ADVERTISEMENT

ಪ್ರಾಣ ಒತ್ತೆ ಇರಿಸಿಯಾದರೂ ಕಾರ್ಯಕರ್ತರ ಕಾಪಾಡುವೆ: ಬಿಜೆಪಿ ಮುಖಂಡ ಜೀವರಾಜ್

ಕೊಪ್ಪದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 6:07 IST
Last Updated 20 ಅಕ್ಟೋಬರ್ 2025, 6:07 IST
ಕೊಪ್ಪದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು
ಕೊಪ್ಪದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು   

ಕೊಪ್ಪ: ‘ಬಿಜೆಪಿ ಕಾರ್ಯಕರ್ತರಿಗೆ ತೊಂದರೆಯಾದರೆ ನನ್ನ ಪ್ರಾಣ ಒತ್ತೆ ಇಟ್ಟಾದರೂ ಕಾಪಾಡುತ್ತೇನೆ’ ಎಂದು ಬಿಜೆಪಿ ಮುಖಂಡ ಡಿ.ಎನ್.ಜೀವರಾಜ್ ಹೇಳಿದರು.

ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ಭಾನುವಾರ ಶೃಂಗೇರಿ ಕ್ಷೇತ್ರ ಬಿಜೆಪಿ ಘಟಕದ ಆಯೋಜಿಸಿದ್ದ ‘ರಾಜ್ಯ ಸರ್ಕಾರದ ಅಭಿವೃದ್ಧಿ ಶೂನ್ಯ ರಾಜಕಾರಣ, ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರ ಹಿಂಬಾಲಕರ ಗುಂಡಾಗಿರಿ ವಿರುದ್ಧ ‘ಗೂಂಡಾಗಿರಿ ಬಿಡಿ ಅಭಿವೃದ್ಧಿ ಮಾಡಿ’ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘2013ಕ್ಕೂ ಮೊದಲು ಸ್ನೇಹದ ರಾಜಕಾರಣ ಇತ್ತು. ರಾಜೇಗೌಡ ಅವರು ಚುನಾವಣೆಗೆ ಸ್ಪರ್ಧಿಸಿದ ಬಳಿಕ ದ್ವೇಷ ರಾಜಕಾರಣ ಆರಂಭಗೊಂಡಿತು. ನನ್ನನ್ನು ತೇಜೋವಧೆ ಮಾಡಲು ಏನೂ ಉಳಿಸಿಲ್ಲ. ಟಿ.ಡಿ.ಆರ್ ಎಂದರೆ ತುಂಬಾ ದ್ವೇಷದ ರಾಜಕಾರಣ ಎಂದರ್ಥ’ ಎಂದು ಹೇಳಿದರು.

ADVERTISEMENT

‘ನಾನು ಕೊಟ್ಟ ಸಾಗುವಳಿ ಚೀಟಿಗೆ ಈಗಿನ ಶಾಸಕರು ಪಹಣಿ ಹಾಕಿ ಕೊಟ್ಟಿಲ್ಲ. ಶೃಂಗೇರಿಯಲ್ಲಿ ಹಿಂದೂಗಳ ಅಂಗಡಿ ಕಿತ್ತು ಹಾಕಿದ್ದೀರಿ. ಪೊಲೀಸರ ಅಧಿಕಾರದಲ್ಲಿ ನೀವು ಹಸ್ತಕ್ಷೇಪ ಮಾಡುತ್ತಿದ್ದೀರಿ. ವಾರ್ಷಿಕ ₹ 40 ಲಕ್ಷ ಆದಾಯ ಇರುವ ನೀವು ₹ 120 ಕೋಟಿ ಆಸ್ತಿ ಪಡೆದಿದ್ದು ಹೇಗೆ?’ ಎಂದು ಪ್ರಶ್ನಿಸಿದರು.

ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಪುಣ್ಯಪಾಲ್, ‘ಕ್ಷೇತ್ರದಲ್ಲಿ ಅಭಿವೃದ್ಧಿಯೇ ಮೂಲ ಮಂತ್ರ ಎಂದು ಬ್ಯಾನರ್ ಹಾಕಿದ್ದಾಗ ನಾವು ಎಲ್ಲಿ ಅಭಿವೃದ್ಧಿ ಎಂದು ಆಲೋಚಿಸುತ್ತಿದ್ದೆವು. ಲೋಕಾಯುಕ್ತ ಕೋರ್ಟ್‌ನಲ್ಲಿ ಎ1 ಆರೋಪಿಯಾದಾಗಲೇ ಯಾವ ಅಭಿವೃದ್ಧಿ ಎಂದು ಗೊತ್ತಾಗಿದ್ದು’ ಎಂದು ಹೇಳಿದರು.

‘ಜೀವರಾಜ್ ಮೇಲಿನ ಪ್ರಕರಣ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಸಾಕ್ಷ್ಯಾಧಾರ ಕೊರತೆಯಿಂದ ವಜಾ ಆಗಿತ್ತು. ಈ ಬಗ್ಗೆ ವಕೀಲ ಸುಧೀರ್ ಕುಮಾರ್ ಮುರೊಳ್ಳಿಗೆ ಮಾಹಿತಿ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತ ಮನೋಜ್ ಎಂಬ ಯುವಕನಿಗೆ ಸುಧೀರ್ ಕುಮಾರ್ ಪೋನ್‌ನಲ್ಲಿ ಬೆದರಿಕೆ ಹಾಕಿದ್ದಾರೆ. ಇಂಥ ಬೆದರಿಕೆಗೆ ನಾವು ಸುಮ್ಮನಿರುವುದಿಲ್ಲ, ಇದನ್ನು ಎದುರಿಸುವ ಶಕ್ತಿ ನಮಗಿದೆ’ ಎಂದರು.

ಮಂಡಲ ಬಿಜೆಪಿ ಅಧ್ಯಕ್ಷ ಎಚ್.ಕೆ.ದಿನೇಶ್, ‘ಕಾಂಗ್ರೆಸ್ ಸತ್ಯಮೇವ ಜಯತೇ ಕಾರ್ಯಕ್ರಮದಲ್ಲಿ ಸತ್ಯ ಮರೆಮಾಚಿ ನಮ್ಮ ನಾಯಕರನ್ನು ಅವಹೇಳನ ಮಾಡಲು ವೇದಿಕೆ ಮಾಡಿಕೊಂಡಿದ್ದರು. 2018ರಲ್ಲಿ ಶಾಸಕರ ವಾರ್ಷಿಕ ಆದಾಯ ಎಷ್ಟಿತ್ತು ಎಂದು ತೆರಿಗೆ ಇಲಾಖೆ, ಚುನಾವಣೆ ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ ₹ 33 ಲಕ್ಷ ಇತ್ತು. ಶಹಾಬಾನ ರಂಜಾನ್ ಪಾರ್ಟ್ನರ್ ಶಿಪ್ ಜಮೀನಿನ ಬಗ್ಗೆ ಚುನಾವಣೆ ಆಯೋಗಕ್ಕೆ ಮಾಹಿತಿ ಕೊಟ್ಟಿಲ್ಲ' ಎಂದು ತಿಳಿಸಿದರು.

ರಾಜ್ಯ ಎಸ್.ಸಿ. ಮೋರ್ಚಾ ವಕ್ತಾರ ಶೃಂಗೇರಿಯ ಶಿವಣ್ಣ, ‘ಅಂಬೇಡ್ಕರ್ ಭಾವಚಿತ್ರ ಹಾಕಿಕೊಂಡು ಕಾರ್ಯಕ್ರಮ ಮಾಡುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಅಂಬೇಡ್ಕರ್ ತೀರಿಕೊಂಡಾಗ ದೆಹಲಿಯಲ್ಲಿ ಸಂಸ್ಕಾರಕ್ಕೆ ಜಾಗ ಕೊಟ್ಟಿಲ್ಲ. ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತಿನ ಹಿಡಿತವಿಲ್ಲದೆ ಎನ್.ಆರ್.ಪುರದ ಸದಾಶಿವ ಅವರು ಮಾತನಾಡಿದ್ದು, ಅವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ, ‘ಒಂದೊಂದು ಚುನಾವಣೆಯಲ್ಲಿ ಒಂದೊಂದು ವೇಷ ತೊಡುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಮಲೆನಾಡು ಜನಪರ ಒಕ್ಕೂಟ, ಲೋಕಸಭಾ ಚುನಾವಣೆಯಲ್ಲಿ ಮಲೆನಾಡು ಕರಾವಳಿ ಜನಪರ ಒಕ್ಕೂಟ. ಕಾಂಗ್ರೆಸ್‌ನಲ್ಲಿ ಎ ಟೀಮ್ ಬಿ ಟೀಮ್ ಇದೆ. ಐದು ಮಂದಿ ಶಾಸಕರನ್ನು ಇಟ್ಟುಕೊಂಡ ಜಿಲ್ಲಾ ಕೇಂದ್ರದ ರಸ್ತೆ ಯಾವ ಸ್ಥಿತಿಯಲ್ಲಿ ಇದೆ?’ ಎಂದರು.

ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರುತಿ ರೋಹಿತ್, ಮುಖಂಡ ಅರೇನೂರ್ ಸಂತೋಷ್, ದಿಶಾ ಸಮಿತಿ ಸದಸ್ಯ ಮಣಿಕಂಠನ್ ಕಂದಸ್ವಾಮಿ, ವಾಲ್ಮೀಕಿ ಸಂಘದ ಶ್ರೀನಿವಾಸ್ ಮಾತನಾಡಿದರು.

ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಎಸ್.ಮಹಾಬಲ್ ರಾವ್, ಎನ್.ಆರ್.ಪುರ ಅಧ್ಯಕ್ಷ ನಿಲೇಶ್, ಪ್ರಮುಖರಾದ ಅರುಣ್ ಶಿವಪುರ, ಜಯಂತ್ ನಿಲುವಾಗಿಲು, ರೇವಂತ್ ಗೌಡ, ವೆನಿಲ್ಲಾ ಭಾಸ್ಕರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.