ಶೃಂಗೇರಿ: ಪಟ್ಟಣದ ಸಾರ್ವಜನಿಕ ಶೌಚಗೃಹಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು, ಪ್ರಕೃತಿ ಕರೆಗೆ ಗೋಡೆಯೇ ಶೌಚಾಲಯ ಎನಿಸಿಕೊಂಡಿದೆ. ಕಳೆದ ವರ್ಷ ನಗರೋತ್ಥಾನ ಯೋಜನೆಯಡಿ ಮೀಸಲಿಟ್ಟಿದ್ದ ಅನುದಾನ ಇನ್ನೂ ಬಳಕೆಯಾಗದೆ ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿದೆ.
ಪಟ್ಟಣದ ಗಾಂಧಿ ಮೈದಾನ, ಕುವೆಂಪು ಬಸ್ ನಿಲ್ದಾಣ, ಸಂತೆ ಮಾರುಕಟ್ಟೆ, ಕೆ.ವಿ.ಆರ್ ರಸ್ತೆಯ ಬಳಿ, ಮಿನಿ ಬಸ್ ನಿಲ್ದಾಣ ಹಾಗೂ ಪ್ರವೇಶ ದ್ವಾರದ ಬಳಿ ಇರುವ ಶೌಚಗೃಹಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೆ.ವಿ.ಆರ್ ರಸ್ತೆ ಬಳಿ ಇರುವ ಶೌಚಗೃಹ ನಿರ್ವಹಣೆ ಇಲ್ಲದೆ, ನೀರಿನ ವ್ಯವಸ್ಥೆಯೂ ಇಲ್ಲದೇ ಇಡೀ ವಾತಾವರಣ ದುರ್ನಾತದಿಂದ ಕೂಡಿದೆ. ಪಟ್ಟಣದಲ್ಲಿರುವ ಶೌಚಗೃಹಗಳು ಇಂತಹ ದುಃಸ್ಥಿತಿ ಇದ್ದರೂ ಪಟ್ಟಣ ಪಂಚಾಯಿತಿ ಮಾತ್ರ ತನಗೆ ಸಂಬಂಧಿಸಿದ್ದೇ ಅಲ್ಲ ಎಂದು ಮೌನವಾಗಿದೆ ಎಂದಾದರೆ ಇದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಲಕ್ಷಾಂತರ ರೂ. ಅನುದಾನ ಬಳಸಿ ನಿರ್ಮಿಸಿರುವ ಶೌಚಗೃಹಗಳು ನಿರ್ವಹಣೆ ಇಲ್ಲದೆ ದುಃಸ್ಥಿತಿಗೆ ತಲುಪಿರುವುದು ನಿಜಕ್ಕೂ ಅಚ್ಚರಿ ತಂದಿದೆ. ಪಟ್ಟಣದ ಸಂತೆ ಮಾರುಕಟ್ಟೆ ಬಳಿ ಇರುವ ಶೌಚಗೃಹವು ಇದ್ದರೂ ಇಲ್ಲದಂತಾಗಿದೆ. ಯಾವಾಗಲೂ ಜನನಿಬೀಡ ಪ್ರದೇಶವಾಗಿದ್ದು, ಸೋಮವಾರ ನಡೆಯುವ ಸಂತೆ ದಿನ ವ್ಯಾಪಾರಿಗಳು, ಗ್ರಾಹಕರು ಕಟ್ಟಡದ ಹೊರಭಾಗದಲ್ಲೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಇನ್ನೂ ಬೈಪಾಸ್ ರಸ್ತೆ ಬಳಿ ಇರುವ ಶೌಚಗೃಹಗಳ ಬಗ್ಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಸದಾ ಮೂಗು ಮುಚ್ಚಿಕೊಂಡೇ ಹೋಗಬೇಕಾದ ದಾರುಣ ಸ್ಥಿತಿ ಇಲ್ಲಿದೆ. ಪಟ್ಟಣದ ಶುಚಿತ್ವ ಕಾಪಾಡಿಕೊಳ್ಳಬೇಕಾದ ಅಗತ್ಯವಿದ್ದು ಸಂಬಂಧಪಟ್ಟವರು ಇದನ್ನು ಮನಗಂಡರೆ ಮಾತ್ರ ಇಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಸಾಧ್ಯ ಎನ್ನುತ್ತಾರೆ ಸಾರ್ವಜನಿಕರು.
ಈಗಾಗಲೇ ಪಟ್ಟಣದಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿದ್ದು, ಇಲಾಖೆ ಇತ್ತ ಗಮನಹರಿಸಿ ತಕ್ಷಣ ಪೂರಕ ವ್ಯವಸ್ಥೆ ಮತ್ತು ಶುಚಿತ್ವ ಕಾಪಾಡಬೇಕು. ಗಾಂಧಿ ಮೈದಾನಕ್ಕೆ ತೆರಳುವ ಬೈಪಾಸ್ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಪಟಣದ ಮುಖ್ಯ ಬೀದಿಯ ಈಶ್ವರಗಿರಿ ಎದುರಿನ ಗಾಂಧಿ ಮೈದಾನಕ್ಕೆ ತೆರಳುವ ಪಕ್ಕದಲ್ಲೆ ಇರುವ ರಾಜಕಾಲುವೆಯಲ್ಲಿ ಹರಿಯುವ ತ್ಯಾಜ್ಯ ನೀರು ತುಂಗಾನದಿಗೆ ಸೇರುತ್ತಿದೆ. ಕಳೆದ 2-3 ವರ್ಷಗಳ ಹಿಂದೆ ಅತಿವೃಷ್ಟಿಯಿಂದಾಗಿ ಕೆಲವು ರಸ್ತೆಯೇ ಸಂಪೂರ್ಣ ಕುಸಿತವಾಗಿ ಹೊಂಡಗುಂಡಿ ಬಿದ್ದಿದ್ದು, ಜನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎನ್ನುತ್ತಾರೆ ವಾಹನ ಸವಾರರು.
ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಈಗ ಚುನಾವಣಾ ಸಮಯ ಸೂಕ್ತ ಕ್ರಮ ಕೈಗೊಳ್ಳುವಂತಿಲ್ಲ. ಚುನಾವಣೆ ಮುಗಿದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಸಿದ್ಧ ಉತ್ತರ ಸಿಗುತ್ತದೆ. ಪಟ್ಟಣದಲ್ಲಿರುವ ಶೌಚಗೃಹಗಳಿಗೆ ಕಾಯಕಲ್ಪ ನೀಡಿ ಪಾಳುಬಿದ್ದ ಶೌಚಗೃಹ ಕಟ್ಟಡಗಳನ್ನು ದುರಸ್ತಿಗೊಳಿಸಿ ಸೂಕ್ತ ನಿರ್ವಹಣೆ ಮಾಡಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದ್ದು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ವ್ಯಾಪಾರಸ್ಥರಾದ ಕೇಶವ ದೂರಿದ್ದಾರೆ.
ಶೃಂಗೇರಿ ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಸಮುದಾಯ ಭವನ ಆಟೊ ನಿಲ್ದಾಣ ಮೀನು ಮತ್ತು ಸಂತೆ ಮಾರುಕಟ್ಟೆ ಶುದ್ಧಗಂಗಾ ಘಟಕದ ಅಭಿವೃದ್ಧಿಗಾಗಿ ನಗರೋತ್ಧಾನ ಯೋಜನೆ ಅಡಿಯಲ್ಲಿ ₹3.49 ಕೋಟಿ ಅನುದಾನ ಮೀಸಲಿಟ್ಟಿದ್ದು ಕ್ರಿಯಾಯೋಜನೆ ಮಂಜೂರಾಗಿ ಜಿಲ್ಲಾಧಿಕಾರಿಯಿಂದ ಟೆಂಡರ್ ಪ್ರಕ್ರಿಯೆ ಹಂತ ಮುಗಿದು ಕಾಮಗಾರಿ ನಡೆಸಲು ಆದೇಶವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.