
ಬೆಳ್ಳೂರು (ನರಸಿಂಹರಾಜಪುರ): ಕನ್ನಡ ನಾಡು ಹುಟ್ಟಿದ್ದು ಭಾಷೆಯ ಆಧಾರದ ಮೇಲೆ. ಕನ್ನಡ ಭಾಷೆ ಉಳಿಯದಿದ್ದರೆ ನಾಡು ಉಳಿಯಲು ಸಾಧ್ಯವಾಗುವುದಿಲ್ಲ ಎಂದು ಕನ್ನಡ ಗಮಕ ಪ್ರವಚನಕಾರ ಕಾರ್ಕಳದ ಮುನಿರಾಜ ರೆಂಜಾಳ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ಶನಿವಾರ ಆರಂಭವಾದ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡ ನಾಡಿನ ಶ್ರೀಮಂತಿಕೆ, ಶ್ರೇಷ್ಠತೆ ಉಳಿಯಲು ಭಾಷೆ ಉಳಿಸಿ ಭಾಷೆ ಬೆಳೆಸಬೇಕು. ಕನ್ನಡಿಗರು ಎಂಬ ಭಾವನೆ ಇಟ್ಟುಕೊಂಡು ಎಲ್ಲ ಕಡೆ ಕನ್ನಡ ಮಾತನಾಡಿದರೆ ಕನ್ನಡ ಭಾಷೆ ಉಳಿಯುತ್ತದೆ. ಭಾಷೆ ಎಂಬುದು ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಬದುಕಿಗೆ ಸಂಬಂಧಿಸಿದ್ದಾಗಿದೆ. ತಾಯಂದಿರು ಮಗುವಿಗೆ ಕನ್ನಡದಲ್ಲಿ ಜೋಗುಳ ಹಾಡಿ ಕನ್ನಡದಲ್ಲಿ ಕಥೆ ಹೇಳಿ. ಯಾವುದೇ ಮಾಧ್ಯಮ ಆಗಿರಲಿ ಶಾಲೆಯಲ್ಲಿ ಶಿಕ್ಷಕರು ಕನ್ನಡವನ್ನು ಪ್ರೀತಿಸಬೇಕು ಎಂದರು.
ಪ್ರತಿಯೊಬ್ಬರು ಕರ್ನಾಟಕದ ಏಕೀಕರಣ ಚಳವಳಿಯ ಇತಿಹಾಸ ಓದಬೇಕು. ಭೂಮಂಡಲದಲ್ಲಿ ಕನ್ನಡ ನಾಡು ವಿಶೇಷವಾಗಿದೆ. ಶ್ರೀಮಂತವಾದ ಹಲವು ಜಾನಪದ ಕಲಾ ಪ್ರಕಾರದಿಂದ ಜನಪದ ಶ್ರೀಮಂತಿಕೆ ನಾಡಿನಲ್ಲಿದೆ ಎಂದರು.
ಸಮ್ಮೇಳನಾಧ್ಯಕ್ಷ ಪಿ.ದಯಾನಂದ ಮಾತನಾಡಿ, ಕನ್ನಡದ ಗಟ್ಟಿ ಬೇರುಗಳು ನಮ್ಮ ರಾಜ್ಯದ ಬೆನ್ನೆಲುಬಾಗಿರುವ ಹಳ್ಳಿಗಾಡಿನಲ್ಲಿ ಅಳವಾಗಿ ಹೊತು ಹೋಗಿವೆ. ಕನ್ನಡ ಸಾಹಿತ್ಯಕ್ಕೆ ಹಲವು ಮೈಲಿಗಲ್ಲುಗಳಿವೆ. ಸಾವಿರಾರು ಕವಿಗಳು ಕನ್ನಡ ಸಾಹಿತ್ಯದ ಭವ್ಯಗೋಪುರವನ್ನು ನಿರ್ಮಿಸಿಹೋಗಿದ್ದಾರೆ. ಹಿರಿಯ ವಿದ್ಯಾರ್ಥಿಗಳು ತಾವು ಓದಿದ ಸರ್ಕಾರಿ ಕನ್ನಡ ಶಾಲೆಗಳನ್ನು ದತ್ತು ತೆಗೆದುಕೊಂಡು ಮೂಲ ಸೌಕರ್ಯ ಒದಗಿಸಿ ದಾಖಲಾತಿ ಹೆಚ್ಚಿಸುವ ಕಾರ್ಯ ಮಾಡಬೇಕು ಎಂದರು.
ಮಲೆನಾಡು ಭಾಗದಲ್ಲಿ ಅಡಿಕೆಗೆ ತಗುಲಿರುವ ಹಳದಿ ಎಲೆ ರೋಗ, ಎಲೆಚುಕ್ಕಿ ರೋಗ ರೈತರು ಉಣ್ಣುವ ತಟ್ಟೆಯನ್ನು ಬರಿದು ಮಾಡಿವೆ. ಒತ್ತುವರಿ ಸಮಸ್ಯೆ, ಕಾರ್ಮಿಕ ಸಮಸ್ಯೆ, ಬಫರ್ ಜೋನ್ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಒದಗಿಸಬೇಕಾಗಿದೆ ಎಂದರು.
ಪುಸ್ತಕಮಳಿಗೆ ಉದ್ಘಾಟಿಸಿದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿದರು.
ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯನ್ನು ಅಮ್ಮ ಫೌಂಡೇಷನ್ ಸಂಸ್ಥಾಪಕ ಸುಧಾಕರ್ ಶೆಟ್ಟಿ ಉದ್ಘಾಟಿಸಿದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಪುಸ್ತಕ ಬಿಡುಗಡೆ ಮಾಡಿದರು.
9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಅನಂತಪದ್ಮನಾಭ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್, ಸಮ್ಮೇಳನದ ವಿವಿಧ ಸಮಿತಿಯ ವೆಂಕಟರಣಯ್ಯ, ಎಚ್.ದಿವಾಕರ್, ಮೋಹನ್ ಬೆಮ್ಮನೆ, ಪ್ರಶಾಂತ್ ಶೆಟ್ಟಿ, ಎನ್. ಪಿ.ರವಿ., ಎನ್.ಪಿ.ರಮೇಶ್, ಸುರೇಖಾ ದಯಾನಂದ್, ಎ.ಇ.ಅಶೋಕ್, ಶ್ರೀನಿವಾಸ್ ಹಿರೇನಲ್ಲೂರು, ಮಹೇಶ್ ಶೆಟ್ಟಿಕೊಪ್ಪ, ಸುಷ್ಮಾ, ನೀತಿ, ರಾಘವೇಂದ್ರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
‘ಕನ್ನಡ ಅಭಿಮಾನ ಮುಖ್ಯ’
ಪ್ರಸ್ತುತ ಕನ್ನಡ ಶಾಲೆಗಳು ಮುಚ್ಚುತ್ತಿವೆ. ಇಂಗ್ಲಿಷ್ ಮಾಧ್ಯಮಗಳಿಂದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ ಎಂಬ ಆರೋಪವಿದೆ. ಇದು ಸಣ್ಣಕಾರಣ. ಕನ್ನಡ ಶಾಲೆಗಳಲ್ಲಿ ಬೇರೆ ಸಮಸ್ಯೆಗಳಿವೆ. ಕನ್ನಡ ಶಾಲೆ ಮುಚ್ಚಲು ಕನ್ನಡದ ಮೇಲಿನ ಅಭಿಮಾನದ ಕೊರತೆಯಿದೆ. ಮಾಧ್ಯಮದಿಂದ ಮುಚ್ಚಿದೆ ಎನ್ನುವುದು ಕಾರಣವಲ್ಲ. ಶಿಕ್ಷಣದಲ್ಲಿ ಮಾಧ್ಯಮ ಯಾವುದಾದರೂ ಕನ್ನಡದ ಅಭಿಮಾನ ಬೆಳೆಸುವ ಕಾರ್ಯ ಮಾಡಿದರೆ ಕನ್ನಡ ಶಾಲೆ ಮುಚ್ಚುವುದಿಲ್ಲ ಎಂದು ಮುನಿರಾಜ ರೆಂಜಾಳ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.