ADVERTISEMENT

ನರಸಿಂಹರಾಜಪುರ | ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ₹12.77 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:48 IST
Last Updated 4 ಮಾರ್ಚ್ 2026, 5:48 IST
ನರಸಿಂಹರಾಜಪುರ ತಾಲ್ಲೂಕು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಹೊಸ ಕೊಪ್ಪ ಗ್ರಾಮದಲ್ಲಿ ಕಂಡು ಬಂದ ಕಾಡಾನೆಗಳ ಹಿಂಡು 
ನರಸಿಂಹರಾಜಪುರ ತಾಲ್ಲೂಕು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿಯ ಹೊಸ ಕೊಪ್ಪ ಗ್ರಾಮದಲ್ಲಿ ಕಂಡು ಬಂದ ಕಾಡಾನೆಗಳ ಹಿಂಡು    

ನರಸಿಂಹರಾಜಪುರ: ಕೊಪ್ಪ ಅರಣ್ಯವಿಭಾಗ ವ್ಯಾಪ್ತಿಯ ನರಸಿಂಹರಾಜಪುರ, ಚಿಕ್ಕಗ್ರಹಾರ ಮತ್ತು ಬಾಳೆಹೊನ್ನೂರು ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕೊಪ್ಪ ಅರಣ್ಯ ವಿಭಾಗ ವ್ಯಾಪ್ತಿಯ ನರಸಿಂಹರಾಜಪುರ, ಚಿಕ್ಕಗ್ರಹಾರ ಮತ್ತು ಬಾಳೆಹೊನ್ನೂರು ವಲಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ ಉಪಟಳವು ದಿನೇ ದಿನೇ ಹೆಚ್ಚಾಗುತ್ತಿದ್ದು, ಭದ್ರಾ ಅಭಯಾರಣ್ಯದಿಂದ ಕಾಡಾನೆಗಳು ನರಸಿಂಹರಾಜಪುರ ಮತ್ತು ಚಿಕ್ಕಗ್ರಹಾರ ವಲಯ ವ್ಯಾಪ್ತಿಗೆ ಭದ್ರಾ ಹಿನ್ನೀರಿನ ಪ್ರದೇಶ ಮತ್ತು ಭದ್ರಾ ನದಿಯನ್ನು ದಾಟಿ ಬಂದು ಬೀಡು ಬಿಟ್ಟಿವೆ. ಮೂಡಿಗೆರೆ ಮತ್ತು ಆಲೂರು ವಲಯಗಳಿಂದ ಬಾಳೆಹೊನ್ನೂರು ವಲಯಕ್ಕೆ ಕಾಡಾನೆಗಳು ಬಂದು ರೈತರು ಬೆಳೆದಂತಹ ಬೆಳೆಗಳನ್ನು ನಾಶ ಮಾಡುತ್ತಿವೆ. ನರಸಿಂಹರಾಜಪುರ, ಚಿಕ್ಕಗ್ರಹಾರ ವಲಯ ಮತ್ತು ಬಾಳೆಹೊನ್ನೂರು ವಲಯಗಳ ವ್ಯಾಪ್ತಿಯಲ್ಲಿ ಬರುವ ಅರಣ್ಯ ಪ್ರದೇಶ ಮತ್ತು ಕಾಫಿತೋಟಗಳಲ್ಲಿ ಸುಮಾರು 30ರಿಂದ 40 ಕಾಡಾನೆಗಳು ಇರುವುದು ಕಂಡು ಬಂದಿರುತ್ತವೆ. 2024ರ ನವೆಂಬರ್‌ನಿಂದ 2025ರ ಜುಲೈವರೆಗೆ ಕಾಡಾನೆಗಳ ದಾಳಿಯಿಂದ ನಾಲ್ವರು ಮೃತಪಟ್ಟಿದ್ದು, ಕಾಡಾನೆಗಳ ಹಾವಳಿಯನ್ನು ಯಶಸ್ವಿಯಾಗಿ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)ಅವರು ಪ್ರಸ್ತಾವ ಸಲ್ಲಿಸಿದ್ದರು. ಈ ಪ್ರಸ್ತಾವಕ್ಕೆ ಸರ್ಕಾರ ಮಾರ್ಚ್ 3ರ ಮಂಗಳವಾರ ಅನುಮೋದನೆ ನೀಡಿದೆ.

ಸರ್ಕಾರ ನೀಡಿರುವ ಅನುಮೋದನೆಯ ಪ್ರಕಾರ ಕೊಪ್ಪ ವಿಭಾಗದ ಚಿಕ್ಕಗ್ರಹಾರ ವಲಯ ಅರಣ್ಯ ವ್ಯಾಪ್ತಿಯ ಕೊಳ್ಳೇಹಳ್ಳದಿಂದ ಕರ್ಕೂಟ ಪ್ರದೇಶದವರೆಗೆ ಒಟ್ಟು 2.57 ಕಿ.ಮೀ ವಿಸ್ತೀರ್ಣದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಅಂದಾಜು ಮೊತ್ತ ₹4.31ಕೋಟಿ ಅನುದಾನ, ಚಿಕ್ಕಗ್ರಹಾರ ಅರಣ್ಯ ವಲಯ ವ್ಯಾಪ್ತಿಯ ಸಾರ್ಯದಿಂದ ಕರ್ಕೂಟ ಪ್ರದೇಶದವರೆಗೆ ಒಟ್ಟು 2.81 ಕಿ.ಮೀ ವಿಸ್ತೀರ್ಣದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ₹4.69 ಕೋಟಿ ಅನುದಾನ ಹಾಗೂ ಚಿಕ್ಕಗ್ರಹಾರ ವಲಯ ಅರಣ್ಯ ವ್ಯಾಪ್ತಿಯ ಬೆಳ್ಳಂಗಿಯಿಂದ ಕೊಳ್ಳೇಹಳ್ಳ ಪ್ರದೇಶದವರೆಗೆ ಒಟ್ಟು 2.33 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ₹3.76 ಕೋಟಿ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ.

ADVERTISEMENT

‘ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆ ಮಾನವ ಸಂಘರ್ಷ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಪ್ರಸ್ತಾವನೆಗೆ ಸರ್ಕಾರ ಮಂಗಳವಾರ ಅನುಮೋದನೆ ನೀಡಿ 7.71 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ₹12.77 ಕೋಟಿ ಅನುದಾನ ಬಿಡುಗಡೆ ಮಾಡಿದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

7.71 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ 30–40 ಕಾಡಾನೆಗಳು ಭದ್ರಾನದಿ ಮತ್ತು ಭದ್ರಾ ಹಿನ್ನೀರು ದಾಟಿ ಬಂದಿರುವ ಕಾಡಾನೆಗಳು