
ಚಿಕ್ಕಮಗಳೂರು: ರಸ್ತೆ ಮೇಲೆ ಹರಿಯುವ ನೀರು, ರಸ್ತೆ ಬದಿಯ ಕಸ ರಾಶಿಯಿಂದ ಜಾನುವಾರುಗಳ ಹೊಟ್ಟೆ ಸೇರುವ ಪ್ಲಾಸ್ಟಿಕ್ ತ್ಯಾಜ್ಯ, ಒಳಚರಂಡಿ ತುಂಬಿ ಮ್ಯಾನ್‌ಹೋಲ್‌ನಿಂದ ರಸ್ತೆ ಮೇಲೆ ಹರಿಯುವ ಕೊಳಚೆ ನೀರು... ಇಂತಹ ಅವ್ಯವಸ್ಥೆ ನಿರ್ಮಾಣವಾಗಿರುವುದು ಜ್ಯೋತಿನಗರ ಬಡಾವಣೆಯಲ್ಲಿ.
ದಂಟರಮಕ್ಕಿ ಸಂಗೊಳ್ಳಿರಾಯಣ್ಣ ಪ್ರತಿಮೆ ಮಾರ್ಗವಾಗಿ ಸ್ಟೇಡಿಯಂ ರಸ್ತೆಯಲ್ಲಿ ನರಿಗೋಡನಹಳ್ಳಿ ವೃತ್ತದ ತನಕ ಸಾಗಿದರೆ ಇಷ್ಟೆಲ್ಲ ಅವಾಂತರಗಳು ಕಾಣುತ್ತದೆ. ದಂಟರಮಕ್ಕಿ ವೃತ್ತದ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಸಂಗೊಳ್ಳಿರಾಯಣ್ಣ ಪ್ರತಿಮೆ ಪಕ್ಕದಲ್ಲೇ ಓವರ್ ಹೆಡ್ಡ್ ಟ್ಯಾಂಕ್ ಗೇಟ್‌ವಾಲ್ ಇದ್ದು, ಈ ಗೇಟ್ ವಾಲ್‌ನಿಂದ ಹೊರ ಬರುವ ನೀರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಪಕ್ಕದ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಈ ಮಾರ್ಗದಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದೆ.
ಇದೇ ಮಾರ್ಗದಲ್ಲಿ ಇರುವ ಕಾಫಿ ಕ್ಯೂರಿಂಗ್ ಎದುರಿಗೆ ಸಾರ್ವಜನಿಕರು ಪ್ಲಾಸ್ಟಿಕ್, ಪೇಪರ್, ಬಾಟಲಿ ಹಾಗೂ ಮನೆ ತ್ಯಾಜ್ಯ ತಂದು ಬಿಸಾಡುತ್ತಾರೆ. ಇದರಿಂದ ಆಹಾರ ಹರಸಿ ಬರುವ ಬೀಡಾಡಿ ದನಗಳ ಹೊಟ್ಟೆ ಸೇರುತ್ತಿದೆ. ಕಸದ ರಾಶಿಯಲ್ಲಿನ ಪ್ಲಾಸ್ಟಿಕ್ ಹಾಗೂ ಅನುಪಯುಕ್ತ ವಸ್ತುಗಳು, ಜತೆಗೆ ಕಸದ ರಾಶಿ ಸುತ್ತ ಬೀದಿ ನಾಯಿಗಳು ಬೀಡು ಬಿಟ್ಟಿವೆ. ಇಲ್ಲಿ ಸಂಚಾರ ಮಾಡುವ ಪಾದಚಾರಿಗಳನ್ನು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಬೆನ್ನಟ್ಟುವ ಘಟನೆಗಳು ನಡೆದ ಉದಾಹರಣೆಗಳು ಇವೆ.
ಕಳೆದ ಮೂರ–ನಾಲ್ಕು ದಿನಗಳಿಂದ ಒಳ ಚರಂಡಿಯ ಮ್ಯಾನ್ ಹೋಲ್ ತುಂಬಿ ಕೊಂಚೆ ನೀರು ರಸ್ತೆ ಮೇಲೆ ಹರಿದು ಇಲ್ಲಿನ ಮನೆ ಅಂಗಳದಲ್ಲಿ ಹರಿಯುತ್ತಿದೆ. ಇದರಿಂದ ದುರ್ವಾಸನೆ ಬೀರುತ್ತಿದ್ದು, ಮೂಗು ಮುಚ್ಚಿಕೊಂಡು ಜೀವನ ಸಾಗಿಸಬೇಕಾದ ವಾತಾವರಣ ಸೃಷ್ಟಿಯಾಗಿದೆ. ಈ ಕೊಳಚೆ ನೀರಿನ ಮೇಲೆಯೇ ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ದೂರುತ್ತಾರೆ ಇಲ್ಲಿನ ನಿವಾಸಿಗಳು.
ಗದಲ್ಲಿ ಕ್ರೀಡಾ ಮತ್ತು ಯುವ ಸಬಲೀಕರಣ ಕಚೇರಿ, ಒಳಾಂಗಣ ಕ್ರೀಡಾಂಗಣ, ಶತಮಾನೋತ್ಸವ ಕ್ರೀಡಾಂಗಣ ಸೇರಿ ವಿದ್ಯಾರ್ಥಿಗಳ ವಸತಿ ನಿಲಯಗಳು, ಶಾಲಾ-ಕಾಲೇಜು ಹಾಗೂ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಗುಂಡಿಯಾಗಿದ್ದು, ನಗರಸಭೆಯಿಂದ ಕಳೆದ ಒಂದು ತಿಂಗಳ ಹಿಂದೆ ಗುಂಡಿಗಳಿಗೆ ಜಲ್ಲಿಕಲ್ಲು ಹಾಗೂ ಎಂ. ಸ್ಯಾಂಡ್ ಹಾಕಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದೆ. ಆದರೆ, ರಸ್ತೆ ಗುಂಡಿಗೆ ಹಾಕಿದ ಜಲ್ಲಿ ಕಲ್ಲುಗಳು ರಸ್ತೆಯಲ್ಲಿ ಹರಡಿಕೊಂಡಿವೆ.
ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು. ರಸ್ತೆಯ ಮೇಲೆ ನೀರು ಹರಿಯುವುದನ್ನು ತಪ್ಪಿಸಬೇಕು. ಸಾರ್ವಜನಿಕರಿಗೆ ಆಗುವ ಕಿರಿಕಿರಿ ತಪ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹ.
ಎಚ್ಚರಿಕೆ ಫಲಕ ಅಳವಡಿಸಿ
ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಸ ಬೀಳುವುದರಿಂದ ಜಾನುವಾರು ತಿನ್ನುತ್ತವೆ. ನಮ್ಮ ಬಡಾವಣೆಯಲ್ಲಿ ಕಸ ಹಾಕುವ ಸ್ಥಳಗಳಲ್ಲಿ ನಗರ ಸಭೆಯಿಂದ ಎಚ್ಚರಿಕೆಯ ನಾಮಫಲಕ ಅಳವಡಿಸ ಬೇಕು ಎಂಬುದು ಸ್ಥಳೀಯರ ಆಗ್ರಹ. ಕಸ ಹಾಕಿದರೆ ದಂಡ ವಿಧಿಸಬೇಕು. ರಸ್ತೆ ಗುಂಡಿಗೆ ಜಲ್ಲಿಕಲ್ಲು ಹಾಕಲಾಗಿದೆ. ಶೀಘ್ರವಾಗಿ ಡಾಂಬರ್ ಹಾಕಬೇಕು. ಮ್ಯಾನ್‌ಹೋಲ್ ದುರಸ್ತಿಪಡಿಸಿ ಅಪಾಯ ತಪ್ಪಿಸಿಬೇಕು ಎಂದು ಇಲ್ಲಿನ ಸ್ಥಳೀಯರ ಒತ್ತಾಯಿಸುತ್ತಾರೆ.