
ತರೀಕೆರೆ: ತಾಲ್ಲೂಕಿನ ಹಾದುಹೋಗುತ್ತಿರುವ ರಾಷ್ಟ್ರೀಯ ಹೆದ್ದಾರಿ 206ರ ಕಾಮಗಾರಿಯಲ್ಲಿ ನಡೆಯುವ ಸ್ಥಳಗಳಲ್ಲಿ ಎದುರಾಗಿರುವ ಹಲವು ಸಮಸ್ಯೆಗಳನ್ನು ಸಾರ್ವಜನಿಕರು ನಮ್ಮ ಗಮನಕ್ಕೆ ತಂದಿದ್ದು, ಈ ಸಮಸ್ಯೆಗಳನ್ನು ಮೂರು ತಿಂಗಳ ಒಳಗೆ ಬಗೆಹರಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಸಂತ್ರಸ್ತರಿಂದ ಅಹವಾಲುಗಳನ್ನು ಸ್ವೀಕರಿಸಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಬೀರೂದಿನ ಪುಂಡನಹಳ್ಳಿ ಸಮೀಪ ನಿರ್ಮಿಸುತ್ತಿರುವ 7ಮೀ., ಗಾಳಿಹಳ್ಳಿ ಮತ್ತು ಬೇಲೇನಹಳ್ಳಿ ಬಳಿ ನಿರ್ಮಾಣವಾಗುತ್ತರುತ್ತಿರುವ ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಬೇಗ ಕಾಮಗಾರಿ ಮುಗಿಸಲು ಆಯಾ ಗ್ರಾಮಸ್ಥರು ಸಂಸದರಿಗೆ ಮನವಿ ಮಾಡಿದರು.
ಹಳಿಯೂರು ಗ್ರಾಮದ ಸರ್ವೇ ನಂ.28/15 ರಲ್ಲಿ ಹಾದು ಹೋಗುತ್ತಿರುವ ಎನ್.ಎಚ್. 206 ಬೈಪಾನ್ ಜಾಗದಲ್ಲಿ ಶ್ರೀಗಂಧದ ಮರಗಳು ಇರುವುದರಿಂದ ಅಲ್ಲಿನ ರೈತರಿಗೆ ಪರಿಹಾರ ನೀಡುವಲ್ಲಿ ಅನ್ಯಾಯ ಆಗಿರುವುದನ್ನು ಪ್ರಶ‍್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರೂ, ಅಧಿಕಾರಿಗಳು ಕಾಮಗಾರಿ ನಿರ್ವಹಿಸಲು ಅಲ್ಲಿನ ಮರಗಳನ್ನು ತೆರವಿಗೆ ಮುಂದಾಗಿದ್ದಾರೆ ಎಂದು ನೊಂದ ರೈತರ ಪರವಾಗಿ ಟಿ.ಎನ್.ವಿಶುಕುಮಾರ್ ಸಂಸದರ ಗಮನ ಸೆಳೆದರು.
ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯದ ತೀರ್ಪಿಗೆ ಎಲ್ಲರು ಬದ್ಧರಾಗಿರಬೇಕು. ಆದ್ದರಿಂದ ಅಧಿಕಾರಿಗಳು ನ್ಯಾಯಾಲಯದ ಪ್ರಕರಣವನ್ನು ಪರಿಶೀಲಿಸಿ ಯಾರಿಗೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಸೂಚಿಸಿದರು.
ಅತ್ತಿಗನಾಳು, ದಳವಾಯಿಕೆರೆ, ಇಂದಾವರ ಭಾಗಗಳಲ್ಲಿ ನಿರ್ಮಿಸಿರುವ ಸರ್ವೀಸ್ ರಸ್ತೆಯಲ್ಲಿ ಮಳೆ ಬಂದಾಗ ಆಳೇತ್ತರ ನೀರು ನಿಲ್ಲುವಂತೆ ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಕಾಮಗಾರಿ ಪರಿಶೀಲಿಸಿ ಮೂರು ತಿಂಗಳೊಳಗೆ ಸರಿಪಡಿಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.
ತರೀಕೆರೆ ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ₹ 4.5 ಕೋಟಿ ಅನುದಾನ ಲೋಕೋಪಯೋಗಿ ಇಲಾಖೆಗೆ ಬಂದಿದೆ. ಕಾಮಗಾರಿ ನಡೆಯುತ್ತಿರುವುದನ್ನು ಅಧಿಕಾರಿಗಳು ಸಂಸದರ ಗಮನಕ್ಕೆ ಯಾಕೆ ತಂದಿಲ್ಲ ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಪ್ರಶ್ನಿಸಿದರು.
ಈ ಕಾಮಗಾರಿಗೆ ಕಳಪೆ ಗುಣಮಟ್ಟದ ಕಬ್ಬಿಣ, ಜಲ್ಲಿ, ಸಿಮೆಂಟ್ ಸಾಮಗ್ರಿಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಾಲ್ಕು ಜನ ಗುತ್ತಿಗೆದಾರರಿಗೆ ತುಂಡು ಗುತ್ತಿಗೆಯನ್ನು ನೀಡಿದ್ದು, ಒಬ್ಬರಿಗೊಬ್ಬರು ಸಮನ್ವಯತೆ ಇಲ್ಲದ ಕಾರಣ ಕಾಮಗಾರಿ ಕುಂಠಿತವಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್ ಹೇಳಿದರು.
ಈ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ನೂರಾರು ಜನ ಬೀದಿ ಬದಿ ಮತ್ತು ಅಂಗಡಿ ವ್ಯಾಪಾರ ಸ್ಥಗಿತವಾಗಿ, ವ್ಯಾಪಾರಸ್ಥರು ಬೀದಿ ಪಾಲಾಗಿದ್ದಾರೆ. 30ಕ್ಕೂ ಹೆಚ್ಚು ದಿನ ಮೆಸ್ಕಾಂ ವಿದ್ಯುತ್ ನಿಲುಗಡೆ ಮಾಡಿದೆ. ಆದರೂ ಇನ್ನೂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿಲ್ಲ ಎಂದು ಪುರಸಭಾ ಸದಸ್ಯ ಟಿ.ಎಂ. ಬೋಜರಾಜ್ ಆರೋಪಿಸಿದರು.
ಈ ಅಸಮರ್ಪಕ ಕಾಮಗಾರಿಯಿಂದ ಅಪಘಾತಗಳು ಸಂಭವಿಸಿ ಆರು ಜನ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ಸಮಸ್ಯೆಗಳನ್ನು ಆಲಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಹದಿನೈದು ದಿನಗಳ ಒಳಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳ ಸಭೆಯನ್ನು ಕರೆದು, ಆ ಸಭೆಯಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತುಮಕೂರು ವಿಭಾಗದ ಯೋಜನಾ ನಿರ್ದೇಶಕಿ ಅನೂಪ್ ಶರ್ಮಾ, ವಿಶೇಷ ಭೂಸ್ವಾಧೀನಾಧಿಕಾರಿ ಸಿದ್ದಲಿಂಗರೆಡ್ಡಿ, ಮುಖಂಡರಾದ ಕೆ.ಆರ್.ಆನಂದಪ್ಪ, ಗರಗದಹಳ್ಳಿ ಪ್ರತಾಪ್, ರೇಣುಕಪ್ಪ, ವೆಂಕಟೇಶ್, ಪರಮೇಶಪ್ಪ ಶ್ರೇಯಸ್ ಮೊದಲಾದವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.