ADVERTISEMENT

ರಕ್ಷಣಾತ್ಮಕ ನೀರಾವರಿಗೆ ಒತ್ತು ಅಗತ್ಯ: ಸಚಿವ ಮಾಧುಸ್ವಾಮಿ

ಮಾದರಸ ಕೆರೆ, ದಾಸರಹಳ್ಳಿ ಕೆರೆಗೆ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:57 IST
Last Updated 12 ಆಗಸ್ಟ್ 2022, 5:57 IST
ಚಿಕ್ಕಮಗಳೂರು ತಾಲ್ಲೂಕಿನ ಮಾದರಸನ ಕೆರೆಗೆ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಸಿ.ಟಿ.ರವಿ ಬಾಗಿನ ಅರ್ಪಿಸಿದರು.
ಚಿಕ್ಕಮಗಳೂರು ತಾಲ್ಲೂಕಿನ ಮಾದರಸನ ಕೆರೆಗೆ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಸಿ.ಟಿ.ರವಿ ಬಾಗಿನ ಅರ್ಪಿಸಿದರು.   

ಚಿಕ್ಕಮಗಳೂರು: ‘ರಕ್ಷಣಾತ್ಮಕ ನೀರಾವರಿಗೆ (ಪ್ರೊಟೆಕ್ಟಿವ್‌ ಇರಿಗೇಷನ್‌) ಆದ್ಯತೆ ನೀಡಿ ಕೃಷಿಗೆ ನೀರು ಒದಗಿಸುವುದರಿಂದ ಗ್ರಾಮೀಣ ಬದುಕು ಸುಸ್ಥಿರವಾಗಿಸಲು ಅನುಕೂಲವಾಗುತ್ತದೆ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅಭಿಪ್ರಾಯಪಟ್ಟರು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ದಾಸರಹಳ್ಳಿ, ಮಾದರಸನ ಕೆರೆಗೆ ಬಾಗಿನ ಅರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಜನ ಜೀವನ ಸುಧಾರಣೆ ಮಾಡದ ಹೊರತು ಗಾಂಧೀಜಿ ಕಂಡ ರಾಮರಾಜ್ಯ ಕಲ್ಪನೆ ಸಾಕಾರ ಸಾಧ್ಯ ಇಲ್ಲ. ಈಗ ನಗರ ಮತ್ತು ಗ್ರಾಮೀಣ ಎಂಬ ‘ವರ್ಗ’ಗಳು ಸೃಷ್ಟಿಯಾಗಿವೆ. ಹಳ್ಳಿಗಳಲ್ಲಿ ಸೌಲಭ್ಯಗಳನ್ನು (ಶೈಕ್ಷಣಿಕ, ವೈದ್ಯಕೀಯ...), ದುಡಿಮೆಗೆ ಅವಕಾಶಗಳನ್ನ ಕಲ್ಪಿಸಿ ಈ ಗ್ರಾಮೀಣ ಮತ್ತು ನಗರ ಎಂಬ ಅಂತರ ಕಡಿಮೆ ಮಾಡಬೇಕಿದೆ ಎಂದರು.

ನೀರನ್ನು ಶೇಖರಣೆ ಮಾಡಿ ಒದಗಿಸುವ ಕೆಲಸ ಆಗಬೇಕು. ಹಳ್ಳಿಗಳಿಗೆ ರಕ್ಷಣಾತ್ಮಕ ನೀರಾವರಿ ಕಲ್ಪಿಸಿ ತೋಟಗಳಿಗೆ ಎರಡ್ಮೂರು ಹದ ನೀರು ಒದಗಿಸಿದರೆ ಅನುಕೂಲ ಆಗುತ್ತದೆ ಎಂದರು.

ADVERTISEMENT

‘ಮೈಸೂರು ಸಂಸ್ಥಾನದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಕೆರೆ, ಶಿಕ್ಷಣ ಸಂಸ್ಥೆ ಮೊದಲಾದವುಗಳನ್ನು ನಿರ್ಮಿಸಿ ಜನಸೇವಕರಾಗಿ ಕೆಲಸ ಮಾಡಿದ್ದರು. ಇವತ್ತು ಜನಸೇವಕರಾಗಿ (ರಾಜಕಾರಣಿಗಳು) ಬಂದವರು ಅರಸರಾಗಿ ಮೆರೆಯಲು ಶುರು ಮಾಡಿದ್ದೇವೆ. ರಾಜಕಾರಣ ಫ್ಯಾಷನ್‌ ಆಗಬಾರದು ಅದು ಸೇವೆ ಆಗಬೇಕು’ ಎಂದರು.

ಲಕ್ಯಾ ಭಾಗದಲ್ಲಿ ನೀರಿನ ಬವಣೆ ಇದೆ. ವರ್ಷದ ಅವಧಿಯಲ್ಲಿ ಕಾಮಗಾರಿ ಮುಗಿಸಿ ಕೆರೆಗಳಿಗೆ ನೀರು ಹರಿಸಿ ರೈತರಿಗೆ ನೆರವು ಮಾಡಿಕೊಡಲಾಗಿದೆ ಎಂದರು.

‘ಕಾಂಗ್ರೆಸ್‌ನ ಇಂದಿರಾಗಾಂಧಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಜಿಲ್ಲೆ ಇದು. ಈ ಜಿಲ್ಲೆ ಅಭಿವೃದ್ಧಿಗೆ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಕೊಡುಗೆ ನೀಡಿಲ್ಲ’ ಎಂದು ಟೀಕಿಸಿದರು.

‘ಸಿ.ಟಿ. ರವಿ ಅವರಿಗೆ ಪಕ್ಷ ಜವಾಬ್ದಾರಿ ಹೆಚ್ಚು ನೀಡಿದೆ. ಹೀಗಾಗಿ, ಕ್ಷೇತ್ರದಿಂದ ಹೊರಗೆ ಜಾಸ್ತಿ ಇರುತ್ತಾರೆ. ಕ್ಷೇತ್ರದ ಜನರು ಸಣ್ಣ ಕೆಲಸಗಳನ್ನೂ ಶಾಸಕರಿಂದ ನಿರೀಕ್ಷಿಸುವ ಕಾಲ ಇದು. ರವಿ ಅವರು ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಎಚ್ಚರಿಸಿದರು.

ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಯಾಕರ್‌, ಎಂಜಿನಿಯರ್‌ ವಿಕಾಸ್‌,

ಮುಖ್ಯ ಎಂಜಿನಿಯರ್ ರಾಘವನ್, ಲಕ್ಯಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ, ಬಿಜೆಪಿ ಮುಖಂಡರಾದ ಕಲ್ಮರುಡಪ್ಪ, ಎಚ್‌.ಡಿ.ತಮ್ಮಯ್ಯ, ಈಶ್ವರಹಳ್ಳಿ ಮಹೇಶ್‌ , ರವೀಂದ್ರ ಬೆಳವಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.