ADVERTISEMENT

ಮೋದಿ ವಿರುದ್ಧದ ಟೀಕಾಸ್ತ್ರ ವಿರೋಧಿಗಳಿಗೆ ತಿರುಗುಬಾಣ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 24 ಮೇ 2019, 15:06 IST
Last Updated 24 ಮೇ 2019, 15:06 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಈ ಚುನಾವಣೆಯಲ್ಲಿ ವಿರೋಧಿಗಳು ಮೋದಿ ವಿರುದ್ಧ ಪ್ರಯೋಗಿಸಿದ ಟೀಕಾಸ್ತ್ರಗಳು ಅವರಿಗೇ ತಿರುಗುಬಾಣವಾದವು. ಮತದಾರರು ವಿರೋಧಿಗಳ ಮಾತಿಗೆ ಮಣೆ ಹಾಕಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಇಲ್ಲಿ ಶುಕ್ರವಾರ ವಿಶ್ಲೇಷಿಸಿದರು.

‘ವಿರೋಧಿಗಳು ಮೋದಿ ಅವರನ್ನು ಗುರಿಯಾಗಿಸಿ ಆಡಿದ ಸಣ್ಣತನದ ಮಾತುಗಳು, ಸೈನಿಕರ ಸರ್ಜಿಕಲ್‌ ದಾಳಿ ಬಗ್ಗೆಯೇ ಸಂಶಯಪಟ್ಟು ಸಾಕ್ಷಿ ಕೇಳಿದ್ದು, ’ಚೌಕಿದಾರ್‌ ಚೋರ್‌ ಹೇ’ ಎಂದು ಆರೋಪ ಮಾಡಿದ್ದು , ಜಿಎಸ್‌ಟಿ ಜರಿದದ್ದು, ನೋಟು ಅಮಾನ್ಯೀಕರಣದಲ್ಲಿ ತಪ್ಪು ಕಂಡುಹಿಡಿಯುವ ಪ್ರಯತ್ನ ಮಾಡಿದ್ದು ಇವೆಲ್ಲವೂ ವಿಪಕ್ಷಗಳಿಗೆ ತಿರುಗು ಬಾಣವಾಯಿತು. ಮಹಾಘಟ ಬಂಧನ್‌ ಯಶಸ್ವಿಯಾಗಲಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಚಾಟಿ ಬೀಸಿದರು.

ರಾಜಕೀಯ ವಿರೋಧಿಗಳು ಅಸಹಿಷ್ಣುತೆ ಪುಕಾರು ಎಬ್ಬಿಸಿ ಪ್ರಶಸ್ತಿ ವಾಪಸ್‌ ನೀಡುವ ನಾಟಕವಾಡಿದರು. ಮೋದಿ ಸರ್ಕಾರ ದಲಿತರು, ಅಲ್ಪಸಂಖ್ಯಾತ ವಿರೋಧಿ ಎಂಬ ಹಣೆಪಟ್ಟಿ ಕಟ್ಟುವ ಪ್ರಯತ್ನ ಮಾಡಿದರು. ಸಂವಿಧಾನ ಬದಲಾಯಿಸುತ್ತಾರೆ ಎಂಬ ಪುಕಾರು ಹಬ್ಬಿಸಿದರು. ಮೋದಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದರೆ ಪ್ರಜಾಪ್ರಭುತ್ವ ಇರಲ್ಲ, ಮುಂದೆ ಚುನಾವಣೆ ನಡೆಯಲ್ಲ ಎಂದು ಭಯ ಬಿತ್ತು ಪ್ರಯತ್ನ ಮಾಡಿದರು. ಅವರ ಅಸ್ತ್ರಗಳು ಫಲ ನೀಡಿಲ್ಲ ಎಂದು ಕುಟುಕಿದರು.

ADVERTISEMENT

ಮೋದಿ ಸರ್ಕಾರದ ಐದು ವರ್ಷದ ಸಾಧನೆ, ಮೋದಿ ನಾಯಕತ್ವ, ‘ದೇಶ ಮೊದಲು’ ಎಂಬ ಬಿಜೆಪಿ ಸಿದ್ಧಾಂತ, ಅಮಿತ್‌ ಶಾ ಅವರ ಸಂಘಟನಾ ಕೌಶಲದಿಂದ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಯಿತು. ಧನಾತ್ಮಕ ಅಂಶಗಳನ್ನು ಗುರುತಿಸಿ ಮತ ಹಾಕಿದ್ದಾರೆ. ಕೌಟುಂಬಿಕ ವಿಸ್ತರಣೆ, ಪ್ರಾದೇಶಿಕ ಉನ್ಮಾದ, ಜಾತಿ, ಓಲೈಕೆ ರಾಜಕಾರಣವನ್ನು ಮತದಾರರು ತಿರಸ್ಕರಿಸಿದ್ದಾರೆ ಎಂದರು.

ಬಿಜೆಪಿ ಮುಖಂಡರಾದ ಎಚ್‌.ಡಿ.ತಮ್ಮಯ್ಯ, ವರಿಸಿದ್ಧಿ ವೇಣುಗೋಪಾಲ್‌, ಪುಷ್ಪರಾಜ್‌, ಕೋಟೆ ರಂಗನಾಥ್‌, ಬಿ.ಜಿ.ಸೋಮಶೇಖರಪ್ಪ ಇದ್ದರು.

ನೈತಿಕೆ ಸಿ.ಎಂ ರಾಜೀನಾಮೆಗೆ ಒತ್ತಾಯ

‘ಸೋಲಿನ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ರಾಜೀನಾಮೆ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು . ಎಚ್‌ಡಿಕೆ ಅವರು ಪುತ್ರನ ಸೋಲಿನ ಹೊಣೆ ಹೊರುವ ಲಕ್ಷಣವೂ ಕಾಣುತ್ತಿಲ್ಲ’ ಎಂದು ಸಿ.ಟಿ.ರವಿ ಕಟಕಿಯಾಡಿದರು.

‘ಲೋಕಸಭೆ ಚುನಾವಣೆಯ ಸೋಲಿನಲ್ಲಿ ತಮ್ಮದೇನು ನೈತಿಕ ಹೊಣೆ ಇಲ್ಲ ಎಂದು ಸ್ಪಷ್ಟಪಡಿಸಬೇಕು. ಇಲ್ಲವಾದರೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯನ್ನು ಪಕ್ಷಗಳ ಕಾರ್ಯಕರ್ತರೇ ಒಪ್ಪಿಕೊಂಡಿಲ್ಲ ಎಂಬ ಸಂದೇಶ ಈ ಚುನಾವಣೆಯಲ್ಲಿ ರವಾನೆಯಾಗಿದೆ. ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಒಂದು ವರ್ಷದಲ್ಲಿ ರಿಟೇಲ್‌ ಮತ್ತು ಹೋಲ್‌ಸೇಲ್‌ ಬ್ಯುಸಿನೆಸ್‌ ಬಿಟ್ಟರೆ ಬೇರಾವುದೇ ಅಭಿವೃದ್ಧಿ ಕೆಲಸಕ್ಕೆ ಆದ್ಯತೆ ಕೊಟ್ಟಿಲ್ಲ’ ಎಂದು ದೂಷಿಸಿದರು.

‘ಪ್ರಜ್ವಲ್‌ ನಿರ್ಧಾರ ಸ್ವಾಗತಾರ್ಹ’

‘ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆದ್ದಿರುವ ಪ್ರಜ್ವಲ್‌ ರೇವಣ್ಣ ಅವರು ರಾಜೀನಾಮೆ ನೀಡಿ ಎಚ್‌.ಡಿ.ದೇವೇಗೌಡ ಅವರಿಗೆ ಬಿಟ್ಟುಕೊಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಅವರ ನಿರ್ಧಾರವನ್ನು ಸ್ವಾಗತಿಸುತ್ತೇನೆ’ ಎಂದು ರವಿ ಹೇಳಿದರು.

‘ಪ್ರಜ್ವಲ್‌ ಅವರು ಸುಳ್ಳು ಅಫಿಡವಿಟ್‌ ಕೊಟ್ಟಿರುವ ಆರೋಪ ಎದುರಿಸುತ್ತಿದ್ದಾರೆ. ರಾಜೀನಾಮೆ ನೀಡಿದರೆ ಇದರಿಂದ ಪಾರಾಗಬಹುದು. ಇಲ್ಲದಿದ್ದರೆ ಸುಳ್ಳು ಅಫಿಡವಿಟ್‌ನ ಕುಣಿಕ ಸಂಸದ ಸ್ಥಾನಕ್ಕೆ ಸಂಚಕಾರ ತರುವ ಸಾಧ್ಯತೆ ಇದೆ’ ಎಂದರು.

‘ಎಚ್‌.ಡಿ.ದೇವೇಗೌಡ ಅವರನ್ನು ಇಳಿವಯಸ್ಸಿನಲ್ಲಿ ತುಮಕೂರಿನಲ್ಲಿ ಕಣಕ್ಕಿಳಿಸಿ ಸೋಲಿಸಿದ ಕಳಂಕ ಕಡಿಮೆಯಾಗುತ್ತದೆ. ಕೌಟುಂಬಿಕ ಸ್ಫೋಟ ಆಗದಿರಲು ಅನುಕೂಲವಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

‘ಒಳ ಬಂಡಾಯದಿಂದ ಸಮ್ಮಿಶ್ರ ಸರ್ಕಾರ ಪತನ ಸಾಧ್ಯತೆ’

‘ಲೋಕಸಭೆ ಚುನಾವಣೆ ಮತದಾನ ಮುಗಿದ ನಂತರ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಮಾಧ್ಯಮ, ಟ್ವಿಟರ್ ಜಗಳ ಶುರುವಾಗಿತ್ತು. ಇನ್ನು ಬೀದಿ ಜಗಳ ಬಾಕಿ ಇದೆ. ಒಳ ಬಂಡಾಯದಿಂದ ರಾಜ್ಯದ ಸಮ್ಮಿಶ್ರ ಸರ್ಕಾರ ಉರುಳಲಿದೆ’ ಎಂದು ಸಿ.ಟಿ.ರವಿ ಭವಿಷ್ಯ ನುಡಿದರು.

‘ಭಂಡತನದಿಂದ ಬಹಳ ದಿನ ಸರ್ಕಾರ ನಡೆಸಲಾಗದು. ಒಳಬಂಡಾಯದಿಂದ ಸರ್ಕಾರ ಪತನವಾಗುತ್ತದೆ. ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.