ADVERTISEMENT

ಚಿಕ್ಕಮಗಳೂರು| ಕಣ್ಮರೆಯಾಗುತ್ತಿದೆ ಭತ್ತದ ಬೆಳೆ: ಸಣ್ಣದಾಗುತ್ತಿರುವ ಅನ್ನದ ಬಟ್ಟಲು

ವಿಜಯಕುಮಾರ್ ಎಸ್.ಕೆ.
Published 7 ಜುಲೈ 2025, 4:12 IST
Last Updated 7 ಜುಲೈ 2025, 4:12 IST
ಮೂಡಿಗೆರೆ ಪಟ್ಟಣದ ಸುಶಾಂತ್ ನಗರದ ಬಳಿ ಭತ್ತ ಬೆಳೆಯುತ್ತಿದ್ದ ಭತ್ತದ ಗದ್ದೆಗಳನ್ನು ಪಾಳು ಬಿಟ್ಟಿರುವುದು
ಮೂಡಿಗೆರೆ ಪಟ್ಟಣದ ಸುಶಾಂತ್ ನಗರದ ಬಳಿ ಭತ್ತ ಬೆಳೆಯುತ್ತಿದ್ದ ಭತ್ತದ ಗದ್ದೆಗಳನ್ನು ಪಾಳು ಬಿಟ್ಟಿರುವುದು   

ಚಿಕ್ಕಮಗಳೂರು: ಭತ್ತದ ಕಣಜವಾಗಿದ್ದ ಮಲೆನಾಡು ಈಗ ಬರಿದಾಗುತ್ತಿದೆ. ಅನ್ನ ಬೆಳೆಯುವ ಭೂಮಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಎನ್.ಆರ್.ಪುರ, ಕೊಪ್ಪ, ಮೂಡಿಗೆರೆ, ಶೃಂಗೇರಿ, ಕಳಸ ತಾಲ್ಲೂಕು ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಮಲೆನಾಡಿನಲ್ಲಿ ಮಳೆ ಆಶ್ರಯದಲ್ಲಿ ಭತ್ತ ಬೆಳೆಯಲಾಗುತ್ತಿದೆ. ತರೀಕೆರೆ ತಾಲ್ಲೂಕಿನಲ್ಲಿ ನೀರಾವರಿ ಆಶ್ರಯದಲ್ಲಿ ಭತ್ತದ ಬೆಳೆ ಬೆಳೆಯಲಾಗುತ್ತಿದೆ.

ಹವಾಮಾನ ವೈಪರೀತ್ಯದ ಜತೆಗೆ ವಾಣಿಜ್ಯ ಬೆಳೆಯತ್ತ ಜನ ಆಸಕ್ತಿ ವಹಿಸುತ್ತಿರುವುದರಿಂದ ಭತ್ತದ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಭತ್ತದ ಗದ್ದೆಗಳು ಈಗ ಕಾಫಿ, ಶುಂಠಿ ಮತ್ತು ಅಡಿಕೆ ತೋಟಗಳಾಗಿ ಮಗ್ಗಲು ಬದಲಿಸಿವೆ. ಭತ್ತ ಬೆಳೆದು ಬೇರೆ ಬೇರೆ ಊರುಗಳಿಗೂ ಕಳುಹಿಸಿದ್ದ ಜಿಲ್ಲೆಯಲ್ಲಿ ಈಗ ಬೇರೆ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದ ತರಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ADVERTISEMENT

ಗಂಗಾವತಿ, ದಾವಣಗೆರೆ, ಮಲೆಬೆನ್ನೂರು, ಕಾರಟಗಿ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ವಿವಿಧೆಡೆಯಿಂದ ಜಿಲ್ಲೆಗೆ ಅಕ್ಕಿ ಪೂರೈಕೆಯಾಗುತ್ತಿದೆ. ಭತ್ತ ಬೆಳೆದು ನಾಡಿಗೆ ಅನ್ನ ನೀಡುತ್ತಿದ್ದ ರೈತರು ಈಗ ದುಬಾರಿ ಬೆಲೆಯ ಪಾಲಿಶ್ ಅಕ್ಕಿ ಖರೀದಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲೇ ಹೆಚ್ಚು ಭತ್ತದ ಬೆಳೆ ಬೆಳೆಯಲಾಗುತ್ತಿತ್ತು. 2009–10ನೇ ಸಾಲಿನಲ್ಲಿ 10 ಸಾವಿರ ಹೆಕ್ಟೇರ್‌ನಲ್ಲಿ ಇದ್ದ ಭತ್ತದ ಬೆಳೆ ಈಗ 2 ಸಾವಿರ ಹೆಕ್ಟೇರ್‌ಗೆ ಕುಸಿತವಾಗಿದೆ. ಚಿಕ್ಕಮಗಳೂರು ತಾಲ್ಲೂಕಿನಲ್ಲಿ 9 ಸಾವಿರ ಹೆಕ್ಟೇರ್‌ನಲ್ಲಿ ಇದ್ದ ಭತ್ತದ ಬೆಳೆ ಈಗ 2 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ. ಇನ್ನು ನೀರಾವರಿ ಆಶ್ರಯದಲ್ಲಿ ತರೀಕೆರೆ ತಾಲ್ಲೂಕಿನಲ್ಲಿ 8 ಸಾವಿರ ಹೆಕ್ಟೇರ್‌ನಲ್ಲಿ ಇದ್ದ ಭತ್ತದ ಬೆಳೆ ಈಗ 1 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ.

ಪೂರಕ ಮಾಹಿತಿ: ರವಿ ಕೆಳಂಗಡಿ, ರವಿಕುಮಾರ್ ಶೆಟ್ಟಿಹಡ್ಲು, ಕೆ.ವಿ.ನಾಗರಾಜ್, ಕೆ.ಎನ್.ರಾಘವೇಂದ್ರ

ನರಸಿಂಹರಾಜಪುರ ತಾಲ್ಲೂಕು ಮಂಜಿನಕೊಪ್ಪ ವ್ಯಾಪ್ತಿಯಲ್ಲಿ ಭತ್ತದ ನಾಟಿಗೆ ಸಸಿ ಮಡಿ ಬಿಟ್ಟಿರುವುದು
ವೆಚ್ಚ ದುಬಾರಿ:
ಭತ್ತ ಬೆಳೆಯಲು ಹಿಂದೇಟು ಶೃಂಗೇರಿ: ತಾಲ್ಲೂಕಿನಲ್ಲಿ ಭತ್ತದ ಕೃಷಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಭತ್ತ ದರ ಕ್ವಿಂಟಾಲ್‌ಗೆ ₹2 ಸಾವಿರ ತೀರ ಕಡಿಮೆ ಇರುವುದರಿಂದ ವಾಣಿಜ್ಯ ಬೆಳೆಗಳಾದ ಅಡಿಕೆ ಕಾಫಿ ಕಾಳು ಮೆಣಸಿನ ದರ ಹೆಚ್ಚಳ ಇರುವುದರಿಂದ ರೈತರು ಭತ್ತದ ಕೃಷಿ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ತಾಲ್ಲೂಕಿನಲ್ಲಿ ಒಟ್ಟು 4510 ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲು ಗದ್ದೆ ಸಜ್ಜುಗೊಳಿಸಿದ್ದಾರೆ. ವರ್ಷದಲ್ಲಿ ಭತ್ತ ಬೆಳೆಯಲು ಸಸಿ ಮಡಿ ನಾಟಿ ಬತ್ತ ಸಂಸ್ಕರಣೆಗೆ ಕಾರ್ಮಿಕರ ವೆಚ್ಚ ಅಧಿಕವಾಗಿದೆ. ಇದರಿಂದ ಒಂದು ಕ್ವಿಂಟಾಲ್ ಭತ್ತ ಬೆಳೆಯಲು ಸುಮಾರು ₹7 ಸಾವಿರಕ್ಕೂ ಹೆಚ್ಚು ವೆಚ್ಚವಾಗುತ್ತಿದೆ. ನಷ್ಟನೆ ಜಾಸ್ತಿ ಆಗಿರುವುದರಿಂದ ಭತ್ತ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ರೈತ ಸಂಘದ ಅಧ್ಯಕ್ಷ ಕಾನೊಳ್ಳಿ ಚಂದ್ರಶೇಖರ್ ತಿಳಿಸಿದರು.

ವಾಣಿಜ್ಯ ಬೆಳೆಯತ್ತ ಒಲವು

ಕೊಪ್ಪ: ತಾಲ್ಲೂಕಿನಲ್ಲಿ ರೈತರು ಭತ್ತ ಬೆಳೆಯುವುದರಿಂದ ಹಿಂದೆ ಸರಿದಿದ್ದಾರೆ. ಬಹುತೇಕ ರೈತರು ವಾಣಿಜ್ಯ ಬೆಳೆಯತ್ತ ಒಲವು ತೋರಿದ್ದಾರೆ. ‘ಕಾರ್ಮಿಕರ ಕೊರತೆ ಭತ್ತ ಬೆಳೆಯುವಲ್ಲಿ ತಗಲುವ ವೆಚ್ಚ ಅದರ ನಿರ್ವಹಣೆ ದುಬಾರಿಯಾಗಿದೆ. ಸಕಾಲಕ್ಕೆ ಸಿಗದ ಬೆಂಬಲ ಬೆಲೆ ಮುಂತಾದ ಕಾರಣಗಳಿಂದ ಭತ್ತ ಬೆಳೆಯುವುದರ ಬದಲು ಊಟಕ್ಕೆ ಸಾಕಾಗುವಷ್ಟು ಖರೀದಿ ಮಾಡುವುದೇ‘ ಎಂಬುದು ಭತ್ತ ಬೆಳೆಯುವುದನ್ನು ಕೈಬಿಟ್ಟ ರೈತರು ಹೇಳುವ ಮಾತು.

ತಾಲ್ಲೂಕಿನಲ್ಲಿ ಕೆಲವೆಡೆ ಈ ಹಿಂದೆ ಭತ್ತ ಬೆಳೆಯುತ್ತಿದ್ದು ಕಳೆದ 15 ವರ್ಷಗಳ ಹಿಂದೆ ಕೇರಳದಿಂದ ಬಂದವರಿಗೆ ಶುಂಠಿ ಬೆಳೆಯಲು ಜಾಗ ಬಿಟ್ಟು ಕೊಟ್ಟಿದ್ದರು. ಬಳಿಕ ಆ ಜಾಗದಲ್ಲಿ ಫಲವತ್ತತೆ ಕಡಿಮೆಯಾಗಿದೆ ಎಂದು ಭತ್ತ ಬೆಳೆಯಲು ಹಿಂದೇಟು ಹಾಕಿದರು. ಇದೀಗ ಆ ಜಾಗವನ್ನು ಪಾಳು ಬಿಡಲಾಗಿದೆ. ಅಂತಹ ಜಾಗದಲ್ಲಿ ಯಾವ ಬೆಳೆಯನ್ನು ಬೆಳೆಯುತ್ತಿಲ್ಲ. ತಾಲ್ಲೂಕಿನಲ್ಲಿ ಕಳೆದ ಬಾರಿ ಒಟ್ಟು 2500 ಹೆಕ್ಟೇರ್ ಪ್ರದೇಶ ಬಿತ್ತನೆಗೆ ಗುರಿ ನಿಗದಿಪಡಿಸಲಾಗಿತ್ತು. ಆದರೆ 1980 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಒಂದೇ ವರ್ಷದಲ್ಲಿ 450 ಹೆಕ್ಟೇರ್ ಪ್ರದೇಶ ಭತ್ತ ಬೆಳೆಯಿಂದ ಹೊರಗುಳಿಯಿತು.

'ತಾಲ್ಲೂಕಿನಲ್ಲಿ ಮಳೆ ಆಶ್ರಯಿಸಿ ಏಕ ಬೆಳೆ ಬೆಳೆಯಲಾಗುತ್ತಿದ್ದು ಹಿಂಗಾರು ಬಿತ್ತನೆ ಎಂಬುದೇ ಇಲ್ಲ. ಎಂದಿನಂತೆ ಈ ಬಾರಿಯೂ 2500 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಆದರೆ ಗುರಿ ತಲುಪುವುದು ಕಷ್ಟ. ಭತ್ತ ಬೆಳೆಯಲು ತಗಲುವ ಖರ್ಚು ಕಾರ್ಮಿಕರ ಕೊರತೆ ಕೃಷಿಕರು ಅಡಿಕೆ ಬೆಳೆಯುವುದರತ್ತ ಆಸಕ್ತಿ ತೋರಿರುವುದು ಇದಕ್ಕೆ ಕಾರಣ’ ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಚಂದ್ರ ಟಿ.ಸಿ. ಅವರು ಹೇಳಿದರು.

ಐದು ವರ್ಷಗಳಲ್ಲಿ ಮೂರುವರೆ ಸಾವಿರ ಎಕರೆ ಪಾಳು

ಮೂಡಿಗೆರೆ: ತಾಲ್ಲೂಕಿನಲ್ಲಿ ಭತ್ತ ಬೆಳೆಯುವ ಪ್ರದೇಶವು ಗಣನೀಯವಾಗಿ ಇಳಿಕೆಯಾಗುತ್ತಿದ್ದು ಭತ್ತದ ಗದ್ದೆಗಳು ಪಾಳು ಬೀಳುತ್ತಿವೆ.ಐದು ವರ್ಷಗಳ ಹಿಂದೆ 6500 ಎಕರೆ ಪ್ರದೇಶವಿದ್ದ ಭತ್ತದ ಬೆಳೆ ಈಗ 3 ಸಾವಿರ ಎಕರೆ ಪ್ರದೇಶಕ್ಕೆ ಬಂದು ನಿಂತಿದೆ. ಈ ವರ್ಷ ಮತ್ತಷ್ಟು ಸಾಲಿನಲ್ಲಿ ಮತ್ತಷ್ಟು ಕಡಿಮೆಯಾಗುವ ಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕಿನಲ್ಲಿ ಭತ್ತ ಬೆಳೆ ನಷ್ಟದ ಬೆಳೆಯೆಂದೇ ಪರಿಗಣಿಸಲಾಗಿದೆ. ಕಾರ್ಮಿಕರ ಕೊರತೆ ಯಂತ್ರೋಪಕರಣಗಳ ಬಳಕೆಯ ವಿಫಲತೆ ತಂತ್ರಜ್ಞಾನ ದೂರ ಉಳಿದಿರುವುದು ಭತ್ತದ ಬೆಳೆ ಕಡಿಮೆಯಾಗಲು ಕಾರಣ ಹೇಳಿದರೂ ಲೇಔಟ್ ನಿರ್ಮಾಣದ ದುರಾಸೆಮಾನವ -ವನ್ಯಪ್ರಾಣಿ ಸಂಘರ್ಷ ರೈತರು ಭತ್ತದ ಬೆಳೆ ಕೈ ಬಿಡಲು ಪ್ರಮುಖ ಕಾರಣವಾಗಿವೆ.

ಕಾಡಾನೆಗಳು ಕಾಡುಕೋಣಗಳ ಹಾವಳಿ ಭತ್ತ ಬೆಳೆಯುವ ಪ್ರದೇಶದಲ್ಲಿ ಹೆಚ್ಚಿದೆ. ಸಸಿ ಮಡಿ ನಿರ್ಮಾಣದಿಂದ ಕೊಯ್ಲಿನವರೆಗೂ ತಪಸ್ಸಿನಂತೆ ಬೆಳೆ ಸಂರಕ್ಷಿಸಿಕೊಳ್ಳುವುದು ಸವಾಲಾಗಿದೆ. ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡರೂ ಕಾಡಾನೆಗಳು ದಾಳಿ ನಡೆಸಿ ಅರ್ಧ ಗಂಟೆಯಲ್ಲಿ ಇಡೀ ಗದ್ದೆಯನ್ನೇ ಕಳೆದುಕೊಂಡ ನಿದರ್ಶನಗಳಿವೆ. ಭತ್ತದ ಬೆಳೆಯನ್ನು ಕಳೆದುಕೊಂಡ ರೈತರಿಗೆ ಸಿಗುವ ಪರಿಹಾರವು ಅತ್ಯಲ್ಪವಾಗಿದ್ದು ದಾಳಿಗೊಳಗಾದ ಜಮೀನಿನ ಮಾಲೀಕರು ಇನ್ನೆಂದೂ ಭತ್ತ ಬೆಳೆಯಬಾರದು ಎಂದು ಮನಸು ಮಾಡುವಂತಾಗಿದೆ. ಬಹುತೇಕ ರೈತರು ಮನೆ ಬಳಕೆಗೆ ಮಾತ್ರ ಭತ್ತ ಬೆಳೆಯುತ್ತಿದ್ದು ವಿಶೇಷ ಯೋಜನೆಗಳನ್ನು ರೂಪಿಸಿ ಭತ್ತದ ಬೆಳೆಯನ್ನು ವಾಣಿಜ್ಯ ಬೆಳೆಯನ್ನಾಗಿಸಿದರೆ ಮಲೆನಾಡಿನಲ್ಲಿ ಭತ್ತದ ಬೆಳೆಯನ್ನು ಉಳಿಸುವುದಲ್ಲದೇ ಯುವ ಜನರನ್ನು ಭತ್ತದ ಗದ್ದೆಗಳತ್ತ ಆಕರ್ಷಿಸಿ ನಿರುದ್ಯೋಗ ನಿವಾರಿಸಲು ಹಾದಿಯಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಭತ್ತದ ಕಣಜ ಆವರಿಸಿದ ಅಡಿಕೆ ಬೆಳೆ

ನರಸಿಂಹರಾಜಪುರ: ಭದ್ರಾ ಅಣೆಕಟ್ಟೆ ನಿರ್ಮಾಣ ಮಾಡುವ ಮೊದಲು ರಾಜ್ಯದಲ್ಲಿಯೇ ಅತಿಹೆಚ್ಚು ಭತ್ತವನ್ನು ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತಿತ್ತು. ಇದರಿಂದ ಭತ್ತದ ಕಣಜ ಎಂದು ಹೆಸರು ಪಡೆದಿತ್ತು. ಭದ್ರಾ ಅಣೆಕಟ್ಟು ನಿರ್ಮಾಣದಿಂದ ಫಲವತ್ತಾದ ಜಮೀನು ಹಿನ್ನೀರಿನಲ್ಲಿ ಮುಳುಗಿದ್ದರಿಂದ ಭತ್ತದ ಬೆಳೆಯುವ ಪ್ರಮಾಣ ಕುಸಿಯುತ್ತಾ ಬಂದಿದೆ.

ತಾಲ್ಲೂಕಿನ ವ್ಯಾಪ್ತಿಯಲ್ಲಿ 2300 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಈಗ ಈ ಪ್ರಮಾಣ 2100 ಹೆಕ್ಟೇರ್‌ಗೆ ಕುಸಿದಿದೆ. ಬಿ.ಕಣಬೂರು (ಬಾಳೆಹೊನ್ನೂರು) ಹೋಬಳಿ ವ್ಯಾಪ್ತಿಯಲ್ಲಿ 800 ಹೆಕ್ಟೇರ್ ಹಾಗೂ ಮುತ್ತಿನಕೊಪ್ಪ ಕಸಬಾ ಹೋಬಳಿ(ನರಸಿಂಹರಾಜಪುರ) ವ್ಯಾಪ್ತಿಯಲ್ಲಿ 1300 ಹೆಕ್ಟೇರ್ ಪ್ರದೇಶದಲ್ಲಿ ಪ್ರಸ್ತುತ ಭತ್ತವನ್ನು ಬೆಳೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ 50ರಿಂದ 100 ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶ ಕುಸಿಯುತ್ತಿದೆ. ಮಾರುಕಟ್ಟೆಯಲ್ಲಿ ಭತ್ತಕ್ಕೆ ದೊರೆಯುವ ದರ ಕಡಿಮೆಯಾಗಿದ್ದು ನಿರ್ವಹಣಾ ವೆಚ್ಚ ಕೂಲಿ ಇತ್ಯಾದಿಗಳ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಭತ್ತದ ದರ ಮತ್ತು ನಿರ್ವಹಣಾ ವೆಚ್ಚದ ನಡುವೆ ಅಜ–ಗಜಾಂತರ ವ್ಯತ್ಯಾಸ ಇದೆ. ಭತ್ತದ ಬೆಳೆಯನ್ನು ಬಿಟ್ಟು ಬೇರೆ ಲಾಭದಾಯಕ ಬೆಳೆಯತ್ತ ರೈತರು ಆಕರ್ಷಿತರಾಗಲು ಪ್ರಮುಖ ಕಾರಣವಾಗಿದೆ.

ಆಹಾರ ಬೆಳೆಗಳ ಮೇಲೆ ಸರ್ಕಾರದ ನಿಯಂತ್ರಣವಿದ್ದರೂ ನಿರ್ವಹಣಾ ವೆಚ್ಚ ಅಧಿಕವಾಗಿದೆ. ಅನಿವಾರ್ಯವಾಗಿ ಭತ್ತ ಲಾಭದಾಯಕವಲ್ಲದ ಬೆಳೆಯಾಗಿ ಪರಿಣಮಿಸಿ ಈ ಭಾಗದ ರೈತರು ಲಾಭದಾಯಕ ವಾಣಿಜ್ಯ ಬೆಳೆ ರಬ್ಬರ್ ಅನ್ನು ಖುಷ್ಕಿ ಮತ್ತು ತರಿ ಜಮೀನಿನಲ್ಲಿ ಬೆಳೆಯಲು ಆರಂಭಿಸಿದರು. ಇದು ಪ್ರಾರಂಭದಲ್ಲಿ ರೈತರಿಗೆ ಹೆಚ್ಚಿನ ಆದಾಯ ತಂದು ಕೊಟ್ಟಿತು. ಇದರ ಬೆಲೆಯು ಕುಸಿತವಾಗಿದ್ದರಿಂದ ಬಹುತೇಕ ಭತ್ತ ರಬ್ಬರ್ ಬೆಳೆಯುತ್ತಿದ್ದ ಪ್ರದೇಶವನ್ನು ಅಡಿಕೆ ಬೆಳೆ ಆವರಿಸಿಕೊಂಡಿದೆ.

 ಪ್ರಸ್ತುತ ಭತ್ತ ಬೆಳೆಯುವ ಪ್ರದೇಶಗಳನ್ನು ಅಡಿಕೆ ಆವರಿಸಿದೆ. ಭತ್ತದ ಬೆಳೆಯುವುದು ಲಾಭದಾಯಕವಾಗಿಲ್ಲ. ಆದ್ದರಿಂದ ರೈತರು ವರ್ಷದಿಂದ ವರ್ಷಕ್ಕೆ ಭತ್ತದ ಬೆಳೆ ಕಡಿಮೆ ಮಾಡುತ್ತಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಮಹೇಶ್ ತಿಳಿಸಿದರು.

ಭತ್ತದ ಕೃಷಿಗೆ ನಿರಾಸಕ್ತಿ: ವಾಣಿಜ್ಯ ಬೆಳೆಗೆ ಮಣೆ

ಕಳಸ: ತಾಲ್ಲೂಕಿನಲ್ಲಿ ಅರ್ಧಕ್ಕರ್ಧ ಭತ್ತದ ಗದ್ದೆಯನ್ನು ವಾಣಿಜ್ಯ ಕೃಷಿಗೆ ಮಾರ್ಪಾಡು ಮಾಡಲಾಗಿದ್ದು ಅಕ್ಕಿಯನ್ನು ಪಕ್ಕದ ತಾಲ್ಲೂಕುಗಳಿಂದ ತರಿಸಿಕೊಳ್ಳಲಾಗುತ್ತಿದೆ. 3 ದಶಕದ ಹಿಂದೆ ಕಾಫಿ ಅಡಿಕೆ ಬೆಲೆ ಏರಿದಾಗ ಭತ್ತದ ಗದ್ದೆಯಲ್ಲೂ ಚರಂಡಿ ಸೀಳಿ ಕಾಫಿ ಅಡಿಕೆ ಬೆಳೆಯುವ ಪ್ರಯತ್ನ ಆರಂಭವಾಯಿತು. ಅಂದಿನಿಂದ ಇಂದಿನವರೆಗೆ ಭತ್ತದ ಗದ್ದೆಗಳು ನಿರಂತರವಾಗಿ ಕಾಫಿ ಅಡಿಕೆ ತೋಟಗಳಾಗಿ ಮಾರ್ಪಾಡು ಆಗುತ್ತಿವೆ. ಏಲಕ್ಕಿ ಕಾಳುಮೆಣಸು ಬೆಳೆಯುವ ಪ್ರಯತ್ನವೂ ನಡೆದಿದೆ.

ತಾಲ್ಲೂಕಿನ 3 ಸಾವಿರ ಎಕರೆ ಭತ್ತದ ಗದ್ದೆಯ ಪೈಕಿ ಅರ್ಧಕ್ಕೂ ಹೆಚ್ಚು ಈಗ ತೋಟಗಳಾಗಿವೆ. ಭತ್ತದ ಗದ್ದೆಯಲ್ಲಿ ಲಾಭ ಕುಸಿದಿದ್ದು ಮತ್ತು ಸಕಾಲಕ್ಕೆ ಕಾರ್ಮಿಕರ ಲಭ್ಯತೆಯ ಸಮಸ್ಯೆ ಭತ್ತದ ಕೃಷಿ ಬಗ್ಗೆ ಕೃಷಿಕರು ಹಿಂದೇಟು ಹಾಕಲು ಕಾರಣವಾಯಿತು. ಬಹುತೇಕ ಕೃಷಿ ಕುಟುಂಬಗಳು ಭತ್ತದ ಕೃಷಿಯನ್ನು ಬಿಟ್ಟಿದ್ದಾರೆ. ಭತ್ತದ ಕೃಷಿಗೆ ಬಳಸುತ್ತಿದ್ದ ಸಲಕರಣೆಗಳೆಲ್ಲ ಮೂಲೆಗೆ ಬಿದ್ದಿವೆ.

ಭತ್ತದ ಕೃಷಿಯ ಜೊತೆಗೆ ಅಂಟಿಕೊಂಡಂತೆ ಇದ್ದ ಜಾನಪದ ಸಂಸ್ಕ್ರತಿ ಕೂಡ ನಾಶವಾಗಿದೆ. ಸ್ಥಳೀಯ ಅಕ್ಕಿಯ ಅನ್ನವನ್ನೇ ಉಣ್ಣಬೇಕು ಎಂಬ ಬಲವಾದ ಭಾವನೆ ಹೊಂದಿರುವ ಕೆಲ ಕುಟುಂಬಗಳು ಮಾತ್ರ ಅಷ್ಟಿಷ್ಟು ಭತ್ತದ ಕೃಷಿ ಮೂಂದುರೆಸಿವೆ. ಅದು ಕೂಡ ಅವರ ತಲೆಮಾರಿಗೆ ಕೊನೆ ಆಗುವ ಆತಂಕ ಇದೆ. ಪಕ್ಕದ ಕೊಪ್ಪ ಶೃಂಗೇರಿ ಎನ್.ಆರ್. ಪುರ ತಾಲ್ಲೂಕುಗಳಿಂದ ಅಲ್ಲಿನ ಸ್ಥಳೀಯ ಅಕ್ಕಿ ತರಿಸಿ ಕಳಸದ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.