ADVERTISEMENT

ಚಿಕ್ಕಮಗಳೂರು: ಆರ್ಥೊ ವೈರಲ್‌ ಜ್ವರ ಬಾಧೆ; ಜನ ಹೈರಾಣ

ಬಿ.ಜೆ.ಧನ್ಯಪ್ರಸಾದ್
Published 3 ಸೆಪ್ಟೆಂಬರ್ 2019, 19:45 IST
Last Updated 3 ಸೆಪ್ಟೆಂಬರ್ 2019, 19:45 IST
ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ತಪಾಸಣೆಗೆ ನಿಂತಿದ್ದ ರೋಗಿಗಳು.
ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ತಪಾಸಣೆಗೆ ನಿಂತಿದ್ದ ರೋಗಿಗಳು.   

ಚಿಕ್ಕಮಗಳೂರು: ನಗರದಲ್ಲಿ ಆರ್ಥೊ ವೈರಲ್‌ ಜ್ವರ ಬಾಧಿಸುತ್ತಿದೆ. ಚಳಿಜ್ವರ, ಕೈಕಾಲು ಊತ, ಮಣಿಕಟ್ಟು–ಮಂಡಿ ನೋವು, ನರಗಳ ಸೆಳೆತದಿಂದ ಹಲವರು ಬಳಲುತ್ತಿದ್ದಾರೆ.

ಕೈಕಾಲು ಊತ, ನೋವು ಜ್ವರಬಾಧಿತರನ್ನು ಹೈರಣಾಗಿಸಿವೆ. ಆಸ್ಪತ್ರೆ, ಕ್ಲಿನಿಕ್‌, ಚಿಕಿತ್ಸಾಲಯಗಳಿಗೆ ಅಲೆಯುವಂತಾಗಿದೆ. ಕೆಲವರಿಗೆ ಎರಡ್ಮೂರು ತಿಂಗಳಾದರೂ ನೋವು ಶಮನವಾಗಿಲ್ಲ, ಕಾಯಿಲೆ ಗುಣವಾಗಿಲ್ಲ.

‘ಚಿಕ್ಕಮಗಳೂರಿನಲ್ಲಿ ಜ್ವರಬಾಧೆ ಹೆಚ್ಚಾಗಿದೆ. ಎರಡು ತಿಂಗಳ ಹಿಂದೆ ವಿಪರೀತ ಚಳಿಜ್ವರ ಬಂದಿತ್ತು. ತಪಾಸಣೆ ಮಾಡಿಸಿದಾಗ ಆರ್ಥೊವೈರಲ್‌ ಜ್ವರ ಎಂದು ಹೇಳಿದರು. ಕೈಕಾಲು ಊತ, ನೋವು ಹುಷಾರಾಗಿಲ್ಲ. ರಾತ್ರಿ ವೇಳೆ ವಿಪರೀತ ನೋವು ಇರುತ್ತದೆ. ಹಲವು ಬಾರಿ ಚಿಕಿತ್ಸೆ ಪಡೆದಿದ್ದೇನೆ, ಪೂರ್ಣ ಗುಣವಾಗಿಲ್ಲ’ ಎಂದು ವಿಜಯಪುರದ ಕೃಷ್ಣ ಮೆಡಿಕಲ್ಸ್‌ ಸ್ಟೋರ್‌ನ ಶ್ರೀಪತಿ ನೋವುತೋಡಿಕೊಂಡರು.

ADVERTISEMENT

ಬಸನವಹಳ್ಳಿ, ರಾಮನಹಳ್ಳಿ, ವಿಜಯಪುರ, ಗೌರಿಕಾಲುವೆ, ಮಧುವನ, ಟಿಪ್ಪುನಗರ ಸಹಿತ ವಿವಿಧ ಬಡಾವಣೆಗಳಲ್ಲಿ ಈ ಜ್ವರ ಇದೆ. ಅನೈರ್ಮಲ್ಯ, ಸೊಳ್ಳೆ, ಕಲುಷಿತ ನೀರು ಜ್ವರಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

‘ಮನೆಯಲ್ಲಿ ಎಲ್ಲರಿಗೂ ಜ್ವರ, ಕೈಕಾಲು ನೋವು. ಇದು ಸಾಂಕ್ರಾಮಿಕ ರೋಗ ಎನಿಸುತ್ತದೆ. ಡಾಕ್ಟರ್‌ ಕೇಳಿದರೆ, ‘ಆರ್ಥೊ ವೈರಲ್‌ ಜ್ವರ’ ಎನ್ನುತ್ತಾರೆ. ನೋವು ನಿವಾರಕ (ಪೇನ್‌ ಕಿಲ್ಲರ್‌) ಚುಚ್ಚುಮದ್ದು ತೆಗೆದುಕೊಂಡಾಗ, ಅದರ ಕ್ರಿಯಾಶಕ್ತಿ ಇರುವವರೆಗೆ ನೋವು ಇರಲ್ಲ. ಆಮೇಲೆ ಮತ್ತೆ ಶುರುವಾಗುತ್ತದೆ. ಅಬ್ಬಬ್ಬಾ... ವಿಪರೀತ ನೋವು. ಓಡಾಡುವುದಕ್ಕೂ ಆಗಲ್ಲ. ಕೈ ಆಡಿಸುವುದಕ್ಕೂ ಅಲ್ಲ’ ಎಂದು ಬಸನಹಳ್ಳಿ ಬಡಾವಣೆಯ ವಿಜಯಾಮೋಹನ್‌ ಅಲವತ್ತುಕೊಂಡರು.

ಡೆಂಗಿ, ಚಿಕೂನ್‌ ಗುನ್ಯಾದಂಥ ಕಾಯಿಲೆಗಳು ಬಾಧಿಸುತ್ತಿವೆ. ಡೆಂಗಿ ದೃಢಪಟ್ಟಿರುವವರಲ್ಲಿ ಬಹಳಷ್ಟು ಮಂದಿ ಮಣಿಪಾಲ, ಮಂಗಳರೂ, ಹಾಸನ, ಶಿವಮೊಗ್ಗ ಇತರೆಡೆಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಪ್ಲೆಟ್‌ಲೆಟ್‌ ಹಾಕುವ ವ್ಯವಸ್ಥೆಯೂ ಇಲ್ಲ. ಜ್ವರಪೀಡಿತ ಮಕ್ಕಳು, ವೃದ್ಧರನ್ನು ಆಸ್ಪತ್ರೆಗೆ ಕರೆದೊಯ್ಯುವುದು, ಸಂಭಾಳಿಸುವ ಕಷ್ಟ ಹೇಳ ತೀರದಾಗಿದೆ.

‘ನಿತ್ಯ 150ಕ್ಕೂ ಹೆಚ್ಚು ಮಂದಿ ಜ್ವರಪೀಡಿತರು ಬರುತ್ತಾರೆ. ವೈರಲ್‌ ಜ್ವರ ಬಾಧೆ ಪ್ರಕರಣಗಳೇ ಹೆಚ್ಚು’ ಎಂದು ಜಿಲ್ಲಾಸ್ಪತ್ರೆ ವೈದ್ಯ ಡಾ.ಗಂಗಾಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**

ಆಗಸ್ಟ್‌ನಲ್ಲಿ 1,062 ಮಂದಿಯ ರಕ್ತ ಮಾದರಿ ಸಂಗ್ರಹಿಸಲಾಗಿತ್ತು. ಈ ಪೈಕಿ 114 ಶಂಕಿತ ಪ್ರಕರಣಗಳಿದ್ದವು. ಚಿಕಿತ್ಸೆ ನೀಡಲಾಗಿದೆ. ನೈರ್ಮಲ್ಯ, ಸೊಳ್ಳೆ ನಿಯಂತ್ರಣ, ಶುದ್ಧ ನೀರಿನ ನಿಟ್ಟಿನಲ್ಲಿ ಒತ್ತು ನೀಡಬೇಕು

- ಡಾ.ಎಸ್‌.ಕುಮಾರ್‌, ಜಿಲ್ಲಾ ಶಸ್ತ್ರಚಿಕಿತ್ಸಕ, ಜಿಲ್ಲಾಸ್ಪತ್ರೆ


**

ಡೆಂಗಿ, ಚಿಕೂನ್‌ ಗುನ್ಯ, ಮಲೇರಿಯಾ ಅಂಕಿಅಂಶ (ಆಗಸ್ಟ್‌ ತಿಂಗಳಲ್ಲಿ)

ತಾಲ್ಲೂಕು ಡೆಂಗಿ ಚಿಕೂನ್‌ ಗುನ್ಯ ಮಲೇರಿಯಾ

ಚಿಕ್ಕಮಗಳೂರು 60 66 1

ಕಡೂರು 6 6 2

ತರೀಕೆರೆ 4 3 –

ಎನ್‌.ಆರ್‌.ಪುರ 3 1 –

ಕೊಪ್ಪ 3 – –

ಮೂಡಿಗೆರೆ 2 2 –

ಒಟ್ಟು 82 78 3

(ಮಾಹಿತಿ: ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.