ADVERTISEMENT

ಬೀರೂರು | ಜಿಗಣೇಹಳ್ಳಿ ಸರ್ಕಾರಿ ಶಾಲೆಗೆ ‘ಪುಷ್ಟಿ’: ವಿದ್ಯಾರ್ಥಿಗಳ ಕೊರತೆ

ಬಾಲು ಮಚ್ಚೇರಿ
Published 10 ಏಪ್ರಿಲ್ 2025, 7:04 IST
Last Updated 10 ಏಪ್ರಿಲ್ 2025, 7:04 IST
ಬೀರೂರು ಶೈಕ್ಷಣಿಕ ವಲಯದ ಜಿಗಣೇಹಳ್ಳಿಯ ನೇತಾಜಿ ಸುಭಾಷ್ ಚಂದ್ರ ಭೋಸ್ ಸರ್ಕಾರಿ ಪ್ರೌಢಶಾಲೆ
ಬೀರೂರು ಶೈಕ್ಷಣಿಕ ವಲಯದ ಜಿಗಣೇಹಳ್ಳಿಯ ನೇತಾಜಿ ಸುಭಾಷ್ ಚಂದ್ರ ಭೋಸ್ ಸರ್ಕಾರಿ ಪ್ರೌಢಶಾಲೆ   

ಬೀರೂರು/ಕಡೂರು: ಬೀರೂರು ಶೈಕ್ಷಣಿಕ ವಲಯಕ್ಕೆ ಸೇರಿರುವ ಜಿಗಣೇಹಳ್ಳಿಯ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾಗಿದೆ. ಶಾಲೆಯ ಅಭಿವೃದ್ಧಿ ಸಮಿತಿಯ ಸಮರ್ಪಕ ನಿರ್ವಹಣೆಗಾಗಿ ರಾಜ್ಯ ಸರ್ಕಾರದ ‘ಪುಷ್ಟಿ’ ಪ್ರಶಸ್ತಿ ದೊರೆತಿದೆ.

1996ರಲ್ಲಿ ಆರಂಭವಾದ ಈ ಶಾಲೆಯ ಮುಖ್ಯ ಕಟ್ಟಡ ನಕ್ಷತ್ರಾಕಾರದಲ್ಲಿದ್ದು, ಆಧುನಿಕ ಸೌಲಭ್ಯ, ಸ್ಮಾರ್ಟ್ ಕ್ಲಾಸ್, ಪ್ರೊಜೆಕ್ಟರ್ ರೂಮ್‌, ಮಲ್ಟಿಮೀಡಿಯಾ ಕೊಠಡಿ, ವಿಶಾಲ ಕ್ರೀಡಾಂಗಣ, ಗ್ರಂಥಾಲಯ, ಸಭಾಂಗಣ ಹೊಂದಿದೆ.

2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ‘ಮಿಷನ್ -25’ ಎಂಬ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಆಸಕ್ತಿ ಮತ್ತು ಸಾಮರ್ಥ್ಯ ಗಮನಿಸಿ, ತರಬೇತಿ ನೀಡುವ, ವಿದ್ಯಾರ್ಥಿ ಸ್ನೇಹಿ ವಾತಾವರಣ ಶಾಲೆಯಲ್ಲಿದೆ. ಶಿಕ್ಷಕರೂ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಶಕ್ತಿ ಮೀರಿ ಕಾರ್ಯ ನಿರ್ವಹಿಸುತ್ತಾರೆ.

ADVERTISEMENT

‘ಶಾಲಾಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಕೊಡುಗೆ ದೊಡ್ಡದು. ಮಕ್ಕಳಿಗೆ ಅಗತ್ಯವಾದ ಕುಡಿಯುವ ನೀರಿನ ಘಟಕ, ಯುಪಿಎಸ್‌ಗಳನ್ನು ಹಿರಿಯ ವಿದ್ಯಾರ್ಥಿಗಳೇ ನೀಡಿದ್ದಾರೆ’ ಎಂದು ಮುಖ್ಯಶಿಕ್ಷಕ ಎ.ಜಿ. ರಾಜಶೇಖರ್ ತಿಳಿಸಿದರು.

ಇಷ್ಟೆಲ್ಲ ಸೌಲಭ್ಯಗಳಿದ್ದರೂ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಸದ್ಯ ಈ ಶಾಲೆಯಲ್ಲಿ 50 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಐದು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ.

ಸಾಮಾಜಿಕವಾಗಿ ಹಿಂದುಳಿದಿರುವ ತೆಲುಗುಗೌಡ ಜನಾಂಗದ ವಿದ್ಯಾರ್ಥಿಗಳೇ ಇಲ್ಲಿ ಹೆಚ್ಚಿದ್ದು, ಇವರ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಸಮಾಜದ, ಸಹಕಾರಿ ಮುಖಂಡ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ಶಾಲೆಯ ಅಭಿವೃದ್ಧಿಗೆ ನಮ್ಮೆಲ್ಲ ಸಮಾನಮನಸ್ಕರ ಶ್ರಮ ನಿರಂತರವಾಗಿರುತ್ತದೆ. ಶಾಲೆಯ ದಾಖಲಾತಿ ಹೆಚ್ಚಳಕ್ಕೆ ಚಿಂತನೆ ನಡೆಸಬೇಕಿದೆ
–ಶಿವಣ್ಣ ಅಧ್ಯಕ್ಷ ಶಾಲಾಭಿವೃದ್ಧಿ ಸಮಿತಿ
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಶಾಲೆ ರೈತಾಪಿ ವರ್ಗದವರಿಗೆ ಅಚ್ಚುಮೆಚ್ಚಿನ ಶಾಲೆಯಾಗಿದೆ
–ರುದ್ರಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಬೀರೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.