ADVERTISEMENT

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ: ರಾಜೇಗೌಡ ಆರೋಪ

ಕೇಂದ್ರ –ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 5:16 IST
Last Updated 29 ಮೇ 2022, 5:16 IST
ನರಸಿಂಹರಾಜಪುರದಲ್ಲಿ ಶನಿವಾರ ಕಾಂಗ್ರೆಸ್ ತಾಲ್ಲೂಕು ಘಟಕದ ವತಿಯಿಂದ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಯಿತು. ಶಾಸಕ ಟಿ.ಡಿ.ರಾಜೇಗೌಡ, ಡಾ.ಕೆ.ಪಿ.ಅಂಶುಮಂತ್, ಜುಬೇದಾ, ಪ್ರಶಾಂತ್ ಶೆಟ್ಟಿ, ಹನೀಫ್, ಉಪೇಂದ್ರ ಇದ್ದರು.
ನರಸಿಂಹರಾಜಪುರದಲ್ಲಿ ಶನಿವಾರ ಕಾಂಗ್ರೆಸ್ ತಾಲ್ಲೂಕು ಘಟಕದ ವತಿಯಿಂದ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳ ವಿರುದ್ಧ ಪ್ರತಿಭಟನೆ ನಡೆಯಿತು. ಶಾಸಕ ಟಿ.ಡಿ.ರಾಜೇಗೌಡ, ಡಾ.ಕೆ.ಪಿ.ಅಂಶುಮಂತ್, ಜುಬೇದಾ, ಪ್ರಶಾಂತ್ ಶೆಟ್ಟಿ, ಹನೀಫ್, ಉಪೇಂದ್ರ ಇದ್ದರು.   

ನರಸಿಂಹರಾಜಪುರ: ‘ಬಗರ್ ಹುಕುಂ ದಾಖಲೆಗಳನ್ನು ತಿದ್ದಿ ನ್ಯಾಯಾಲಯದಲ್ಲಿ ಮೊಕದ್ದಮೆ ಎದುರಿಸುತ್ತಿರುವ, ಭ್ರಷ್ಟಾಚಾರದಲ್ಲಿ ಮುಳುಗಿರುವ ಮಾಜಿ ಶಾಸಕ ಡಿ.ಎನ್. ಜೀವರಾಜ್‌ಗೆ ನನ್ನ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ’ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಭ್ರಷ್ಟಾಚಾರ, ಗುತ್ತಿಗೆದಾರರಿಂದ ಶೇ 40ರಷ್ಟು ಕಮಿಷನ್ ಪಡೆಯುತ್ತಿರುವ ಆರೋಪದ ವಿರುದ್ಧ ಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್ ತಾಲ್ಲೂಕು ಘಟಕದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಸಮಿಶ್ರ ಸರ್ಕಾರದಿಂದ ₹ 22 ಕೋಟಿ ಅನುದಾನ ಮಂಜೂರು ಆಗಿತ್ತು. ಇದರಲ್ಲಿ ₹ 15 ಕೋಟಿ ಬಿಡುಗಡೆಯಾಯಿತು. ಈ ಹಣವನ್ನು ಸಹ ಮಾಜಿ ಶಾಸಕರು ತಮ್ಮ ಪ್ರಭಾವ ಬಳಸಿ ಶಿಕಾರಿಪುರಕ್ಕೆ ವರ್ಗಾವಣೆ ಮಾಡಿಸಿದರು. ಶೃಂಗೇರಿ ಕ್ಷೇತ್ರದಲ್ಲಿ ಮಾಜಿ ಶಾಸಕರ ಶಿಫಾರಸಿನಿಂದ ಬಂದ ಭ್ರಷ್ಟ ಅಧಿಕಾರಿಗಳು ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ‘ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರೇ ಇಲ್ಲ. ಕ್ಷೇತ್ರದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ರಾಜ್ಯದಾದ್ಯಂತ ಶೇ 40ರಷ್ಟು ಕಮಿಷನ್ ದಂಧೆ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಫಾರಂ 50, 53ರಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲಾಗಿತ್ತು. ಪ್ರಸ್ತುತ ಬಿಜೆಪಿ ಸರ್ಕಾರವೇ ಜಿಲ್ಲಾಧಿಕಾರಿ ಮೂಲಕ ಆದೇಶ ಮಾಡಿದ್ದು ಯಾವುದೇ ಕಡತವನ್ನು ಅರಣ್ಯ ಇಲಾಖೆ ಒಪ್ಪಿಗೆ ಇಲ್ಲದೆ ಹಕ್ಕುಪತ್ರ ಮಂಜೂರು ಮಾಡುವಂತಿಲ್ಲ. ಶಾಸಕ ಟಿ.ಡಿ.ರಾಜೇಗೌಡರು ಈ ವಿಚಾರದ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಆದರೆ 15 ವರ್ಷ ಶಾಸಕರಾಗಿದ್ದ ಡಿ.ಎನ್. ಜೀವರಾಜ್ ತಮ್ಮ ಜವಾಬ್ದಾರಿ ಮರೆತಿದ್ದಾರೆ’ ಎಂದರು.

ಕೊಪ್ಪ ತಾಲ್ಲೂಕು ಘಟಕದ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ‘ಶೃಂಗೇರಿ ಕ್ಷೇತ್ರದಲ್ಲಿ ನಡೆದ ಎಲ್ಲ ಭ್ರಷ್ಟಾಚಾರಗಳ ಆರೋಪದ ಪಟ್ಟಿಯಲ್ಲಿ ಬಹುತೇಕ ಬಿಜೆಪಿ ಕಾರ್ಯಕರ್ತರು ಇದ್ದಾರೆ. ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಬಂದರೂ ಸಹ ಅದಕ್ಕೆ ಮಾಜಿ ಶಾಸಕರು ಅಡ್ಡಗಾಲು ಹಾಕುವ ಕೆಲಸ ಮಾಡುತ್ತಿದ್ದಾರೆ’ ಎಂದರು.

ಮುಖಂಡರಾದ ಪಿ.ಆರ್.ಸದಾಶಿವ, ಎಚ್.ಎಂ.ಸತೀಶ್, ಚಂದ್ರಮ್ಮ, ರೋಹಿತ್ ಮಾತನಾಡಿದರು. ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಗೇರ್ ಬೈಲ್ ನಟರಾಜ್, ಮುಖಂಡರಾದ ಈ.ಸಿ.ಜೋಯಿ, ಬಿ.ಸಿ.ಮಂಜುನಾಥ್, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂತೋಷ್, ಬಿ.ವಿ.ಉಪೇಂದ್ರ, ಜುಬೇದಾ, ಪ್ರಶಾಂತ್ ಶೆಟ್ಟಿ, ಎಸ್,ಡಿ.ರಾಜೇಂದ್ರ, ಕೆ.ಎಂ.ಸುಂದರೇಶ್, ಎಲ್ದೋ, ಸಾಜು, ಬೆನ್ನಿ, ಸುನಿಲ್ ಕುಮಾರ್, ನೆಲಗದ್ದೆ ಕಿರಣ್, ಹನೀಫ್, ಮೇಘ, ಸುರಯ್ಯಬಾನು ಇದ್ದರು. ನೀರಿನ ಟ್ಯಾಂಕ್ ವೃತ್ತದಿಂದ ಪಟ್ಟಣ ಪಂಚಾಯಿತಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.