ರಸ್ತೆಯ ಕತ್ರಿಮಾರಮ್ಮ ದೇಗುಲ ಮುಂಭಾಗದ ನಗರಸಭಾ ನಿವೇಶನದಲ್ಲಿ ₹ 1 ಕೋಟಿ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ.

ನಗರದಲ್ಲಿ ಒಳಚರಂಡಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಪ್ರತಿ ಮನೆಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ₹ 26 ಕೋಟಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಸ್ತಾವ ಅನುಮೋದನೆಯಾದರೆ ಪ್ರತಿ ಮನೆಗೂ ಉಚಿತವಾಗಿ ಒಳಚರಂಡಿ ಸಂಪರ್ಕ ಕಲ್ಪಿಸಲಾಗುವುದು. ಬಸವನಹಳ್ಳಿ ಕೆರೆ ಸಮಗ್ರ ಅಭಿವೃದ್ಧಿಗೆ ನಗರಸಭೆಯಿಂದ ವಿಶೇಷ ಆಸಕ್ತಿ ವಹಿಸಲಾಗಿದೆ.ಗೃಹಮಂಡಳಿ ಬಡಾವಣೆ ಮೇಲ್ಭಾಗದಲ್ಲಿ ಸ್ಮಶಾನಕ್ಕೆ ಜಾಗ ಗುರುತಿಸಿ, ಅದಕ್ಕೆ ₹ 80 ಲಕ್ಷ ಅನುದಾನ ಮೀಸಲಿಡಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ₹ 1.3 ಕೋಟಿ, ಬಡವರ ಅಭಿವೃದ್ಧಿಗಾಗಿ ₹ 20 ಲಕ್ಷ, ಅಂಗವಿಕಲರ ಅಭಿವೃದ್ಧಿಗಾಗಿ ₹ 10 ಲಕ್ಷ ಮೀಸಲಿಡಲಾಗಿದೆ. ಶೇ 5 ಯೋಜನೆಯಡಿ ₹ 50 ಲಕ್ಷದಲ್ಲಿ 55 ತ್ರಿಚಕ್ರ ವಾಹನ ಖರೀದಿ ಟೆಂಡರ್‌ ಹಂತದಲ್ಲಿದೆ.

27 ವಿಷಯಗಳಿಗೆ ಅನುಮೋದನೆc

ಖಾಸಗಿ ಜಾಹೀರಾತು ನಾಮಫಲಕಗಳ ಪರವಾನಗಿ ಶುಲ್ಕ ಪರಿಷ್ಕರಣೆ, ಆಸ್ತಿ ತೆರಿಗೆಯನ್ನು ಪ್ರಸಕ್ತ ಸಾಲಿನ ಮಾರುಕಟ್ಟೆ ದರದಂತೆ ಪರಿಷ್ಕರಣೆ ಸಹಿತ 27 ವಿಷಯಗಳಿಗೆ ಅನುಮೋದನೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.