ಚಿಕ್ಕಮಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಕಡೆಗೆ ವಕೀಲನೊಬ್ಬ ಶೂ ಎಸೆದು ಅಪಮಾನ ಮಾಡಿರುವುದನ್ನು ಖಂಡಿಸಿ ಹೋರಾಟ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದವು.
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟ ವೇದಿಕೆ ಮುಖಂಡ ಅನಿಲ್‌ಕುಮಾರ್, ‘ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಪಕ್ಷ ಹಾಗೂ ಧರ್ಮ ಬಿಟ್ಟು ಹೋರಾಡಬೇಕು. ದೇಶಕ್ಕೆ ಅತಿದೊಡ್ಡ ಕವಚ ಸಂವಿಧಾನ. ಅದಕ್ಕೆ ವಿರುದ್ಧವಾಗಿ ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವ ವ್ಯಕ್ತಿಯನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಒತ್ತಾಯಿಸಿದರು.
ರಾಜತಾಂತ್ರಿಕ ವ್ಯವಸ್ಥೆಯಲ್ಲಿ ರಾಜರೇ ಪ್ರಭುಗಳಾಗಿದ್ದರು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರಜೆಗಳೆ ಪ್ರಭುಗಳು. ಅದಕ್ಕಾಗಿ ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿ ನ್ಯಾಯಾಂಗ ವ್ಯವಸ್ಥೆ ನಿರ್ಮಿಸಿದರು. ಆದರೆ, ಮನುವಾದಿ ವ್ಯಕ್ತಿತ್ವವುಳ್ಳ ವಕೀಲ ಮುಖ್ಯ ನ್ಯಾಯಮೂರ್ತಿಗೆ ಅಪಮಾನಿಸಿ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ ಎಂದು ದೂರಿದರು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ‘ಆರ್‌ಎಸ್‌ಎಸ್ ಸಂಸ್ಕೃತಿಯ ವಕೀಲರು ನ್ಯಾಯಮೂರ್ತಿಗೆ ಶೂ ಎಸೆದು ದೇಶದ ನಾಗರಿಕತೆಗೆ ಧಕ್ಕೆ ಉಂಟು ಮಾಡಿದ್ದಾರೆ. ಇದು ಭಾರತೀಯರಿಗೆ ತುಂಬಲಾರದ ನೋವುಂಟು ಮಾಡಿದೆ. ಆದ್ದರಿಂದ ಅಪರಾಧ ಎಸಗಿರುವ ವಕೀಲನನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.
‘ಭಾರತ ಗೋಮಾಂಸ ರಫ್ತು ಮಾಡುವಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಆದರೆ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ದನದ ಮಾಂಸದ ಬಿರಿಯಾನಿ ಪ್ರದರ್ಶನ ಮಾಡಿದ್ದಾರೆ. ಅವರಿಗೆ ದನದ ಮಾಂಸದ ಬಿರಿಯಾನಿ ತಂದುಕೊಟ್ಟವರು ಯಾರು’ ಎಂದು ಪ್ರಶ್ನಿಸಿದರು.
ಅಧಿಕಾರದಲ್ಲಿ ಇದ್ದಾಗ ಕಟ್ಟುನಿಟ್ಟಿನ ಕ್ರಮ ವಹಿಸದೆ ಅದನ್ನೇ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ್, ಜುಮ್ಮಾ ಮಸೀದಿಯ ನಾಸೀರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ಗ್ಯಾರಂಟಿ ಪ್ರಾಧಿಕಾರದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಮಲ್ಲೇಶ್, ಭೀಮ್ ಆರ್ಮಿ ಅಧ್ಯಕ್ಷ ಗಿರೀಶ್, ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಸಿ. ರಾಜೇಗೌಡ, ನಗರಸಭೆ ಸದಸ್ಯ ಮುನೀರ್ ಅಹ್ಮದ್, ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್ ಭಾಗವಹಿಸಿದ್ದರು.
ತಾಲ್ಲೂಕು ಕಚೇರಿ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ವಕೀಲ ರಾಕೇಶ್ ಕಿಶೋರ್ ಅಣಕು ಶವ ಹೊತ್ತು ಸಾಗಿದರು. ನಂತರ ಆಜಾದ್ ಪಾರ್ಕ್ ವೃತ್ತದಲ್ಲಿ ಅಣಕು ಶವ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ಸಾಗಿದ ನೂರಾರು ವಿದ್ಯಾರ್ಥಿಗಳು ಸಂವಿಧಾನದ ಪರ ಘೋಷಣೆ ಕೂಗಿದರು. ಭೀಮ್ ಆರ್ಮಿ ಕನ್ನಡ ಸೇನೆ ಕಾಂಗ್ರೆಸ್ ಬಿಎಸ್‌ಪಿ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.