ಚಿಕ್ಕಮಗಳೂರು: ‘ಮೂಡಿಗೆರೆ–ಮೂಗ್ತಿಹಳ್ಳಿ(ಚಿಕ್ಕಮಗಳೂರು) ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯನ್ನು ಜುಲೈ ಅಂತ್ಯದ ವೇಳೆಗೆ ಆರಂಭಿಸಬೇಕು. ಅದಕ್ಕೂ ಮುನ್ನ ಬಾಕಿ ಇರುವ ಎಲ್ಲಾ ಪತ್ರ ವ್ಯವಹಾರ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಪತ್ರ ವ್ಯವಹಾರ ಸಂಬಂಧ ಬೆಂಗಳೂರು, ದೆಹಲಿ ಸೇರಿ ಪ್ರತಿ ಹಂತದಲ್ಲಿ ಕಡತಗಳನ್ನು ಬೆನ್ನತ್ತಬೇಕು. ಸಮಸ್ಯೆ ಎದುರಾದರೂ ಇದ್ದರೆ ನನಗೆ ತಿಳಿಸಿದರೆ ಬಗೆಹರಿಸುತ್ತೇನೆ’ ಎಂದು ತಿಳಿಸಿದರು.
ಮೂಡಿಗೆರೆ– ಮೂಗ್ತಿಹಳ್ಳಿ ಹೆದ್ದಾರಿ ಯೋಜನೆ ಭೂಸ್ವಾಧೀನ ಪ್ರಕ್ರಿಯೆಗ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದೂವರೆ ತಿಂಗಳಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಹೇಳಿದರು.
ಚಿಕ್ಕಮಗಳೂರು-ಕಡೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಮಿ ಕಳೆದುಕೊಂಡಿರುವ ಕೆಲ ರೈತರಿಗೆ ಇನ್ನು ಪರಿಹಾರ ಸಿಕ್ಕಿಲ್ಲ ಎಂಬ ಆರೋಪ ಇದೆ. ಈ ಬಗ್ಗೆ ಗಮನಹರಿಸಿ ಅವರಿಗೆ ಪರಿಹಾರ ಕೊಡಿಸಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಜಯಣ್ಣ ಮಾತನಾಡಿ, ‘ಮೂಗ್ತಿಹಳ್ಳಿ-ಮೂಡಿಗೆರೆ ಹೆದ್ದಾರಿ ಕಾಮಗಾರಿ ಸಂಬಂಧ ಜೂ.30ರೊಳಗೆ 3ಡಿ ಅವಾರ್ಡ್ ಪೂರ್ಣಗೊಳಿಸಲಾಗುವುದು. ಎರಡನೇ ಹಂತದ 4 ಹೆಕ್ಟೇರ್ ಸ್ವಾಧೀನ ಸಂಬಂಧ ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಮುಗಿದಿದೆ. 3ಡಿ ಮಂಜೂರಾತಿ ಮಾತ್ರ ಬಾಕಿ ಇದೆ. ಜುಲೈ ಅಂತ್ಯದೊಳೆಗೆ ಎಲ್ಲಾ ಪ್ರಕ್ರಿಯೆ ಪೂರ್ಣವಾಗಲಿದೆ’ ಎಂದು ಮಾಹಿತಿ ನೀಡಿದರು.
ಬೇಲೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಒಂದು ವಾರದಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ. ಆ ನಂತರ ಎಲ್ಲಾ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ ಎಂದರು.
ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಮಾತನಾಡಿ, ‘ಮೂಗ್ತಿಹಳ್ಳಿ-ಮೂಡಿಗೆರೆ ರಸ್ತೆ ಅಗಲೀಕರಣ ಸಂಬಂಧ 3ಡಿ ಅಧಿಸೂಚನೆ ಹೊರ ಬಿದ್ದ ಮರು ದಿನದಿಂದಲೇ ಗ್ರಾಮವಾರು ನೋಟಿಸ್ ನೀಡುವ ಕಾರ್ಯ ಆರಂಭಿಸಲಾಗುವುದು’ ಎಂದು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಕಾರಿ ನಾರಾಯಣ ಕನಕರಡ್ಡಿ, ಉಪ ಅರಣ್ಯ ಸಂರಕ್ಷಣಾಕಾರಿ ರಮೇಶ್ ಬಾಬು, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ಬಿಜೆಪಿ ಮುಖಂಡ ಎಚ್.ಸಿ. ಕಲ್ಮರುಡಪ್ಪ ಭಾಗವಹಿಸಿದ್ದರು.
ವಿಮಾನ ನಿಲ್ದಾಣಕ್ಕೆ ತೊಂದರೆ ಆಗದಂತೆ ಎಚ್ಚರ
ಚಿಕ್ಕಮಗಳೂರು ನಗರದ ಹೊರ ವಲಯದಲ್ಲಿ ಮೂಗ್ತಿಹಳ್ಳಿ– ಕರ್ತೀಕೆರೆ–ಕುರುವಂಗಿ–ದೇವರಹಳ್ಳಿ ಬೈಪಾಸ್ ರಸ್ತೆಗೆ ಈಗಾಗಲೇ ಸಿದ್ಧಪಡಿಸಿರುವ ಅಲೈನ್‌ಮೆಂಟ್‌ನಿಂದ ಕಿರು ವಿಮಾನ ನಿಲ್ದಾಣಕ್ಕೆ ತೊಂದರೆ ಆಗಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು. ಕಿರು ವಿಮಾನ ನಿಲ್ದಾಣಕ್ಕೆ ಮೀಸಲಿರಿಸಿರುವ ಜಾಗದ ಮಧ್ಯಭಾಗದಲ್ಲಿ ರಸ್ತೆ ಹಾದು ಹೋಗುವುದಾದರೆ ಅಲೈನ್‌ಮೆಂಟ್ ಬದಲಾವಣೆ ಮಾಡಬೇಕು. ಇಲ್ಲದಿದ್ದರೆ ಅದೇ ಅಲೈನ್‌ಮೆಂಟ್ ಮುಂದುವರಿಯಲಿ ಎಂದು ತಿಳಿಸಿದರು. ‘ಬೇಲೂರು ರಸ್ತೆಯ ಕರ್ತೀಕೆರೆಯಿಂದ ಆರಂಭವಾಗಿ ಕಿರು ವಿಮಾನ ನಿಲ್ದಾಣಕ್ಕೆ ಮೀಸಲಿರುವ ಜಾಗದ ಪಕ್ಕಕ್ಕೆ ಹೊಂದಿಕೊಂಡಂತೆ ರಸ್ತೆ ಹಾದು ಹೋಗಲಿದೆ. ಕಿರು ವಿಮಾನ ನಿಲ್ದಾಣಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಈ ಅಲೈನ್‌ಮೆಂಟ್‌ಗೆ ಅನುಮೋದನೆ ದೊರೆತಿದೆ. ಮತ್ತೊಮ್ಮೆ ಬದಲಾವಣೆ ಮಾಡಲು ಹೊರಟರೆ ವಿಳಂಬವಾಗಲಿದೆ’ ಎಂದು ಹೆದ್ದಾರಿ ಎಂಜಿನಿಯರ್ ಜಯಣ್ಣ ಮಾಹಿತಿ ನೀಡಿದರು. ಕಿರು ವಿಮಾನ ನಿಲ್ದಾಣಕ್ಕೆ ಯಾವುದೇ ತೊಂದರೆಯಾಗಬಾರದು. ಮೀಸಲಿಟ್ಟಿರುವ ಜಾಗದಲ್ಲಿ ಒಂದು ಗುಂಟೆ ಜಾಗವೂ ರಸ್ತೆಗೆ ಸಿಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.