ADVERTISEMENT

ಬಾಳೆಹೊನ್ನೂರು | ಪಾತ್ರದಿಂದ ದೊಡ್ಡವರಾಗಿ: ರಂಭಾಪುರಿ ಸ್ವಾಮೀಜಿ

ಶ್ರಾವಣ ಪುರಾಣ ಪ್ರವಚನ ಧರ್ಮ ಸಮಾರಂಭ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 6:52 IST
Last Updated 16 ಆಗಸ್ಟ್ 2025, 6:52 IST
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಇಷ್ಟಲಿಂಗ ಪೂಜಾ ಸಂದರ್ಭದಲ್ಲಿ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅವರು ‘ಶ್ರೀ ಜಗದ್ಗುರು ರೇಣುಕಾಚಾರ್ಯ ಪೂಜಾ ವೃತಂ’ ಕೃತಿ ಬಿಡುಗಡೆ ಮಾಡಿದರು
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಇಷ್ಟಲಿಂಗ ಪೂಜಾ ಸಂದರ್ಭದಲ್ಲಿ ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅವರು ‘ಶ್ರೀ ಜಗದ್ಗುರು ರೇಣುಕಾಚಾರ್ಯ ಪೂಜಾ ವೃತಂ’ ಕೃತಿ ಬಿಡುಗಡೆ ಮಾಡಿದರು   

ರಂಭಾಪುರಿ ಪೀಠ: ‘ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದೇ ಮೇಲು. ಜೀವನದ ಅಮೂಲ್ಯ ಆಸ್ತಿ ಅನುಭವ. ಮನುಷ್ಯ ಬರೀ ಗಾತ್ರದಿಂದ ದೊಡ್ಡವರಾಗದೇ ಪಾತ್ರದಿಂದ ದೊಡ್ಡವರಾಗಬೇಕು’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.

ರಂಭಾಪುರಿ ಪೀಠದಲ್ಲಿ ಶ್ರಾವಣ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನುಷ್ಯನ ಕೈಯಲ್ಲಿ ಏನೂ ಇರುವುದಿಲ್ಲ. ಆದರೆ ಎಲ್ಲವೂ ಇದೆ ಅನ್ನುವ ಭ್ರಮೆಯಲ್ಲಿರುತ್ತಾನೆ. ಭಗವಂತನ ಕೈಯಲ್ಲಿ ಎಲ್ಲವೂ ಇದ್ದರೂ ಆತ ಸುಮ್ಮನಿರುತ್ತಾನೆ. ಬರೆದ ಅಕ್ಷರ ತಪ್ಪಾದರೆ ತಿದ್ದಬಹುದು. ಆದರೆ ಬದುಕೇ ತಪ್ಪಾದರೆ ತಿದ್ದುವುದು ಕಷ್ಟ. ಮನುಷ್ಯನಿಗೆ ಮರಣ ಇರುತ್ತದೆ. ಆದರೆ ಒಳ್ಳೆಯತನಕ್ಕೆ ಮರಣ ಇರುವುದಿಲ್ಲ. ಇತರರಿಗಾಗಿ ಯಾರು ಮರಗುತ್ತಾರೋ ಅವರೇ ನಿಜವಾಗಿ ಬದುಕಿರುವವರು. ವ್ಯಕ್ತಿತ್ವ ಎನ್ನುವುದು ಆಸ್ತಿ–ಅಂತಸ್ತಿನಲ್ಲಿ ಇರುವುದಿಲ್ಲ ಎಂದರು.

ADVERTISEMENT

ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯರು ಮಾತನಾಡಿ, ಹಣ ಕಳೆದರೆ ಗಳಿಸಬಹುದು. ಮಾತಿನಿಂದ ಕಳೆದುಕೊಂಡ ಸಂಬಂಧ ತಿರುಗಿ ಪಡೆಯಲಾಗದು. ಮನುಷ್ಯನ ಗಮನ ಗುರಿಯತ್ತ ಇರಬೇಕೇ ಹೊರತು ಅಡೆತಡೆಯ ಮೇಲಲ್ಲ. ನೋವು ಕೊಡುವವರು ಹಾಗೆ ಉಳಿಯುತ್ತಾರೆ. ನೋವು ಉಂಡವರು ಜ್ಞಾನಿಗಳಾಗುತ್ತಾರೆ. ಅರಿವಿನ ಕಣ್ಣು ಗುರು. ಗುರುವಿನಿಂದ ಗುರಿ ಹಿಡಿದು ನಡೆದಾಗ ಬಾಳು ಸಾರ್ಥಕಗೊಳ್ಳುತ್ತದೆ ಎಂದರು.

ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆ ಇಷ್ಟಲಿಂಗ ಮಹಾಪೂಜಾ ನೆರವೇರಿತು. ‘ಶ್ರೀ ಜಗದ್ಗುರು ರೇಣುಕಾಚಾರ್ಯ ಪೂಜಾ ವೃತಂ’ ಕೃತಿಯನ್ನು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಚಿಂಚಣಸೂರು ಕಲ್ಮಠದ ಸಿದ್ಧಮಲ್ಲ ಶಿವಾಚಾರ್ಯ, ಹುಡಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯ, ಮಿಣಜಗಿ ಚಿದಾನಂದ ದೇವರು, ಗುರುಕುಲದ ಕುಲಪತಿ ಸಿದ್ಧಲಿಂಗಯ್ಯ ಹಿರೇಮಠ, ವಿಠಲಾಪುರ ಹಿರೇಮಠ ಗಂಗಾಧರಸ್ವಾಮಿ, ಶಿಕ್ಷಕ ವೀರೇಶ ಕುಲಕರ್ಣಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.