ಚಿಕ್ಕಮಗಳೂರು: ನವರಾತ್ರಿ ಆಚರಣೆ ಜಿಲ್ಲೆಯಲ್ಲಿ ವಿಭಿನ್ನವಾಗಿ ನಡೆಯುತ್ತಿದೆ. ಒಂದೊಂದು ಪ್ರದೇಶದಲ್ಲೂ ಒಂದೊಂದು ರೀತಿಯ ಆಚರಣೆಗಳಿವೆ.
ದಸರಾ ಬೊಂಬೆಗಳನ್ನು ಮನೆ ಮನೆಗಳಲ್ಲಿ ಇಟ್ಟು ಪೂಜಿಸುವ ಜತೆಗೆ ಚಿಕ್ಕಮಗಳೂರು ನಗರದ ರಂಗಣ್ಣನವರ ಛತ್ರದಲ್ಲಿ ಸಾಮೂಹಿಕವಾಗಿ ಬೊಂಬೆಗಳನ್ನು ಜೋಡಿಸಿ ಸಂಸ್ಕೃತಿ ಉಳಿಸುವ ಪ್ರಯತ್ನ ಮಾಡಲಾಗಿದೆ.
ಅಂಜನಾದ್ರಿ ಬೊಂಬೆಮನೆ, ಸಿರಿ ಬೊಂಬೆಮನೆ, ಅಂಡಾಳ್ ಬೊಂಬೆ ಮನೆ ಹಾಗೂ ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಬೊಂಬೆ ಪ್ರದರ್ಶನ ನಡೆಯುತ್ತಿದೆ. ಸದ್ಯಕ್ಕೆ ಜನಾಕರ್ಷಣೆಯ ಕೇಂದ್ರವಾಗಿದೆ. ತರಹೇವಾರಿ ಅಲಂಕಾರಿಕ ಬೊಂಬೆಗಳು ಕಣ್ಮನ ಸೆಳೆಯುತ್ತಿವೆ.
ಪುರಾಣ, ಐತಿಹಾಸಿಕ ಜನಜೀವನದಿಂದ ಆರಂಭವಾಗಿ ಈಗಿನ ಉಪಗ್ರಹಗಳ ಉಡಾವಣೆ ತನಕ ಗೊಂಬೆಗಳು ಕೂಡ ಇಲ್ಲಿವೆ. ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ, ದಸರಾ ವೈಭವ, ರಾಜ ಮನೆತನ, ನೃತ್ಯ ವೈಭವ, ದಶಾವತಾರ, ನವದುರ್ಗಿಯರು, ಅಷ್ಟ ಲಕ್ಷ್ಮಿಯರು, ಕೃಷ್ಣಲೀಲೆ, ರಾಮಾಯಣ ಕಥಾಸಾರ, ಬುಡಕಟ್ಟು ಸಂಸ್ಕೃತಿ, ವೈವಿದ್ಯಮಯ ಗಣೇಶ, ದೇವಾನುದೇವತೆಗಳು, ಪುರಾಣದಲ್ಲಿದ್ದ ಗುರು ಪರಂಪರೆ, ಸಂಗೀತೋತ್ಸವ, ಹಿತ್ತಾಳೆ, ಮರದ ಪಾತ್ರೆಗಳು, ರಾಜಾಸ್ತಾನಿ, ಚನ್ನಪಟ್ಟಣದ ಬೊಂಬೆಗಳು, ಸಂಗೀತ ವಾದ್ಯಗಳು, ಬಾರ್ಬಿ ಉತ್ಸವ, ಬಂಡಿ ಬಾಗಿಣ, ಕೃಷಿ ಸಂಪತ್ತು, ಗ್ರಾಮೀಣ ಸೊಗಡು, ಕುಲಕಸುಬುಗಳು, ಪಿಂಗಾಣಿ ವಸ್ತುಗಳು,ರಾವಣ ದರ್ಭಾರ್, ಚಂದ್ರಯಾನ 54 ವಿಧದ ಬೊಂಬೆಗಳನ್ನು ಜೋಡಿಸಲಾಗಿದೆ.
ಸಾವಿರಾರು ಬೊಂಬೆಗಳು ಇರುವುದರಿಂದ ವೀಕ್ಷಿಸಲು ಕನಿಷ್ಠ 1 ಗಂಟೆ ಬೇಕಾಗಲಿದೆ. ನಾಗರಿಕರ ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ತಂಡೋಪ ತಂಡವಾಗಿ ಬಂದು ಬೊಂಬೆ ಪ್ರದರ್ಶನ ವೀಕ್ಷಿಸುತ್ತಿದ್ದಾರೆ.
ಸಂಪ್ರದಾಯಸ್ಥ ಮನೆಗಳಲ್ಲಿ ದಸರಾ ಬೊಂಬೆಗಳನ್ನು ಜೋಡಿಸಿ ಪೂಜಿಸುವ ಸಂಸ್ಕೃತಿ ಇತ್ತು. ಇತ್ತೀಚೆಗೆ ಅದು ಕೆಲವರ ಮನೆಗ ಸೀಮಿತವಾಗಿದೆ. ದಸರ ಬೊಂಬೆ ಸಂಸ್ಕೃತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ವರ್ಷ ಮೊದಲ ಬಾರಿಗೆ ಈ ಸಾಮೂಹಿಕ ಬೊಂಬೆ ಪ್ರದರ್ಶನ ಏರ್ಪಡಿಸಲಾಗಿದೆ. ಮುಂದೆ ಪ್ರತಿವರ್ಷ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಜೋಷಿ ಹೇಳಿದರು.
ಪೂರಕ ಮಾಹಿತಿ: ಎನ್.ಸೋಮಶೇಖರ್, ಕೆ.ನಾಗರಾಜ್, ಕೆ.ವಿ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಕೆ.ಎನ್.ರಾಘವೇಂದ್ರ
ಕುಸ್ತಿ ಪಂದ್ಯ: ದಸರಾ ಆಕರ್ಷಣೆ ತರೀಕೆರೆ: ದಸರಾ ಹಬ್ಬದ ವಿಜಯ ದಶಮಿಯ ಮಾರನೇ ದಿನ ನಡೆಯುವ ರಾಜ್ಯ ಮಟ್ಟದ ದಸರಾ ಬಯಲು ಜಂಗಿ ಕುಸ್ತಿ ಸ್ಪರ್ಧೆ ತರೀಕೆರೆಯ ನವರಾತ್ರಿಯ ವಿಶೇಷ. ಇದು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ತರೀಕೆರೆ ಪಾಳೇಗಾರರು ಮೈಸೂರು ದಸರಾ ಸಂದರ್ಭದಲ್ಲಿ ಸರ್ಜಾ ಹನುಮಪ್ಪ ನಾಯಕ ಪಾಲ್ಗೊಂಡಾಗ ಈ ಭಾಗದಲ್ಲೂ ಇಂತಹ ಗ್ರಾಮೀಣ ಕುಸ್ತಿ ಕ್ರೀಡೆಗಳನ್ನು ನಡೆಸಬೇಕು ಎಂದು ಆಲೋಚಿಸಿ ಆರಂಭಿಸಿದರು. ಅಂದು ಪ್ರಾರಂಭವಾದ ಈ ಗ್ರಾಮೀಣ ಕ್ರೀಡೆ ರಾಜ್ಯ ಮತ್ತು ದೇಶದ ಕುಸ್ತಿ ಕ್ಷೇತ್ರದಲ್ಲಿ ಹೆಸರು ಪಡೆದಿದೆ. ಸ್ವಾತಂತ್ರ್ಯ ನಂತರ ಪಟ್ಟಣದ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ಮತ್ತು ಗುರು ರೇವಣಸಿದ್ದೇಶ‍್ವರ ಗರಡಿ ಕುಸ್ತಿ ಸಂಘದ ಆಶ್ರಯದಲ್ಲಿ ಮುಂದುವರೆಸಲಾಗುತ್ತಿದೆ. ವಿಜಯದಶಮಿ ಮಾರನೆ ದಿನದಿಂದ ಮೂರು ದಿನಗಳ ಕಾಲ ನಡಯುವ ಕುಸ್ತಿ ಪಂದ್ಯಾವಳಿಗೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಕುಸ್ತಿ ಪಟುಗಳು ಭಾಗವಹಿಸುತ್ತಾರೆ. ಈ ಪಂದ್ಯಾವಳಿಗೆ ತಾಲ್ಲೂಕಿನ ಎಲ್ಲಾ ಸಮುದಾಯದವರು ತಾಮ್ರ ಸ್ಟೀಲ್ ಬೆಳ್ಳಿ ಚಿನ್ನ ಮತ್ತು ನಗದು ರೂಪದಲ್ಲಿ ಬಹುಮಾನಗಳನ್ನು ಕೊಡುಗೆಯಾಗಿ ನೀಡುತ್ತಾರೆ. ಪುರಸಭೆಯಿಂದ ಬೆಳ್ಳಿ ಗದೆ ನೀಡುವುದು ಕೂಡ ವಾಡಿಕೆ.
ಗಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮ ಕೊಪ್ಪ: ನವರಾತ್ರಿ ಆರಂಭದ ದಿನ ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ಫ್ರೆಂಡ್ಸ್ ಸರ್ಕಲ್ ಗೆಳೆಯರ ಬಳಗ ವತಿಯಿಂದ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಧಾರ್ಮಿಕ ಪೂಜೆ ಗಮನ ಸೆಳೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿನ ವಿಶೇಷ ಆಕರ್ಷಣೆ. ಅ.1 ರವರೆಗೆ ಧಾರ್ಮಿಕ ವಿವಿಧ ಪೂಜೆ ಸಾಮೂಹಿಕ ಸತ್ಯನಾರಾಯಣ ವ್ರತ ಬಾಗಿನ ಸೇವೆ ಹೋಮ ಇತ್ಯಾದಿಗಳು ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಸಾವಿರಾರು ಜನರಿಗೆ ಅನ್ನಸಂತರ್ಪಣೆ ನಡೆಸಲಾಗುತ್ತದೆ. ಸಂಜೆ ರಾಜ್ಯದ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವರಾತ್ರಿ ಅವಧಿಯಲ್ಲಿ ದೇವಿಗೆ ಪ್ರತಿದಿನ ಒಂದೊಂದು ಅಲಂಕಾರ ಮಾಡಲಾಗುತ್ತದೆ. ಆಯುಧ ಪೂಜೆ ದಿನ ದೇವಿಗೆ ಬಾಗಿನ ಸೇವೆ ರಾತ್ರಿ ರಂಗ ಪೂಜೆ ದೀಪೋತ್ಸವ ಸಿಡಿಮದ್ದು ಪ್ರದರ್ಶನ ಗಮನ ಸೆಳೆಯಲಿದೆ. ಅ.2ರಂದು ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಗುತ್ತದೆ.
ಕಾರಣಿಕ ಮಹೋತ್ಸವದ ಆಕರ್ಷಣೆ ಕಡೂರು: ಬೀರೂರು ಪಟ್ಟಣದಲ್ಲಿ ಶರನ್ನವರಾತ್ರಿ ಅಂಗವಾಗಿ ಆಚರಿಸುವ ಮೈಲಾರಲಿಂಗೇಶ್ವರ ಸ್ವಾಮಿ ಕಾರಣಿಕ ಮಹೋತ್ಸವ ಅತ್ಯಂತ ಪ್ರಸಿದ್ಧಿ ಪಡೆದಿದೆ. ಮೈಲಾರಲಿಂಗ ಸ್ವಾಮಿಯನ್ನು ನವರಾತ್ರಿಯ ಸಂದರ್ಭದಲ್ಲಿ ಪಟ್ಟಕ್ಕೆ ಕೂರಿಸಿದ ಬಳಿಕ ಅರ್ಚಕರು ವಿಶೇಷ ಅನುಷ್ಠಾನದಲ್ಲಿ ಇರುತ್ತಾರೆ. ಉಪವಾಸದಲ್ಲಿರುವ ಅರ್ಚಕರನ್ನು ವಿಜಯದಶಮಿ ರಾತ್ರಿ ಬನ್ನಿ ಮುಡಿಯಲು ಸರಸ್ವತಿ ಪುರದ ದೇವಾಲಯ ಆವರಣದಿಂದ ಹೊರಡುವ ಸ್ವಾಮಿಯು ಅರ್ಚಕರ ಮನೆಗೆ ತೆರಳಿ ಅವರನ್ನು ಕಾರಣಿಕ ನುಡಿಯಲು ಬರುವಂತೆ ಆಹ್ವಾನಿಸುತ್ತದೆ. ಅರ್ಚಕರನ್ನು ಕರೆತಂದು ಬಳಿಕ ಗೊರವರ ಗಂಟೆ ಮತ್ತು ಡಮರು ನಾದಗಳ ನಡುವೆ ಅಲಂಕೃತ ಹೂವಿನ ಪಲ್ಲಕ್ಕಿಯಲ್ಲಿ ಮೈಲಾರಲಿಂಗ ಸ್ವಾಮಿ ಅವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬೀರೂರು ಹೊರವಲಯದ ಗಾಳಿ ಹಳ್ಳಿಗೆ ಹೊಂದಿಕೊಂಡಂತೆ ಇರುವ ಪಾದಗಟ್ಟೆಗೆ ತೆರಳುತ್ತದೆ. ಅಲ್ಲಿ ಸ್ವಾಮಿಗೆ ನೂರೊಂದು ಎಡೆಯ ಸೇವೆಯ ಬಳಿಕ ಮತ್ತೆ ಮೆರವಣಿಗೆ ಹೊರಟು ಮಹಾನವಮಿ ಬಯಲಿನ ಕಡೆ ಬರುತ್ತದೆ. ವೀರಭದ್ರಸ್ವಾಮಿ ಮತ್ತು ಬೀರಲಿಂಗೇಶ್ವರಸ್ವಾಮಿ ಅವರ ಅನುಮತಿ ಪಡೆದು ಬೆಣ್ಣೆ ಮೆತ್ತಿದ ದೊಡ್ಡ ಬಿಲ್ಲಪ್ಪನನ್ನು ಏರುವ ಮೈಲಾರಲಿಂಗ ಸ್ವಾಮಿಯ ಅರ್ಚಕರು ಕಾರಣಿಕ ನುಡಿಯುತ್ತಾರೆ. ಈ ಕಾರಣಿಕ ನುಡಿಯು ವರ್ಷ ಭವಿಷ್ಯದ ಮುನ್ನುಡಿ ಎಂಬ ಪ್ರತೀತಿ ಇದೆ. ಬಳಿಕ ವೀರಭದ್ರ ಸ್ವಾಮಿಯ ಗುರಿಕಾರರು ಅಂಬು ಹೊಡೆಯುವ ಕಾರ್ಯಕ್ರಮ ನಡೆಯುತ್ತದೆ. ರಾಜ್ಯದ ವಿವಿಧ ಕಡೆಗಳಿಂದ ಸಾಕಷ್ಟು ಭಕ್ತರು ಈ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಅಂದೇ ಸಾರ್ವಜನಿಕ ಗಣಪತಿ ವಿಸರ್ಜನೆ ನಡೆಯಲಿದೆ.
ನವರಾತ್ರಿ ಸಂಭ್ರಮದಲ್ಲಿ ಆಧ್ಯಾತ್ಮಿಕತೆಗೆ ಆದ್ಯತೆ ಮೂಡಿಗೆರೆ: ತಾಲ್ಲೂಕಿನಲ್ಲಿ ಏಕಮಾತ್ರ ದುರ್ಗಾಮಾತೆ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಆಧ್ಯಾತ್ಮಿಕತೆಗೆ ಆದ್ಯತೆ ನೀಡಲಾಗುತ್ತಿದೆ. ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಎರಡು ದಶಕಗಳಿಗೂ ಅಧಿಕ ಕಾಲ ದುರ್ಗಾಮಾತೆ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಪ್ರತಿ ದಿನ ಸಂಜೆ ಭಕ್ತಿಪೂರ್ವಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಬಾರಿ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆ ಆಯೋಜಿಸಿದ್ದು ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡುತ್ತಿರುವುದು ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾಗಿದೆ. ಪ್ರತಿ ದಿನವೂ ಹೋಮ ಹವನಗಳನ್ನು ನಡೆಸಲಾಗುತ್ತದೆ. ದುರ್ಗಾಷ್ಟಮಿ ದಿನ ದುರ್ಗಾಹೋಮ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ವಿಜಯ ದಶಮಿಯಂದು ಲಯನ್ಸ್ ವೃತ್ತದಲ್ಲಿ ಅಸುರ ದಹನ ನಡೆಸುವುದು ಇಡೀ ಆಚರಣೆಯ ವಿಶೇಷತೆಯಾಗಿದ್ದು ಅದರ ವೀಕ್ಷಣೆಗಾಗಿ ಗ್ರಾಮೀಣ ಭಾಗದಿಂದಲೂ ಜನ ಸೇರುವುದು ವಿಶೇಷ.
ತೆಪ್ಪೋತ್ಸವ ಮೂಲಕ ಜಲಸ್ತಂಭನ ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಬಹಳ ಹಿಂದಿನಿಂದಲೂ ಶರನ್ನವರಾತ್ರಿ ಉತ್ಸವ ಆಚರಿಸಲಾಗುತ್ತಿದೆ. 27 ವರ್ಷಗಳ ಹಿಂದಿನಿಂದ ಶರನ್ನವರಾತ್ರಿ ಸೇವಾ ಸಮಿತಿ ರಚಿಸಿ ಸಮಿತಿಯ ಮೂಲಕ ದೇವಿ ಪ್ರತಿಷ್ಠಾಪಿಸಿ ಉತ್ಸವ ಆಚರಿಸಲಾಗುತ್ತಿದೆ. ಹಿಂದೆ ದಸರಾ ಸಂದರ್ಭದಲ್ಲಿ ಮಲ್ಲಗಂಬ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತಿತ್ತು. ಕಾಲ ಕ್ರಮೇಣ ಈ ಸ್ಪರ್ಧೆ ಆಯೋಜನೆ ನಿಂತಿದೆ. 2018ರಿಂದ ಶರನ್ನವರಾತ್ರಿ ಉತ್ಸವದ ಆಕರ್ಷಣೆಯಾಗಿ ವೈಭವದ ತೆಪ್ಪೋತ್ಸವ ಆಚರಿಸಲಾಗುತ್ತಿದೆ. ವಿಜಯದಶಮಿ ದಿನ ತಾಲ್ಲೂಕಿನ ಮೆಣಸೂರು ಗ್ರಾಮದ ಸಮೀಪವಿರುವ ಭದ್ರಾಹಿನ್ನೀರಿನ ತಟದಲ್ಲಿ ಸಂಗೀತ ಸಂಜೆ ಆಕರ್ಷಕ ಸಿಡಿಮದ್ದು ಪ್ರದರ್ಶನ ಆಯೋಜಿಸಿ ನಂತರ ತೆಪ್ಪೋತ್ಸವದ ಮೂಲ ದೇವಿಯ ವಿಗ್ರಹವನ್ನು ವಿಸರ್ಜಿಸಲಾಗುತ್ತಿದೆ. ಸುತ್ತಮುತ್ತಲಿನ ಹಳ್ಳಿಯ ಜನ ತೆಪ್ಪೋತ್ಸವ ವೀಕ್ಷಣೆಗೆ ಭಾಗವಹಿಸುವುದು ವಿಶೇಷ.
13 ದಿನಗಳ ವಿಜೃಂಭಣೆಯ ಉತ್ಸವ ಶೃಂಗೇರಿ: ಶೃಂಗೇರಿ ಶಾರದಾ ಪೀಠದ ಶರನ್ನವರಾತ್ರಿ ಮಹೋತ್ಸವವು 13 ದಿನಗಳ ಕಾಲ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಶರನ್ನವರಾತ್ರಿಯಲ್ಲಿ ಶಾರದೆಗೆ ಜಗತ್ಪ್ರಸೂತಿಕಾ ಅಲಂಕಾರ ಬ್ರಾಹ್ಮೀ ಅಲಂಕಾರ ಹಂಸವಾಹನಾಲಂಕಾರ ಮಾಹೇಶ್ವರೀ ಮಯೂರ ಅಲಂಕಾರ ವೈಷ್ಣವೀ ಅಲಂಕಾರ ಇಂದ್ರಾಣಿ ಅಲಂಕಾರ ಪುರಶ್ಚರಣಾರಂಭ ಮೋಹಿನಿ ಅಲಂಕಾರ ಸರಸ್ವತ್ಯಾವಾಹನೆ ವೀಣಾ ಶಾರದಾಲಂಕಾರ ರಾಜರಾಜೇಶ್ವರಿ ಅಲಂಕಾರ ಸಿಂಹವಾಹನಾಲಂಕಾರ ಗಜಲಕ್ಷ್ಮಿ ಅಲಂಕಾರ ಬೆಳಿಗ್ಗೆ ಲಕ್ಷ್ಮೀನಾರಾಯಣ ಹೃದಯಹೋಮ ರಾಮಪಟ್ಟಾಭಿಷೇಕ ಸರ್ಗ ಪಾರಾಯಣಿ ಸಂಜೆ ವಿಜಯೋತ್ಸವ ಶಮೀಪೂಜೆ ಕೊನೆಯ ದಿನ ಗಜಲಕ್ಷ್ಮೀ ಅಲಂಕಾರ ಮಾಡಲಾಗುತ್ತದೆ. ಶಾರದಾಂಬಾ ಮಹಾರಥೋತ್ಸವ ಮತ್ತು ಉಭಯ ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ. ಪ್ರತಿ ದಿನ ವಿಧುಶೇಖರಭಾರತೀ ಸ್ವಾಮೀಜಿ ದರ್ಬಾರು ನಡೆಯುತ್ತದೆ. ನವರಾತ್ರಿ ಅಂಗವಾಗಿ ಸಂಜೆ 6 ಗಂಟೆಗೆ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ತಾಲ್ಲೂಕಿನ ಒಂಬತ್ತು ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿಗಳಿಂದ ಭಜನಾ ತಂಡಗಳಿಂದ ಭಜನೆ ವಿವಿಧ ಸಂಘ ಸಂಸ್ಥೆಗಳಿ ಬೀದಿ ಉತ್ಸವ ನಡೆಯುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.