ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಪಿ.ಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯ ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಸುಮಾರು ₹12.5 ಕೋಟಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹೇಶ್ ತಿಳಿಸಿದರು.
ನಗರದ ಬಸವನಹಳ್ಳಿ ಸಮೀಪದ ವಿಶ್ವಕರ್ಮ ಸಮುದಾಯ ಭವನದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ವತಿಯಿಂದ ಏರ್ಪಡಿಸಿದ್ದ ಪಿ.ಎಂ ವಿಶ್ವಕರ್ಮ ಯೋಜನೆ ಕಾರ್ಯಾಗಾರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪೂರ್ವಿಕರ 18ಕ್ಕೂ ಹೆಚ್ಚು ಮೂಲ ಕಸುಬು ಮಾಡಿಕೊಂಡು ಬಂದಿರುವ ಸಮುದಾಯಗಳಿಗೆ ಆರ್ಥಿಕ ಸಹಾಯಹಸ್ತ ಇರಲಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸಿ ಮೂಲ ಕಸುಬು ಉಳಿಸಲು ವಿಶ್ವಕರ್ಮ ಯೋಜನೆ ಜಾರಿಗೆ ತಂದಿದೆ. ತರಬೇತಿ ನಂತರ ಆರ್ಥಿಕ ಸಹಾಯ ಧನ ಒದಗಿಸುತ್ತಿದೆ ಎಂದರು.
ಮೂಲ ಕಸುಬುದಾರರು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹರಿಗೆ ತರಬೇತಿ ನೀಡಿ ಪ್ರಮಾಣ ಪತ್ರ ವಿತರಿಸಲಾಗುವುದು. ನಂತರ ಬ್ಯಾಂಕ್‌ನಿಂದ ವಾರ್ಷಿಕ ಶೇ 5ರ ಬಡ್ಡಿದರದಲ್ಲಿ ₹50 ಸಾವಿರದಿಂದ ₹2 ಲಕ್ಷದವರೆಗೆ ಕಸುಬಿನ ಪರಿಕರ ಖರೀದಿಸಲು ಸಾಲದ ರೂಪದಲ್ಲಿ ವಿತರಿಸುವ ಯೋಜನೆ ಇದಾಗಿದೆ ಎಂದು ತಿಳಿಸಿದರು.
ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವವರು ಕೇಂದ್ರದ ಮುದ್ರಾ ಸೇರಿದಂತೆ ಯಾವುದೇ ಯೋಜನೆಯಲ್ಲಿ ಸಾಲ ಪಡೆದಿರಬಾರದು. ಸರ್ಕಾರಿ ಹುದ್ದೆ ಹೊಂದಿರುವ ವ್ಯಕ್ತಿಗೆ ಸೌಲಭ್ಯ ಲಭಿಸುವುದಿಲ್ಲ. ಸಾಲ ಪಡೆದುಕೊಂಡ ಫಲಾನುಭವಿಗಳು ಸಮಯಕ್ಕೆ ಮರುಪಾವತಿ ಮಾಡಿದರೆ ಹೆಚ್ಚಿನ ಮೊತ್ತದಲ್ಲಿ ಸಾಲ ದೊರಕಲಿದೆ ಎಂದರು.
ಎಂಎಸ್ಎಂಇ ಸಹಾಯಕ ನಿರ್ದೇಶಕ ಜಿ.ನಾಗರಾಜ್ ಮಾತನಾಡಿ, ವಿಶ್ವಕರ್ಮ ಯೋಜನೆಯಲ್ಲಿ ಫಲಾನುಭವಿಗಳಿಗೆ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡಲಾಗುತ್ತಿದೆ ಎಂದರು.
ಪಿಎಂವಿ ಯೋಜನೆ ಜಿಲ್ಲಾ ಸದಸ್ಯ ರವೀಂದ್ರ ಬೆಳವಾಡಿ ಮಾತನಾಡಿ, ‘ಮೂಲಕಸಬು ಉಳಿಸಲು ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ, ಕೆಲವು ಬ್ಯಾಂಕ್‌ಗಳು ಆರಂಭದಲ್ಲಿ ₹1 ಲಕ್ಷ ಸಾಲ ವಿತರಿಸುವ ಬದಲಾಗಿ, ಕೇವಲ ₹50 ಸಾವಿರ ಸಾಲ ವಿತರಿಸುತ್ತಿರುವುದು ಸರಿಯಲ್ಲ. ಕೇಂದ್ರ ಸರ್ಕಾರದ ಆದೇಶವನ್ನು ಬ್ಯಾಂಕ್‌ಗಳು ಪಾಲಿಸಬೇಕು’ ಎಂದು ಹೇಳಿದರು.
ಎಂಎಸ್ಎಂಇ ಜಂಟಿ ನಿರ್ದೇಶಕ ಎಂ.ಶಶಿಕುಮಾರ್ ಮಾತನಾಡಿ, ‘ದೇಶದಾದ್ಯಂತ ಮೂಲ ಕಸುಬುದಾರರ ಜೀವನ ಸುಧಾರಿಸಲು ಕೇಂದ್ರ ಸರ್ಕಾರ ₹13 ಸಾವಿರ ಕೋಟಿಯನ್ನು ಯೋಜನೆಗೆ ಮೀಸಲಿಟ್ಟಿದೆ’ ಎಂದರು.
ಕಾರ್ಯಗಾರದಲ್ಲಿ ಪಿಎಂವಿ ಯೋಜನೆ ಜಿಲ್ಲಾ ಸದಸ್ಯ ಸಂತೋಷ್ ಕೋಟ್ಯಾನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಮಹೇಶ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರಶಾಂತ್, ಸಿಎಸ್‌ಸಿ ಜಿಲ್ಲಾ ಸಂಯೋಜಕ ವಿಜಯಕುಮಾರ್, ಡಿಪಿಎಂಯು ರಾಕೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.